ಪ್ರಮುಖ ಸುದ್ದಿಗಳು

Bantwal: ಮತ್ತೆ ಅಂಗನವಾಡಿಯತ್ತ ಹೆಜ್ಜೆ ಹಾಕಿದ ‘ಅಂದಿನ’ ಪುಟಾಣಿಗಳು

ಅಂಗನವಾಡಿ ಕೇಂದ್ರಗಳ ಮೇಲುಸ್ತುವಾರಿ ನೋಡಿಕೊಳ್ಳಲು ಸರ್ಕಾರದಿಂದ ನಿರ್ದೇಶನಗೊಂಡಿರುವ ಬಾಲವಿಕಾಸ ಸಮಿತಿ ಸದಸ್ಯರು, ಸ್ತ್ರೀ ಶಕ್ತಿ ಗುಂಪಿನ ಸದಸ್ಯರು, ಮಕ್ಕಳ ಪೋಷಕರು ಅಂಗನವಾಡಿ ಕೇಂದ್ರಗಳಿಗೆ ಕೇಂದ್ರಕ್ಕೆ ಶಕ್ತಿ ತುಂಬುತ್ತಿದ್ದು, ದಾಸಕೋಡಿ ಅಂಗನವಾಡಿ ಯ ಬೆಳಕು ಹಿರಿಯ ವಿದ್ಯಾರ್ಥಿ ಸಂಘ ರಚನೆಗೊಂಡಿದೆ. ಅಧ್ಯಕ್ಷರಾಗಿ ದೀಕ್ಷಿತ್ , ಕಾರ್ಯದರ್ಶಿಯಾಗಿ ಮಮತಾ, ಕೋಶಾಧಿಕಾರಿ ಆತ್ರೇಯ ಅಡ್ಯಂತಾಯ ಅವರನ್ನು ನೇಮಕ ಮಾಡಲಾಯಿತು. ಹಿರಿಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಜೇನು ಸೊಸೈಟಿ ಅಧ್ಯಕ್ಷ ಪಿ. ಎಸ್. ಮೋಹನ್, ಬಾಲವಿಕಾಸ ಸಮಿತಿಯ ಅಧ್ಯಕ್ಷೆ ರಕ್ಷಿತಾ ಹಾಗೂ ಪೋಷಕರು ಮತ್ತು ಅಂಗನವಾಡಿ ಸಹಾಯಕಿಯರು ಹಾಜರಿದ್ದರು. ಕವಿತಾ ಅಡ್ಯಂತಾಯ ಸ್ವಾಗತಿಸಿದರು. ಪದ್ಮಿನಿ ವಂದಿಸಿದರು.

ನಾಲ್ಕೈದು ವರ್ಷಗಳಿದ್ದಾಗ ತೊದಲು ನುಡಿಯುವ ವೇಳೆ ಮಾತು, ಅಕ್ಷರ ಕಲಿಸಿದ, ಆಟವಾಡಲು ಹೇಳಿಕೊಟ್ಟ ಅಂಗನವಾಡಿಗಳಿಗೆ ಹೋಗುತ್ತಿದ್ದವರು ಬೆಳೆದು ದೊಡ್ಡವರಾಗಿದ್ದಾರೆ. ಶಾಲೆ, ಕಾಲೇಜು ಕಲಿತು ಉದ್ಯೋಗಸ್ಥರಾಗಿದ್ದಾರೆ. ಈಗಿನ ಪುಟಾಣಿಗಳಿಗೆ ಮತ್ತಷ್ಟು ನೆರವಾಗಲು ಹಿರಿಯ ವಿದ್ಯಾರ್ಥಿಗಳು ಸೇರಿಕೊಂಡರೆ ಹೇಗಿರುತ್ತದೆ? ಬಂಟ್ವಾಳ ತಾಲೂಕಿನಲ್ಲೀಗ ಅಂಥದ್ದೊಂದು ಪ್ರಯತ್ನ ಯಶಸ್ವಿಯಾಗಿದೆ. ಇದಕ್ಕೆ ಸಾಕ್ಷಿಯಾಗಿ ಹಲವು ಅಂಗನವಾಡಿಗಳಲ್ಲಿ ಸ್ವಾತಂತ್ರ್ಯ ದಿನಾಚರಣೆಗೆ ಪುಟಾಣಿಗಳೊಂದಿಗೆ ಅಲ್ಲೇ ಕಲಿತು ದೊಡ್ಡವರಾದ ಹಿರಿಯ ವಿದ್ಯಾರ್ಥಿಗಳು ಸಾಥ್ ನೀಡಿದ್ದು ಗಮನ ಸೆಳೆಯಿತು.

ಅಂಗನವಾಡಿ ಕೇಂದ್ರಗಳಲ್ಲಿಯೂ ಹಿರಿಯ ವಿದ್ಯಾರ್ಥಿ ಸಂಘಗಳನ್ನು ರಚಿಸುವ ಮೂಲಕ ಅಂಗನವಾಡಿ ಕೇಂದ್ರಗಳ ಅಭಿವೃದ್ಧಿಗೆ ಸಮುದಾಯವನ್ನು ಪ್ರೇರೇಪಿಸುವ ಪ್ರಯತ್ನವಿದು.

ಜಾಹೀರಾತು

ಜಿಲ್ಲಾ ಮಟ್ಟದ ಅಧಿಕಾರಿಗಳ ಸೂಚನೆಯಂತೆ ಬಂಟ್ವಾಳ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶುಅಭಿವೃದ್ಧಿ ಯೋಜನಾಧಿಕಾರಿ ಪರಿಕಲ್ಪನೆಯಲ್ಲಿ ಪ್ರಕ್ರಿಯೆ ಆಗಿದೆ.

ಅಂಗನವಾಡಿ ಕೇಂದ್ರಗಳ ಮುನ್ನಡೆಗೆ ಸಮುದಾಯದ ಸಹಭಾಗಿತ್ವ ಅಗತ್ಯ ಈ ಹಿನ್ನೆಲೆಯಲ್ಲಿ ಹಿರಿಯ ವಿದ್ಯಾರ್ಥಿಗಳ ಸಂಘ ಸ್ಥಾಪಿಸುವ ಸೂಚನೆಯನ್ನು ಜಿಲ್ಲೆಯಿಂದ ನೀಡಲಾಗಿತ್ತು. ಅದರಂತೆ ತಾಲೂಕಿನ ಎಲ್ಲ ಅಂಗನವಾಡಿ ಕೇಂದ್ರಗಳಲ್ಲಿ ಹಿರಿಯ ವಿದ್ಯಾರ್ಥಿ ಸಂಘಗಳನ್ನು ಸ್ಥಾಪಿಸುವ ಪ್ರಕ್ರಿಯೆ ಆರಂಭಗೊಂಡಿತು. ಬಂಟ್ವಾಳ ತಾಲೂಕಿನ ಬಂಟ್ವಾಳ ವಲಯದ 341  ಅಂಗನವಾಡಿ ಕೇಂದ್ರಗಳ ಪೈಕಿ 75 ಕೇಂದ್ರಗಳಲ್ಲಿ ಹಾಗೂ ವಿಟ್ಲ ವಲಯದ 229 ಅಂಗನವಾಡಿ ಕೇಂದ್ರಗಳ ಪೈಕಿ ಗಮನಾರ್ಹ ಪ್ರಮಾಣದಲ್ಲಿ ಹಿರಿಯ ವಿದ್ಯಾರ್ಥಿ ಸಂಘಗಳನ್ನು ರಚಿಸಲಾಗಿದೆ, ಕೆಲವೆಡೆ ಪ್ರಗತಿಯಲ್ಲಿದೆ ಎಂದು ಬಂಟ್ವಾಳ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಮ್ತಾಜ್‌ತಿಳಿಸಿದ್ದಾರೆ.

ಅಂಗನವಾಡಿ ಕೇಂದ್ರಗಳಲ್ಲಿ ಕಲಿತವರು ಅದೇ ಊರಿನಲ್ಲಿದ್ದರೆ ಆಯಾ ಅಂಗನವಾಡಿ ಕೇಂದ್ರಗಳ ಹಿರಿಯ ವಿದ್ಯಾರ್ಥಿ ಸಂಘಗಳಿಗೆ ಸೇರಿಸುವ ಪ್ರಕ್ರಿಯೆಗೆ ಉತ್ತಮ ಸ್ಪಂದನೆಯೂ ದೊರಕಿದೆ. ಸಮುದಾಯಕ್ಕೆ ಇಲಾಖೆಯ ಕಾರ್ಯ ಚಟುವಟಿಕೆಗಳ ಮಾಹಿತಿ ನೀಡಿ, ಸಮುದಾಯದ ಸಹಭಾಗಿತ್ವ ಪಡೆದುಕೊಳ್ಳುವುದು, ಸಿ ಎಸ್ ಆರ್ ಅನುದಾನ ಪಡೆದುಕೊಳ್ಳುವುದು ಹಾಗೂ ಸಮರ್ಪಕ ಬಳಕೆ, ನಿಯಮಿತ ಸಂವಹನ, ಸಮುದಾಯ ಸೇವಾ ಕಾರ್ಯಕ್ರಮ, ಹಳೆ ವಿದ್ಯಾರ್ಥಿಗಳು ಮತ್ತು ಅಂಗನವಾಡಿ ಕೇಂದ್ರದ ಬಾಂಧವ್ಯವನ್ನು ಬಲಪಡಿಸುವುದು, ಅಂಗನವಾಡಿ ಕೇಂದ್ರಕ್ಕೆ ಬೇಕಿರುವ ಮೂಲ ಸೌಲಭ್ಯಗಳನ್ನು ದೊರಕಿಸಲು ಮುಂದಾಗುವುದು, ಅಂಗನವಾಡಿ ಕೇಂದ್ರದ ಅಭಿವೃದ್ಧಿಯಲ್ಲಿ ಮಾರ್ಗದರ್ಶನ ಹಾಗೂ ಸಲಹೆ ಪಡೆದುಕೊಳ್ಳುವುದು ಹಾಗೂ  ವಿವಿಧ ರಾಷ್ಟ್ರೀಯ ಹಬ್ಬಗಳಲ್ಲಿ ಸಕ್ರಿಯ ಪಾಲ್ಗೊಳ್ಳುವಿಕೆ ಹಾಗೂ ಸಹಕಾರ ಪಡೆದುಕೊಳ್ಳುವ ಮೂಲಕ ಹಿರಿಯ ವಿದ್ಯಾರ್ಥಿಗಳು ಸಾಥ್ ನೀಡುತ್ತಾರೆ.

ಪ್ರತಿಭಾನ್ವಿತ ಹಳೆ ವಿದ್ಯಾರ್ಥಿಗಳಿಂದ ಸಂಘದ ಮುಖೇನ ಶಾಲಾ ಪೂರ್ವ ಶಿಕ್ಷಣದಲ್ಲಿ ಸಹಾಯ ಮಾಡುವುದು, ಅಕ್ಷಯ ಪಾತ್ರೆ ಯೋಜನೆ, ನಿಯಮಿತ ಹಾಜರಾತಿಗಾಗಿ ಫಲಾನುಭವಿಗಳನ್ನು ಸಜ್ಜುಗೊಳಿಸುವುದು, ಮಕ್ಕಳ ಬೆಳವಣಿಗೆ ಮೇಲ್ವಿಚಾರಣೆಯಲ್ಲಿ ಸಹಾಯ ಮಾಡುವುದು, ಅಪೌಷ್ಠಿಕ ಮಕ್ಕಳನ್ನು  ಮಕ್ಕಳನ್ನು ದತ್ತು ತೆಗೆದುಕೊಳ್ಳುವುದು, ಪರಿಣಾಮಕಾರಿ ಪೌಷ್ಟಿಕತೆ ಹಾಗೂ ಆರೋಗ್ಯ ಶಿಕ್ಷಣದ ಪ್ರಾತ್ಯಕ್ಷತೆ ಒದಗಿಸುವುದು, ರಾಷ್ಟ್ರೀಯ ಹಬ್ಬಗಳ  ಆಚರಣೆ, ಮಕ್ಕಳ ಹುಟ್ಟುಹಬ್ಬ ಆಚರಣೆ, ಅಂಗನವಾಡಿ ಕಟ್ಟಡದ ಸುಸ್ಥಿತಿಯನ್ನು ಕಾಯ್ದುಕೊಳ್ಳುವುದು ಮೊದಲಾದ ನಿರೀಕ್ಷೆಗಳನ್ನೂ ಇರಿಸಿಕೊಳ್ಳಲಾಗಿದೆ.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.