| ಈಗ ಕಾರ್ಯಾಚರಿಸುತ್ತಿರುವ ಟಾಯ್ಲೆಟ್ ಗಳು ಸಾಕಾಗ್ತಿಲ್ಲ | ಸರಕಾರಿ ಕಚೇರಿಗೆ ಬರುವವರ ಬವಣೆ ಕಡಿಮೆಯಾಗಿಲ್ಲ
OPTIC WORLD
ತಾಲೂಕು ಕೇಂದ್ರವಾಗಿರುವ ಬಂಟ್ವಾಳ ಪುರಸಭಾ ವ್ಯಾಪ್ತಿಯ ಬಿ.ಸಿ.ರೋಡ್ ನಲ್ಲಿ ಅತಿ ಹೆಚ್ಚು ಸರಕಾರಿ ಕಚೇರಿಗಳು ಹಾಗೂ ಕೋರ್ಟ್ ಗಳು ಬಿ.ಸಿ.ರೋಡ್ ನ ಕೈಕುಂಜೆ ರಸ್ತೆಯ ಆರಂಭದಿಂದ ಕೊನೆಯವರೆಗೂ ಇವೆ. ರೈಲ್ವೆ ನಿಲ್ದಾಣಕ್ಕೂ ಇದೇ ದಾರಿ ಸಾಗುತ್ತದೆ. ಆದರೆ ಇಲ್ಲಿ ಹಿಂದೆ ಇದ್ದ ಸಾರ್ವಜನಿಕ ಶೌಚಾಲಯವನ್ನು ಕೆಡಹಿ ಇಂದಿರಾ ಕ್ಯಾಂಟೀನ್ ನಿರ್ಮಿಸಲಾಗಿತ್ತು. ಅದಾದ ಬಳಿಕ ಮಹಿಳೆಯರಿಗಾಗಿ ಪಿಂಕ್ ಟಾಯ್ಲೆಟ್ ಆರಂಭಗೊಂಡು ಈಗ ಶಟರ್ ಎಳೆಯಲಾಗಿದೆ. ಫ್ಲೈಓವರ್ ಕೆಳಗೆ ಹಾಗೂ ಬಸ್ ನಿಲ್ದಾಣದ ಪಕ್ಕ ಇರುವ ಸುಲಭ್ ಶೌಚಾಲಯಗಳನ್ನು ಹೊರತುಪಡಿಸಿದರೆ, ಬಿ.ಸಿ.ರೋಡ್ ನ ಮುಖ್ಯ ಭಾಗದಲ್ಲಿ ಇಲ್ಲ.
ಹಾಗೆ ನೋಡಿದರೆ, ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಹೆಸರಿಗೆ ಶೌಚಾಲಯಗಳು ಇವೆ. ಬಿ.ಸಿ.ರೋಡ್ ನಲ್ಲಿ ಬಸ್ ನಿಲ್ದಾಣ ಸಮೀಪ, ಫ್ಲೈಓವರ್ ಅಡಿಭಾಗ, ಮಿನಿ ವಿಧಾನಸೌಧದ ಮುಂಭಾಗ (ಪಿಂಕ್ ಶೌಚಾಲಯ), ಪಾಣೆಮಂಗಳೂರು ಪೇಟೆ, ಕೊಟ್ರಮಣಗಂಡಿ ಹಾಗೂ ಬಡ್ಡಕಟ್ಟೆ ಬಸ್ ನಿಲ್ದಾಣಗಳ ಸಮೀಪ ನಿರ್ಮಾಣಗೊಂಡ ಶೌಚಾಲಯಗಳಲ್ಲಿ ಸದ್ಬಳಕೆ ಆಗುತ್ತಿರುವುದು ಬಿ.ಸಿ.ರೋಡ್ ಬಸ್ ನಿಲ್ದಾಣದಲ್ಲಿರುವುದಷ್ಟೇ. ಉಳಿದದ್ದೆಲ್ಲವೂ ಹೆಸರಿಗಷ್ಟೇ ಇದ್ದು, ಕೆಲವೊಂದು ಯಾವಾಗ ಬಂದ್ ಆಗುತ್ತದೆ, ತೆರೆಯುತ್ತದೆ ಎಂಬುದು ಗೊತ್ತಾಗುತ್ತಿಲ್ಲ.
ಬಿ.ಸಿ.ರೋಡ್ ನಲ್ಲಿ ಯಾಕೆ ಆದ್ಯತೆ:
ಬಿ.ಸಿ.ರೋಡ್ ನಲ್ಲಿರುವ ಸರಕಾರಿ ಕಚೇರಿಗಳಲ್ಲಿರುವ ಶೌಚಾಲಯಗಳು ಸಾರ್ವಜನಿಕವಲ್ಲ. ರಕ್ತೇಶ್ವರಿ ದೇವಳ ಸಮೀಪವಿರುವ ಪುರಸಭೆ ವಾಣಿಜ್ಯ ಸಂಕೀರ್ಣದ ಕೊಠಡಿಗಳಿಗೆ ಕೆಲಸಕ್ಕೆಂದು ಬರುವವರಿಗೂ ಶೌಚಾಲಯವಿಲ್ಲ, ಮಿನಿ ವಿಧಾನಸೌಧ, ತಾಲೂಕು ಕಚೇರಿ, ತಾಲೂಕು ಪಂಚಾಯತ್, ಮೆಸ್ಕಾಂ, ಕೃಷಿ, ತೋಟಗಾರಿಕೆ, ಎಪಿಎಂಸಿ, ಬಿಇಒ, ಶಿಶು ಅಭಿವೃದ್ಧಿ ಇಲಾಖೆ ಸಹಿತ ಹಲವು ಸರಕಾರಿ ಕಚೇರಿಗಳಿಗೆ ಕೆಲಸಕ್ಕೆಂದು ಬರುವವರು ಶೌಚಾಲಯಕ್ಕೆ ಹೋಗಬೇಕು ಎಂದಾದರೆ, ಆ ಕಚೇರಿಗಳಲ್ಲಿರುವುದನ್ನು ಅಲ್ಲಿಯವರ ಅನುಮತಿ ಪಡೆದು ಬಳಸಬೇಕು. ಪೇಟೆಯಲ್ಲಿ ಅಂಗಡಿ, ಮುಂಗಟ್ಟುಗಳಿಗೆ ಬಂದವರು ಹೋಗಬೇಕು ಎಂದಿದ್ದರೆ, ಬಸ್ ನಿಲ್ದಾಣಕ್ಕೇ ಹೋಗಬೇಕು. ಮಹಿಳೆಯರಿಗೆಂದು ಆರಂಭಿಸಲಾದ ಪಿಂಕ್ ಟಾಯ್ಲೆಟ್ ಕೂಡ ಬಂದ್ ಆಯಿತು.
ಖಾಸಗಿ ಸಂಸ್ಥೆಗೆ ಗುತ್ತಿಗೆ:
ಪ್ರಸ್ತುತ ಪುರಸಭೆ ಖಾಸಗಿ ಸಂಸ್ಥೆಯಾದ ಶುಚಿ ಇಂಟರ್ ನ್ಯಾಶನಲ್ ಗೆ ನಿರ್ವಹಣೆ ಗುತ್ತಿಗೆ ನೀಡಿದೆ. ಇಲ್ಲಿ ಶುಲ್ಕವನ್ನು ಪಾವತಿಸಿ ಶೌಚಗೃಹಕ್ಕೆ ಹೋಗಬೇಕು. ದರಪಟ್ಟಿಯನ್ನು ಅಲ್ಲಿ ಹಾಕಲಾಗಿದೆ. ಆದರೆ ನಿರ್ವಹಣೆ ಮಾಡುವವರು ಈ ಊರಿನವರಲ್ಲ. ಅವರೊಂದಿಗೆ ವ್ಯವಹರಿಸಬೇಕಾದರೆ ಹಿಂದಿ ಗೊತ್ತಿರಬೇಕು, ಏಕೆಂದರೆ ಅವರನ್ನು ಕೇಳಿದರೆ ಬರುವ ಉತ್ತರ ‘’ಕನ್ನಡ ಗೊತ್ತಿಲ್ಲ’’
ಇಲ್ಲಿವೆ ಶೌಚಾಲಯಗಳು
ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿರುವ ಪ್ರಮುಖ ಶೌಚಾಲಯಗಳು ಇವು