ಬಂಟ್ವಾಳ ಪುರಸಭೆ ಸಹಿತ ಹಲವೆಡೆ ಬೀದಿನಾಯಿಗಳಿಗೆ ಕಡಿವಾಣ ಹಾಕಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಪುರಸಭೆಯ ಜನನಿಬಿಡ ಪ್ರದೇಶದಲ್ಲೂ ಬೀದಿನಾಯಿಗಳು ಸಾರ್ವಜನಿಕರು, ಶಾಲಾ ಮಕ್ಕಳನ್ನು ಅಟ್ಟಾಡಿಸಿಕೊಂಡು ಬರುವ ಕುರಿತು ಹೆತ್ತವರೂ ಆತಂಕಿತರಾಗಿದ್ದಾರೆ. ಬಂಟ್ವಾಳ ಪೇಟೆ, ಬಿ.ಸಿ.ರೋಡ್ ಪೇಟೆ, ಬಸ್ ನಿಲ್ದಾಣ ಪ್ರದೇಶ, ಕೈಕಂಬದ ಫರ್ಲಿಯಾ ಪರಿಸರ, ಬಿ.ಸಿ,.ರೋಡ್ ನ ಕೈಕುಂಜ ಪರಿಸರ, ಪಾಣೆಮಂಗಳೂರು ಸಹಿತ ಪುರಸಭಾ ವ್ಯಾಪ್ತಿಯ ಹಲವು ಜನವಸತಿ ಪ್ರದೇಶಗಳಲ್ಲಿ ಬೀದಿನಾಯಿಗಳು ಠಳಾಯಿಸುತ್ತಿರುವುದು ಕಂಡುಬಂದಿದೆ.
ಸಣ್ಣ ಮಕ್ಕಳು ಶಾಲೆಯಿಂದ ಮರಳುವಾಗ ಹಿಂಬಾಲಿಸಿ ಕಚ್ಚಲು ಬರುವುದು ಕಂಡುಬರುತ್ತಿದೆ. ಬಿ.ಸಿ.ರೋಡ್ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಕುಳಿತುಕೊಳ್ಳಬೇಕಾದ, ಓಡಾಡಬೇಕಾದ ಜಾಗದಲ್ಲೆಲ್ಲಾ ಬೀದಿನಾಯಿಗಳೇ ಆಕ್ರಮಿಸಿಕೊಂಡಿವೆ. ಕೆಲವು ಬೇಜವಾಬ್ದಾರಿ ಅನಾಗರೀಕರು ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯುತ್ತಿದ್ದು, ಅವುಗಳನ್ನು ಎಳೆದಾಡುವ ಸಲುವಾಗಿ ಬೀದಿನಾಯಿಗಳು ಗುಂಪುಗೂಡಿ ಅವುಗಳ ಮೇಲೆ ಲಗ್ಗೆ ಇಡುವುದು ಒಂದಾದರೆ, ಮತ್ತೊಂದೆಡೆ, ನಡೆದುಕೊಂಡು ಹೋಗುವವರು ಕೈಯಲ್ಲಿ ಏನಾದರೂ ಚೀಲವನ್ನು ಹಿಡಿದುಕೊಂಡರೆ, ಅವುಗಳನ್ನು ಎಳೆಯಲು ನಾಯಿಗಳು ಹಿಂಬಾಲಿಸಿಕೊಂಡು ಬಂದು ಆತಂಕಕ್ಕೀಡುಮಾಡುತ್ತವೆ. ರಾತ್ರಿಯಾದೊಡನೆ ಇವುಗಳ ಕಾಟ ವಿಪರೀತಕ್ಕೆ ಹೋಗುತ್ತದೆ. ನಮಗೂ ನಾಯಿಗಳ ಕುರಿತು ಪ್ರೀತಿ, ಕಾಳಜಿ ಇದೆ. ಪ್ರಾಣಿಗಳ ಕುರಿತು ದಯೆ ಇದೆ. ಆದರೆ ಮಕ್ಕಳನ್ನು ಕಚ್ಚಲು ಬರುವ ನಾಯಿಗಳ ಸಂತಾನಶಕ್ತಿಹರಣ ಮಾಡುವುದು, ನಾಯಿಗಳು ವ್ಯಗ್ರರಾಗದಂತೆ ನಿಯಂತ್ರಿಸಬೇಕು ಎಂದು ಸ್ಥಳೀಯರು ಹೇಳುತ್ತಾರೆ.