ಕವರ್ ಸ್ಟೋರಿ

BantwaL: ಫುಟ್ ಪಾತ್ ಇದ್ರೂ ಇಲ್ಲದಂತೆ . ನಡೆಯುವವರಿಗೆ ಇಲ್ಲಿ ಬೆಲೆ ಇಲ್ಲದಂಥ ಪರಿಸ್ಥಿತಿ

ವಾಹನಗಳೇ ಕಷ್ಟದಲ್ಲಿ ಹೋಗ್ತವೆ, ಇನ್ನು ನಡ್ಕೊಂಡು ಹೋಗೋದು ಹೇಗೆ? ಬಂಟ್ವಾಳ ಪುರಸಭಾ ವ್ಯಾಪ್ತಿಯ ಬಿ.ಸಿ.ರೋಡ್, ಬಂಟ್ವಾಳ, ಪಾಣೆಮಂಗಳೂರುಗಳಲ್ಲಿ ನಡೆದುಕೊಂಡು ಹೋಗುವವರು ಮನಸ್ಸಿನಲ್ಲೇ ಆಡುವ ಮಾತಿದು.

ಜಾಹೀರಾತು

ಹೆಚ್ಚಿನವರಿಗೆ ಫುಟ್ ಪಾತ್ ಎಂಬುದು ಅಪರಿಚಿತ ಶಬ್ದ. ವಾಕಿಂಗ್ (ನಡೆದುಕೊಂಡು) ಹೋಗುವುದು ಅಸಾಧ್ಯದ ಮಾತು ಎಂಬಂಥ ಪರಿಸ್ಥಿತಿ ಇಲ್ಲಿದೆ. ಸಂಜೆ ವೇಳೆ ನಡೆದುಕೊಂಡು ಹೋಗುತ್ತಿದ್ದವರನ್ನು ವಾಹನ ಗುದ್ದಿದ ಸಾಕಷ್ಟು ಉದಾಹರಣೆಗಳು ಇವೆ. ಖಾಸಗಿ ಹಾಗೂ ಸರಕಾರಿ ಕಟ್ಟಡಗಳಲ್ಲಿ ಪಾರ್ಕಿಂಗ್ ಗೆಂದು ಪ್ರತ್ಯೇಕ ಜಾಗ ಇಲ್ಲದ ಕಾರಣ ರಸ್ತೆ ಬದಿಯೇ ವಾಹನಗಳನ್ನು ನಿಲ್ಲಿಸಬೇಕು.  ಹಲವು ಕಡೆ ಅಂಗಡಿಗಳ ಮಾಡು ರಸ್ತೆಯ ಬುಡದವರೆಗೆ ಬರುತ್ತದೆ. ರಸ್ತೆಯಿಂದ ನೇರವಾಗಿ ಮಳಿಗೆಗಳಿಗೆ ಹೋಗುವ ಪರಿಸ್ಥಿತಿಯೂ ಉಂಟು. ರಸ್ತೆಯಲ್ಲೇ ನಿಂತು ಅಂಗಡಿ ಕಡೆ ಮುಖ ಮಾಡಿ ವ್ಯಾಪಾರ ಮಾಡುವ ದೃಶ್ಯಗಳನ್ನು  ನೀವಿಲ್ಲಿ ನೋಡಬಹುದು.

ಹಾಗೆ ನೋಡಿದರೆ, ನಾರಾಯಣಗುರು ವೃತ್ತದಿಂದ ಗೂಡಿನಬಳಿಯ ಪಿಯು ಕಾಲೇಜುವರೆಗೆ ಎರಡೂ ಬದಿ ವಾಕಿಂಗ್ ಟ್ರ್ಯಾಕ್ ಇದೆ. ಬಿ.ಸಿ.ರೋಡಿನ ಎಲ್.ಡಿ. ಬ್ಯಾಂಕ್ ಪಕ್ಕದಿಂದ ತೋಟಗಾರಿಕಾ ಇಲಾಖೆವರೆಗೆ ನಿರ್ಮಾಣಗೊಂಡ ಹೊಸ ರಸ್ತೆಯ ಒಂದು ಬದಿ ಫುಟ್ ಪಾತ್ ಇದೆ. ಆದರೆ ಅದು ಹೆಸರಿಗಷ್ಟೇ ಇದೆ.

ಈ ಪ್ರದೇಶಗಳಲ್ಲಿ ರಸ್ತೆ ಅಭಿವೃದ್ಧಿ ಸಹಿತ ಬದಲಾವಣೆಗಳ ಪ್ರಸ್ತಾಪಗಳು ಬಂದಾಗಲೆಲ್ಲಾ ಭಾರೀ ಚರ್ಚೆಗಳು ನಡೆದು ತಾರ್ಕಿಕ ಅಂತ್ಯ ದೊರಕದೆ ಸಭೆಗಳು ಅಂತ್ಯಗೊಂಡಿದ್ದವು. ನಗರ ಸೌಂದರ್ಯವೃದ್ಧಿಗೆ ಕಾಲಕಾಲಕ್ಕೆ ಹೊರಟ ಪ್ರಯತ್ನಗಳೂ ದೊಡ್ಡ ಯಶಸ್ಸು ಕಂಡಿಲ್ಲ.

ಪಾರ್ಕಿಂಗ್ ಗೂ ಜಾಗವಿಲ್ಲ

ದಶಕಗಳಿಂದ ಇತ್ತೀಚಿನವರೆಗೂ ಇಲ್ಲಿ ನಿರ್ಮಾಣವಾಗಿರುವ ಬಹುತೇಕ ಖಾಸಗಿ ಹಾಗೂ ಸರಕಾರಿ ಕಟ್ಟಡಗಳ ತಳಭಾಗದಲ್ಲಿ ಪಾರ್ಕಿಂಗ್ ಗೆಂದು ಜಾಗ ಬಿಟ್ಟಿಲ್ಲ. ಹೀಗಾಗಿ ಅವುಗಳ ಮುಂಭಾಗ ಇರುವ ಸರಕಾರಿ ಭೂಮಿ ಅಥವಾ ರಸ್ತೆಯೇ ವಾಹನ ನಿಲುಗಡೆಯ ಜಾಗವಾಗಿರುತ್ತದೆ. ಯತಾರ್ಥವಾಗಿ ಇದು ಪಾದಚಾರಿಗಳಿಗೆ ಮೀಸಲಿರುವ ಜಾಗ. ಕೆಲವು ಕಡೆ ಫುಟ್ ಪಾತ್ ಗಳು ರಚನೆಗೊಂಡಿದ್ದರೂ ಅವು ಕಾಣಿಸುವುದಿಲ್ಲ. ಕಾಲಕಾಲಕ್ಕೆ ಹೀಗೆ ಮಾಡುತ್ತಾ ಬಂದದ್ದನ್ನು ನೋಡಿಯೂ ನೋಡದ ಹಾಗೆ ಬಿಟ್ಟ ಫಲ ಈಗ ಅನುಭವಿಸಬೇಕಾಗಿದೆ

ಇಲ್ಲಿ ನಡ್ಕೊಂಡು ಹೋಗೋದು ಎಲ್ಲಿ?

ಬಂಟ್ವಾಳ ಪುರಸಭಾ  ವ್ಯಾಪ್ತಿಯ ಈ ಜಾಗಗಳಲ್ಲಿ ವಾಹನಗಳು ಹೋಗುವ ರಸ್ತೆ ಹಾಗೂ ಪಕ್ಕದ ಮಳಿಗೆಗಳ ಮಧ್ಯೆ ನಡೆದುಕೊಂಡು ಹೋಗಲು ಜಾಗ ಇಲ್ಲದ ಪ್ರದೇಶಗಳಲ್ಲಿ ಮುಖ್ಯವಾದವು ಇವು.

  • ಬಂಟ್ವಾಳ ಪೇಟೆಯ ಬಹುತೇಕ ಎಲ್ಲ ಪ್ರದೇಶ
  • ಬಿ.ಸಿ.ರೋಡ್ ಸರ್ವೀಸ್ ರಸ್ತೆ
  • ಪಾಣೆಮಂಗಳೂರು ಪೇಟೆಯ ಬಹುತೇಕ ಎಲ್ಲ ಪ್ರದೇಶ
  • ಕೈಕಂಬದಿಂದ ಮೊಡಂಕಾಪುವರೆಗೆ ಹೋಗುವ ದಾರಿ
  • ಬಿ.ಸಿ.ರೋಡ್ ಕೈಕಂಬದಿಂದ ನಾರಾಯಣಗುರು ವೃತ್ತದವರೆಗಿನ ಇಕ್ಕೆಲಗಳು
  • ಬಿ.ಸಿ.ರೋಡ್ ಅನ್ನಪೂರ್ಣೇಶ್ವರಿ ಸಮೀಪದಿಂದ ಕೈಕುಂಜೆವರೆಗಿನ ರಸ್ತೆ

 

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.