ಬಿ.ಸಿ.ರೋಡು-ಅಡ್ಡಹೊಳೆ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಬಹುತೇಕ ಪೂರ್ಣಗೊಂಡು ವಾಹನಗಳ ಸರಾಗ ಸಾಗಾಟಕ್ಕೆ ಅವಕಾಶ ಸಿಕ್ಕಿದೆ. ಆದರೆ ಇನ್ನೂ ಕೂಡ ಕಲ್ಲಡ್ಕ ಹಾಗೂ ಮಾಣಿಯಲ್ಲಿ ಸರ್ವೀಸ್ ರಸ್ತೆಯ ಕಾಮಗಾರಿ ಪೂರ್ಣಗೊಂಡಿಲ್ಲ. ಮಂದಗತಿಯ ಕಾಮಗಾರಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಮೇಲ್ಸೇತುವೆ ಆರಂಭ ಮತ್ತು ಅಂತ್ಯದ ಕಲ್ಲಡ್ಕ ಕೆ.ಸಿ.ರೋಡ್‌ನಿಂದ ನರಹರಿ ಪರ್ವತದವರೆಗೆ ಹಾಗೂ ಪೂರ್ಲಿಪ್ಪಾಡಿ ಭಾಗದಲ್ಲಿ ಇನ್ನೂ ಕೂಡ ಸರ್ವೀಸ್ ರಸ್ತೆ ಕಾಮಗಾರಿ ಪೂರ್ಣಗೊಳ್ಳದೇ ಇರುವುದರಿಂದ ಸರಾಗ ಸಂಚಾರಕ್ಕೆ ಅವಕಾಶ ಸಿಕ್ಕಿಲ್ಲ.
ಕಾಮಗಾರಿಗಾಗಿ ಒಂದು ಬದಿಯಲ್ಲೇ ಎರಡೂ ಪಥದ ವಾಹನಗಳು ಸಾಗುವುದರಿಂದ ದೊಡ್ಡ ವಾಹನಗಳು ಎದುರು-ಬದುರಾದರೆ ಟ್ರಾಫಿಕ್ ಜಾಮ್ ಕಿರಿಕಿರಿ
ಬಸ್ಸುಗಳೂ ಒಮ್ಮೊಮ್ಮೆ ಬರುವುದಿಲ್ಲ:
ಕಿರಿದಾದ ಸರ್ವೀಸ್ ರಸ್ತೆಯಲ್ಲಿ ಎರಡೂ ಭಾಗದ ವಾಹನಗಳು ಸಾಗುತ್ತಿರುವುದರಿಂದ ತೊಂದರೆ ಉಂಟಾಗುತ್ತಿದೆ. ಬಸ್ಸುಗಳೂ ಒಮ್ಮೊಮ್ಮೆ ಫ್ಲೈಓವರ್ ನಲ್ಲೇ ಹೋಗುತ್ತವೆ. ಕಲ್ಲಡ್ಕ ಪೇಟೆಗೇ ಬರುವುದಿಲ್ಲ.
ಎರಡು ವಾರಗಳ ಕಾಲ ಮಳೆ ಬಿಡುವುದು ಪಡೆದುಕೊಂಡ ಸಂದರ್ಭದಲ್ಲೂ ಕಾಂಕ್ರೀಟ್ ಕಾಮಗಾರಿಗೆ ವೇಗ ಸಿಕ್ಕಿರಲಿಲ್ಲ. ಕೆಲವೊಂದು ಕಡೆ ಬೆಡ್ ಹಾಕಿರುವುದರಿಂದ ವಾಹನಗಳು ಹೊಂಡ ತುಂಬಿದ ರಸ್ತೆಯಲ್ಲಿ ಸಾಗುವುದು ತಪ್ಪಿದ್ದು, ಶೀಘ್ರ ಕಾಂಕ್ರೀಟ್ ಕಾಮಗಾರಿ ಮುಗಿಸಲು ಆಗ್ರಹ ಕೇಳಿ ಬರುತ್ತಿದೆ.
ನರಿಕೊಂಬಿಗೆ ಹೋಗಬೇಕಿದ್ರೆ, ಮೆಲ್ಕಾರ್ ಗೆ ಹೋಗಿ ಬರಬೇಕು!!!
ನರಿಕೊಂಬು ಕಡೆಗೆ ಹೋಗುವ ಸರ್ವೀಸ್ ರಸ್ತೆ ಕಾಂಕ್ರೀಟ್ ಹಾಕುವ ಕಾರ್ಯವಾಗಿದೆ. ಆದರೆ ಸಂಚಾರಕ್ಕೆ ತೆರೆದುಕೊಂಡಿಲ್ಲ. ಬಿ.ಸಿ.ರೋಡ್ ನಿಂದ ನರಿಕೊಂಬಿಗೆ ಬರಬೇಕು ಎಂದಾದರೆ, ನೇರವಾಗಿ ಫ್ಲೈಓವರ್ ನಲ್ಲಿ ಸಾಗಿ ಮೆಲ್ಕಾರ್ ಗೆ ಹೋಗಿ, ಅಲ್ಲಿ ಸರ್ವೀಸ್ ರಸ್ತೆಯಲ್ಲಿ ಹಿಂದಕ್ಕೆ ಬರಬೇಕು
ಇದು ವಾಹನ ಚಾಲಕರ ಗೊಂದಲಕ್ಕೆ ಕಾರಣವಾಗುತ್ತಿದೆ.