OPTIC WORLD
ಕೃಷಿ ಮಾಡುವವರಿಗೆ ಆರಂಭದಲ್ಲಿ ಕೃಷಿ ಸಂಸಾರದಲ್ಲಿ ಮಧ್ಯದಲ್ಲಿ ಕೃಷಿ, ವ್ಯವಹಾರ ಮಾಡುವವರಿಗೆ ಕೊನೆಯಲ್ಲಿ ಕೃಷಿ ಎಂಬ ಮಾತಿದೆ. ತಗ್ಗಲ್ಲಿರುವ ಗದ್ದೆಯಲ್ಲಿ ಬೆಳೆ ಹೆಚ್ಚು. ಹಾಗೆಯೇ ನಾವು ತಗ್ಗಿದರೆ ನಮಗೆ ಅನುಕೂಲ ಹೆಚ್ಚು. ಮಾನವನ ಅಂತರ್ಯ ಮಾನವೀಯತೆ. ಆಗಲೇ ಮನುಷ್ಯನಾಗುವುದು. ಬದುಕಿನ ಆದರ್ಶ ಸಾಧನೆಯಲ್ಲಿ ಅಡಗಿದೆ. ಬದುಕು ಶಿಕ್ಷಣ ಬೇಕು ಎನ್ನುವ ದೃಷ್ಟಿಯಿಂದ ಇಂತಹ ಕಾರ್ಯಕ್ರಮ ನಡೆಸಲಾಗುತ್ತದೆ. ಕೇವಲ ಆರ್ಥಿಕ ವ್ಯವಹಾರವೇ ಮುಖ್ಯವಲ್ಲ. ಸಂಸ್ಕಾರವೂ ಅಗತ್ಯ. ಜೀವನ ಮೌಲ್ಯದ ಅರಿವು ನಮ್ಮಲ್ಲಿ ಬೇಕು. ಸತ್ಕರ್ಮದಲ್ಲಿ ತೊಡಗಿಕೊಂಡರೆ ಸತ್ಫಲ ಲಭಿಸುತ್ತದೆ. ಸ್ವಾತಂತ್ರ್ಯೋತ್ಸವ ಹಾಗೂ ಶ್ರೀಕೃಷ್ಣ ಜನ್ಮಾಷ್ಟಮಿ ಹೀಗೆ ಎರಡೆರಡು ಹಬ್ಬಗಳನ್ನು ಆಚರಿಸಿದವರು ನಾವಿದ್ದೇವೆ. ಮಕ್ಕಳಿಗೆ ಆಚರಣೆಯ ಮಹತ್ವವನ್ನು ತಿಳಿಸಿಕೊಟ್ಟಾಗ ಮಾತ್ರ ಸಾರ್ಥಕತೆ ಇದೆ. ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಒಡಿಯೂರು ಶ್ರೀ ಸಂಸ್ಥಾನದ ಶ್ರೀ ಗುರುದೇವ ಜ್ಞಾನಮಂದಿರದಲ್ಲಿ ಜರಗಿದ ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ’ಸಂಸ್ಕೃತಿ ಸಂಸ್ಕಾರ’ ಕಾರ್ಯಕ್ರಮದಲ್ಲಿ ಆಶೀರ್ವಚನಗೈದರು.
ಸುಳ್ಯ ತಾಲೂಕಿನ ಯೋಜನೆಯ ಬಂಧುಗಳು ನಿರ್ವಹಿಸಿದ ಕಾರ್ಯಕ್ರಮವು ಸಾಮೂಹಿಕ ಪ್ರಾರ್ಥನೆಯೊಂದಿಗೆ ಆರಂಭಗೊಂಡಿತು. ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಯೋಜನಾ ನಿರ್ದೇಶಕ ಶ್ರೀ ಕಿರಣ್ ಉರ್ವ, ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀ ಮಾತೇಶ್ ಭಂಡಾರಿ, ಗುತ್ತಿಗಾರು ವಲಯ ಘಟಸಮಿತಿ ಅಧ್ಯಕ್ಷ ಸಂದೀಪ್‌ಕುಮಾರ್, ಬೊಳ್ಳಾಜೆ ಘಟಸಮಿತಿ ಅಧ್ಯಕ್ಷ ಸೀತಾರಾಮ, ಕಾರ್ಯದರ್ಶಿ ಜಯಂತಿ, ದೇವಚಳ್ಳ ಘಟಸಮಿತಿ ಸಂಘಟನಾ ಕಾರ್ಯದರ್ಶಿ ಜಯಂತ್ ದೀಪ ಪ್ರಜ್ವಲಿಸಿದರು. ಸುಳ್ಯ ತಾಲೂಕಿನ ಸುಮಾರು ೧೧ ಒಡಿಯೂರು ಶ್ರೀ ವಿಕಾಸವಾಹಿನಿ ಸ್ವ-ಸಹಾಯ ಸಂಘಗಳಿಗೆ ರೂ.೩,೫೦,೭೪೦.೦೦ ಮೊತ್ತ ಲಾಭಾಂಶದ ಚೆಕ್ಕನ್ನು ಪೂಜ್ಯ ಸ್ವಾಮೀಜಿಯವರು ನೀಡಿ ಹರಸಿದರು. ತಾಲೂಕು ಮೇಲ್ವಿಚಾರಕಿ ಶ್ರೀಮತಿ ಗೀತಾ ಸಂಘಗಳ ವಿವರ ವಾಚಿಸಿದರು.
ಆರಂಭದಲ್ಲಿ ಧ್ಯಾನ-ಪ್ರಾಣಾಯಾಮ, ಶ್ರೀಮದ್ಭಗವದ್ಗೀತೆ ಹಾಗೂ ಹನುಮಾನ್ ಚಾಲೀಸಾ ಪಠಣ, ನಾಮ ಸಂಕೀರ್ತನೆ ಜರಗಿದವು. ವಿಶ್ವನಾಥ ಶೆಟ್ಟಿಯವರು ಹಾಸ್ಯ ಚಟುವಟಿಕೆ ನಡೆಸಿಕೊಟ್ಟರು. ಸುಳ್ಯ ಸಂಯೋಜಕಿ ರೇವತಿ ಸ್ವಾಗತಿಸಿದರು. ಗುತ್ತಿಗಾರು ವಲಯ ಸಂಯೋಜಕಿ ಸವಿತಾ ಸಿ. ಕಾರ್ಯಕ್ರಮ ನಿರೂಪಿಸಿದರು.