ಪ್ರಗತಿ ಪರಿಶೀಲನಾ ಸಭೆಗೆ ಅಧಿಕಾರಿಗಳು ಗೈರು ಹಾಜರಾಗಿರುವುದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರ ಅಸಮಾಧಾನಕ್ಕೆ ಕಾರಣವಾದ ಘಟನೆ ಶುಕ್ರವಾರ ತಾಪಂ ಸಭಾಂಗಣದಲ್ಲಿ ನಡೆದ ಬಂಟ್ವಾಳ ಕ್ಷೇತ್ರದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ನಡೆಯಿತು.ಅಧ್ಯಕ್ಷತೆ ವಹಿಸಿದ್ದ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಸಭೆ ಆರಂಭಿಸುವ ಹೊತ್ತಿನಲ್ಲಿ ಕೆಲ ಅಧಿಕಾರಿಗಳು ಗೈರಾಗಿರುವುದನ್ನು ಪ್ರಶ್ನಿಸಿ, ಸಭೆಯನ್ನು ಮುಂದುವರಿಸಬೇಕಾ ಅಥವಾ ನಿಲ್ಲಿಸಬೇಕಾ ಎಂದು ಪ್ರಶ್ನಿಸಿದರು. ಕೆಲ ಸಮಯದ ಬಳಿಕ ಅಧಿಕಾರಿಗಳು ಸಭೆಗೆ ಹಾಜರಾದರು. ತಹಸೀಲ್ದಾರ್ ಅನುಪಸ್ಥಿತಿಯಲ್ಲಿ ಉಪತಹಸೀಲ್ದಾರ್ ಗಳು ಶಾಸಕರ ಪ್ರಶ್ನೆಗಳಿಗೆ ಉತ್ತರ ನೀಡಿದರು.
ಸದ್ದು ಮಾಡಿದ ಧ್ವನಿವರ್ಧಕ
ಗಣೇಶ ಚತುರ್ಥಿ ಆಚರಣೆ ವೇಳೆ ಧ್ವನಿವರ್ಧಕ ಬಳಕೆಯ ಕುರಿತು ಸಾಕಷ್ಟು ಗೊಂದಲಗಳು ಏರ್ಪಟ್ಟಿದ್ದು, ಬಲವಂತವಾಗಿ ಕಾರ್ಯಕ್ರಮಗಳನ್ನು ನಿಲ್ಲಿಸುವ ಬದಲು ಧಾರ್ಮಿಕ ಆಚರಣೆ ಜಿಲ್ಲೆಯ ಆರ್ಥಿಕತೆಯನ್ನು ಬೆಳೆಸುತ್ತದೆ ಎಂಬ ವಿಚಾರದ ಕುರಿತು ಗಮನದಲ್ಲಿಟ್ಟುಕೊಳ್ಳಿ ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು. ಇದೇ ವೇಳೆ ಸಭೆಯಲ್ಲಿ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡುವ ವೇಳೆ ಶಾಸಕರು ಧ್ವನಿವರ್ಧಕ ಬಳಕೆ ನಿರಾಕರಿಸಿದರು. ಹಗಲು ಹೊತ್ತಿನಲ್ಲೂ ಧ್ವನಿವರ್ಧಕ ಬಳಕೆಯ ಡೆಸಿಬಲ್ ಉಪಯೋಗದ ಮಿತಿಯ ಕುರಿತು ಇರುವ ಗೊಂದಲ ಹಿನ್ನೆಲೆಯಲ್ಲಿ ಗಮನ ಸೆಳೆಯಲು ಸಾಂದರ್ಭಿಕವಾಗಿ ತಾನೂ ಮೈಕ್ ಬಳಕೆಯನ್ನು ಮಾಡುವುದಿಲ್ಲ ಎಂದವರು ತಿಳಿಸಿದರು.
ನೈಜ ಫಲಾನುಭವಿಗಳಿಗೆ ಬಾಕಿ ಬೇಡ:
ಸಾಮಾಜಿಕ ಭದ್ರತಾ ಯೋಜನೆಗಳ ಕುರಿತು ಪ್ರಗತಿ ವರದಿ ಮಂಡನೆ ವೇಳೆ ಮಾತನಾಡಿದ ಕೆಡಿಪಿ ಸದಸ್ಯ ಮಹಮ್ಮದ್ ನಂದಾವರ, ಮನೆಯಲ್ಲಿ ಅಸೌಖ್ಯ ಮತ್ತಿತರ ಸಮಸ್ಯೆಗಳಿಂದ ಇರುವವರಿಗೆ ಮಾಸಾಶನ ನೀಡಲು ಮನೆಗೇ ವಿತರಿಸಬೇಕು ಎಂದು ಒತ್ತಾಯಿಸಿದರು. ಶಾಸಕ ರಾಜೇಶ್ ನಾಯ್ಕ್ ಉತ್ತರಿಸಿ, ಎಲ್ಲರಿಗೂ ಯೋಜನೆ ಸೌಲಭ್ಯ ಪಡೆದುಕೊಳ್ಳುವ ಒಟ್ಟು ಫಲಾನುಭವಿಗಳ ಮಾಹಿತಿ ನೀಡುವಂತೆ ಹೇಳಿದರು. ಒಟ್ಟು ೩೬೭೯೬ ಫಲಾನುಭವಿಗಳು ಪಿಂಚಣಿ ಪಡೆಯುತ್ತಿರುವುದಾಗಿ ಉಪತಹಸೀಲ್ದಾರ್ ತಿಳಿಸಿದರು. ಯಾರಿಗೆ ಬಾಕಿ ಇದೆ ಎಂಬುದನ್ನು ಗಮನಹರಿಸಿ ನೈಜ ಫಲಾನುಭವಿಗಳಿಗೆ ತಪ್ಪಬಾರದು, ಈ ಕುರಿತು ವರದಿ ಮಂಡಿಸುವಂತೆ ತಿಳಿಸಿದರು.
ಕಾವಳಮುಡೂರು ಗ್ರಾಮದಲ್ಲಿ ಶಾಲೆ ಬಳಿ ಮೈದಾನದ ನಡುವಿನಲ್ಲೇ ಘನತ್ಯಾಜ್ಯ ವಿಲೇವಾರಿ ಮಾಡುವುದು ಸರಿಯೇ ಎಂದು ಸದಸ್ಯ ಸದಾನಂದ ಶೆಟ್ಟಿ ಪ್ರಶ್ನಿಸಿದರು. ಗಮನಹರಿಸುವುದಾಗಿ ಬಿಇಒ ಮಂಜುನಾಥನ್ ತಿಳಿಸಿದರು. ೯೪ಸಿ, ೯೪ಸಿಸಿ ವಿಚಾರಕ್ಕೆ ಸಂಬಂಧಿಸಿದಂತೆ ಸಣ್ಣಪುಟ್ಟ ವ್ಯತ್ಯಾಸಗಳು ಇದ್ದಲ್ಲಿ ಸರಿಪಡಿಸಿ ಎಂದು ಶಾಸಕರು ಈ ಸಂದರ್ಭ ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕಿನಲ್ಲಿ ಪ್ರಸ್ತುತ 16 ಡೆಂಘೆ ಪ್ರಕರಣ ವರದಿಯಾಗಿದ್ದು ಎಲ್ಲರೂ ಗುಣಮುಖರಾಗಿರುವುದಾಗಿ ಡಾ. ಅಶೋಕ್ ಕುಮಾರ್ ರೈ ಮಾಹಿತಿ ನೀಡಿದರು. ಟಿಎಪಿಸಿ ಅಧ್ಯಕ್ಷ ರವೀಂದ್ರ ಕಂಬಳಿ ಸಹಕಾರ ಸಂಘಗಳಿಗೆ ಸರಕಾರದಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಬಾಕಿ ಇರುವ ಹಣ ಪಾವತಿ ಕುರಿತು ಗಮನ ಸೆಳೆದರು. ಬೀದಿನಾಯಿ ಸಂತಾನಶಕ್ತಿಹರಣ, ಬಂಟ್ವಾಳದಲ್ಲಿ ಒಳಚರಂಡಿ ವ್ಯವಸ್ಥೆ, ಕಡೇಶಿವಾಲಯಕ್ಕೆ ಕೆಎಸ್ಸಾರ್ಟಿಸಿ ಬಸ್ ಸಂಚಾರ, ಪಂಚಾಯಿತಿಯಲ್ಲಿ 9/11 ಮಾಡುವ ವಿಚಾರ, ಬುಡಾದಲ್ಲಿನ ಕೆಲಸ ಕಾರ್ಯಗಳ ವೈಖರಿ ಸಹಿತ ಹಲವು ವಿಷಯಗಳು ಸಭೆಯಲ್ಲಿ ಪ್ರಸ್ತಾಪವಾದವು.
ಕೆಡಿಪಿ ಸದಸ್ಯರಾದ ಸದಾನಂದ ಶೆಟ್ಟಿ ಕಾವಳಕಟ್ಟೆ, ಮಹಮ್ಮದ್ ನಂದಾವರ, ಅಣ್ಣು ಖಂಡಿಗ, ಶೋಭಾ ರೈ, ಗಿರೀಶ್ ಕುಮಾರ್ ಪೆರ್ವ, ಅಬ್ದುಲ್ಲಾ ಎ. ಸಾಲೆತ್ತೂರು ಪೂರಕ ವಿಚಾರಗಳ ಕುರಿತು ಚರ್ಚಿಸಿದರು. ತಾಪಂ ಆಡಳಿತಾಧಿಕಾರಿ ಮಂಜುನಾಥ್, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸಚಿನ್ ಕುಮಾರ್, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷೆ ಜಯಂತಿ ವಿ ಪೂಜಾರಿ ಉಪಸ್ಥಿತರಿದ್ದರು
OPTIC WORLD