ಸರಕಾರದ ಸವಲತ್ತುಗಳನ್ನು ದೊರಕಿಸಿಕೊಡಲು ಕೃಷಿಕ ಸಮಾಜ ಸಹಕಾರಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ವಿಧಾನಪರಿಷತ್ ಸದಸ್ಯ ಡಾ. ಮಂಜುನಾಥ ಭಂಡಾರಿ ಹೇಳಿದ್ದಾರೆ.ಬಿ.ಸಿ.ರೋಡಿನಲ್ಲಿ ನಿರ್ಮಿಸಲಾದ ಬಂಟ್ವಾಳ ತಾಲೂಕು ಕೃಷಿಕ ಸಮಾಜದ ಭವನ ಉದ್ಘಾಟನಾ ಸಮಾರಂಭದ ಸಭಾ ಕಾರ್ಯಕ್ರಮಕ್ಕೆ ಅಂಬೇಡ್ಕರ್ ಭವನದಲ್ಲಿ ಸೋಮವಾರ ಚಾಲನೆ ನೀಡಿ ಮಾತನಾಡಿದರು.
ಸಭಾಭವನವನ್ನು ಉದ್ಘಾಟಿಸಿದ ಮಾಜಿ ಸಚಿವ ಬಿ.ರಮಾನಾಥ ರೈ, ಇಂದು ಭತ್ತವಷ್ಟೇ ಅಲ್ಲ, ಕೃಷಿಕರು ಲಾಭದಾಯಕ ಬೆಳೆಗಳತ್ತ ಮನ ಮಾಡುತ್ತಿದ್ದು, ನಮ್ಮ ದಕ್ಷಿಣ ಕನ್ನಡ ಜಿಲ್ಲೆಯ ಜನರು ಅಡಕೆ ಬೆಳೆಯಿಂದ ಆರ್ಥಿಕವಾಗಿ ಸಬಲರಾಗಿದ್ದಾರೆ. ಇದೀಗ ಕಾಫಿ ಬೆಳೆಯೂ ಈ ಮಣ್ಣಿಗೆ ಸೂಕ್ತವಾಗುತ್ತಿದೆ ಎಂಬ ಕುರಿತು ಅಧ್ಯಯನಗಳು ನಡೆಯಬೇಕು ಎಂದರು.
ಕೃಷಿಕ ಸಮಾಜದ ಆಡಳಿತಾಧ್ಯಕ್ಷ ಮಂಜುನಾಥ ಗೌಡ ಮಾತನಾಡಿ, ಕೃಷಿಕರಿಗೆ ನೆರವಾಗುವ ಉದ್ದೇಶದಿಂದ ಆರಂಭಗೊಂಡ ಕೃಷಿಕ ಸಮಾಜ ಬಲಗೊಳ್ಳಲು ಸರಕಾರದ ಸಹಾಯ ಅತ್ಯಗತ್ಯ ಎಂದರು.
ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಮತಾ ಗಟ್ಟಿ, ಬಂಟ್ವಾಳ ಪುರಸಭಾಧ್ಯಕ್ಷ ಬಿ.ವಾಸು ಪೂಜಾರಿ ಲೊರೆಟ್ಟೊ, ಬುಡಾ ಅಧ್ಯಕ್ಷ ಬೇಬಿ ಕುಂದರ್, ಜಿಪಂ ಮಾಜಿ ಸದಸ್ಯ ಪದ್ಮಶೇಖರ ಜೈನ್, ಪ್ರಮುಖರಾದ ಎ.ಸಿ.ಭಂಡಾರಿ, ಕೃಷಿಕ ಸಮಾಜ ಜಿಲ್ಲಾಧ್ಯಕ್ಷ ವಿಜಯ ಕುಮಾರ ರೈ, ಕೋಶಾಧಿಕಾರಿ ಚಂದ್ರಾ ಕೋಲ್ಚಾರ್, ಕಟ್ಟಡ ನಿರ್ಮಾಣ ಸಮಿತಿ ಅಧ್ಯಕ್ಷ ಪದ್ಮನಾಭ ರೈ, ಪದಾಧಿಕಾರಿಗಳಾದ ರಮಾನಾಥ ವಿಟ್ಲ, ಆಲ್ಬರ್ಟ್ ಮಿನೇಜಸ್, ಕೃಷಿ ಸಹಾಯಕ ಕೃಷಿ ನಿರ್ದೇಶಕಿ ವೀಣಾ ಕೆ.ಆರ್, ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಜೋ ಪ್ರದೀಪ್ ಡಿಸೋಜ, ಕೃಷಿಕ ಸಮಾಜದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕೃಷಿಕ ಸಮಾಜದ ತಾಲೂಕು ಅಧ್ಯಕ್ಷ ಪದ್ಮರಾಜ ಬಲ್ಲಾಳ್ ಮಾವಂತೂರು ಸ್ವಾಗತಿಸಿದರು. ಉಪಾಧ್ಯಕ್ಷ ಉಮ್ಮರ್ ಮಂಚಿ ವಂದಿಸಿದರು. ಬಾಲಕೃಷ್ಣ ಆಳ್ವ ಕೊಡಾಜೆ ಕಾರ್ಯಕ್ರಮ ನಿರ್ವಹಿಸಿದರು. ಫಲಾನುಭವಿಗಳ ಪಟ್ಟಿಯನ್ನು ತಾಂತ್ರಿಕ ಅಧಿಕಾರಿ ನಂದನ್ ಶೆಣೈ ವಾಚಿಸಿದರು. ಕೃಷಿ ಸಖಿ, ಪಶು ಸಖಿಯರನ್ನು ಗೌರವಿಸಲಾಯಿತು. ಫಲಾನುಭವಿಗಳಿಗೆ ಸವಲತ್ತು ವಿತರಿಸಲಾಯಿತು
ಫಲಾನುಭವಿಗಳಿಗೆ ಸವಲತ್ತು ವಿತರಣೆ:
ಪಿಎಂಕೆಎಸ್ ವೈ ತುಂತುರು ನೀರಾವರಿ ಘಟಕ ಯೋಜನೆಯಡಿ ಕೃಷಿ ಇಲಾಖೆಯಿಂದ 90 ಶೇಕಡಾ ಸಹಾಯಧನದಲ್ಲಿ ವಿತರಿಸಲಾಗುವ ಸ್ಪ್ರಿಂಕ್ಲರ್ ಸೆಟ್ ಅನ್ನು ಫಲಾನುಭವಿಗಳಾದ ಪ್ರಶಾಂತ್ ಭಟ್, ಸಂಜೀವ ಪೂಜಾರಿ, ವಿಲಾಸಿನಿ, ಗಣೇಶ್ ಶೆಟ್ಟಿಗಾರ್, ಫೆಲಿಕ್ಸ್ ಮೊರಾಸ್, ರವೀಂದ್ರ, ಗಿರಿಯಪ್ಪ ಪೂಜಾರಿ, ಲಾನ್ಸಿ ಮೇರಿ ಫೆರ್ನಾಂಡೀಸ್, ಅನಿಲ್ ಕ್ರಾಸ್ತಾ, ಮ್ಯಾಕ್ಸಿಂ ಫೆರ್ನಾಂಡೀಸ್, ಆನಂದ ಪೂಜಾರಿ, ಅಬುಬಕ್ಕರ್ ಅವರಿಗೆ ವಿತರಿಸಲಾಯಿತು. ಕೃಷಿ ಯಾಂತ್ರೀಕರಣ ಯೋಜನೆಯಡಿ ಔಷಧಿ ಸಿಂಪಡಿಸುವ ಪವರ್ ಸ್ಪ್ರೇಯರ್ ಯಂತ್ರವನ್ನು ಫಲಾನುಭವಿಗಳಾದ ಕೋಟ್ಯಪ್ಪ ನಾಯ್ಕ್ ಮತ್ತು ವಲೇರಿಯನ್ ಕ್ರಾಸ್ತಾ ಅವರಿಗೆ ನೀಡಲಾಯಿತು.
ಭತ್ತದ ಬೆಳೆ ಸ್ಪರ್ಧ ವಿಜೇತರಿಗೆ ಸನ್ಮಾನ:
ಕೃಷಿ ಇಲಾಖೆಯ 2024-25ನೇ ಸಾಲಿನಲ್ಲಿ ಬಂಟ್ವಾಳ ತಾಲೂಕಿನಿಂದ ಕೃಷಿ ಪ್ರಶಸ್ತಿ ಭತ್ತ ಬೆಳೆ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಮಹಿಳೆಯರ ವಿಭಾಗದಲ್ಲಿ ಹೆಕ್ಟೇರ್ ಗೆ 26.2 ಕ್ವಿಂಟಲ್ ಬೆಳೆದು ಪ್ರಥಮ ಸ್ಥಾನಿಯಾದ ಬಂಟ್ವಾಳ ಹೋಬಳಿ ಕಾವಳಪಡೂರು ಗ್ರಾಮದ ಲೀಲಾ ಗೌಡ ಮತ್ತು ಮತ್ತು 26 ಕ್ವಿಂಟಲ್ ಭತ್ತದ ಇಳುವರಿ ಪಡೆದು ದ್ವಿತೀಯ ಸ್ಥಾನಿಯಾಗಿ ವಿಜೇತರಾದ ಕಾವಳಮೂಡೂರು ಗ್ರಾಮದ ಡಾಲಿ ವಿ.ಜೆ. ಅವರನ್ನು ಸನ್ಮಾನಿಸಲಾಯಿತು.