ತುಂಬೆ ಬಳಿ ಆಗಸ್ಟ್ 14ರಂದು ದನ ಕಳವು ಮಾಡಿ ವಧೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂಧಿಸಿದ್ದು, ಈ ಸಂದರ್ಭ ವಿಚಾರಣೆ ವೇಳೆ ಉಪ್ಪಿನಂಗಡಿ ಪೊಲೀಸ್ ಠಾಣೆಯ ಪೆರ್ನೆ ಸಮೀಪ ನಡೆದ ದನಕಳವು ಹಾಗೂ ಹತ್ಯೆ ಪ್ರಕರಣದಲ್ಲೂ ಭಾಗಿಯಾಗಿರುವುದಾಗಿ ತಿಳಿಸಿದ್ದಾಗಿ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದು, ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.
ಉಳ್ಳಾಲ ಚೆಂಬುಗುಡ್ಡೆ ನಿವಾಸಿ ಇರ್ಷಾದ್ (34), ಮಂಗಳೂರು ಕುದ್ರೋಳಿ ನಿವಾಸಿ ಮಹಮ್ಮದ್ ಮನ್ಸೂರ್ (48) ಮತ್ತು ಮಂಗಳೂರು ಕಣ್ಣೂರು ನಿವಾಸಿ ಅಬ್ದುಲ್ ಅಝೀಮ್ (18) ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
ಬಂಟ್ವಾಳ ಪೆರ್ನೆ ಗ್ರಾಮದದಲ್ಲಿ ಸೆ.4ರಂದು ರಾತ್ರಿ ಮನೆಯ ಬಳಿ ಹಟ್ಟಿಯಲ್ಲಿದ್ದ ಹಸುವನ್ನು ಕದ್ದೊಯ್ದು, ಹತ್ಯೆ ಮಾಡಲಾಗಿತ್ತು. ಮನೆ ಸಮೀಪ ಜಮೀನಿನಲ್ಲಿ ಅದರ ಅಂಗಾಂಗಗಳು ಬಿಸಾಡಿರುವುದು ಕಂಡುಬಂದಿತ್ತು. ಈ ಕುರಿತು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಿಂದು ಸಂಘಟನೆಗಳು ಸಾಕಷ್ಟು ಆಕ್ರೋಶ ವ್ಯಕ್ತಪಡಿಸಿದ್ದವು. ಶುಕ್ರವಾರ ಆರೋಪಿಗಳನ್ನು ದಸ್ತಗಿರಿ ಮಾಡಿ ವಿಚಾರಣೆ ನಡೆಸಿದ ವೇಳೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ದನ ಕಳವು ಹತ್ಯೆ ಪ್ರಕರಣದಲ್ಲೂ ಆರೋಪಿಗಳಾಗಿರುವುದು ತಿಳಿದುಬಂದಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.