ಸುಮಾರು ಒಂದೂವರೆ ದಶಕ ದಾಟಿ ವರ್ಷಗಳು ಉರುಳಿದ್ದರೂ ಬಂಟ್ವಾಳ ಪೇಟೆ ಬಳಿ ಕೊಟ್ರಮಣಗಂಡಿ ಎಂಬಲ್ಲಿ ನಿರ್ಮಿಸಲಾಗಿದ್ದ ಬಸ್ ನಿಲ್ದಾಣದ ವಿಶಾಲವಾದ ಜಾಗಕ್ಕೆ ಬಸ್ಸುಗಳೇ ಬಂದಿರಲಿಲ್ಲ. ಪುರಸಭೆ ಸಾಮಾನ್ಯ ಸಭೆಯಲ್ಲಿ ತಾರ್ಕಿಕ ಅಂತ್ಯ ಕಾಣದೆ ಚರ್ಚಾ ವಸ್ತುವಾಗಿ, ಆರೋಪ ಪ್ರತ್ಯಾರೋಪಕ್ಕಷ್ಟೇ ಸೀಮಿತವಾಗುತ್ತಿದ್ದ ಈ ವಿಷಯಕ್ಕೊಂದು ತಾತ್ಕಾಲಿಕ ಫುಲ್ ಸ್ಟಾಪ್ ದೊರಕಿದೆ. ಶನಿವಾರ ಪುರಸಭಾಧ್ಯಕ್ಷ ಬಿ.ವಾಸು ಪೂಜಾರಿ ಮುಖ್ಯಾಧಿಕಾರಿ ಮತ್ತಡಿ ಮತ್ತು ಬಂಟ್ವಾಳ ಟ್ರಾಫಿಕ್ ಪೊಲೀಸ್ ಠಾಣೆ ಎಸ್.ಐ. ಸುತೇಶ್ ಅವರ ಜತೆಗೆ ಸ್ಥಳಕ್ಕೆ ತೆರಳಿ, ಇಲ್ಲಿರುವ ಶೌಚಾಲಯ ಸದ್ಬಳಕೆ ಹಾಗೂ ಬಸ್ ನಿಲ್ದಾಣಕ್ಕೆ ಬಸ್ಸುಗಳು ಹಾಗೂ ಪ್ರಯಾಣಿಕರು ಬರುವಂತೆ ಮಾಡುವ ಕುರಿತ ಮಾರ್ಗೋಪಾಯಗಳನ್ನು ಪರಿಶೀಲಿಸಿದರು. ಬಳಿಕ ಸೋಮವಾರ (ಆಗಸ್ಟ್ 18)ದಿಂದ ಬಸ್ಸುಗಳು ಅಲ್ಲಿ ನಿಲುಗಡೆ ಮಾಡಿ ತೆರಳಲು ಸೂಚನೆ ನೀಡುವ ಕುರಿತು ತೀರ್ಮಾನಿಸಲಾಯಿತು.ಅದರಂತೆ ಸೋಮವಾರ ಟ್ರಾಫಿಕ್ ಪೊಲೀಸ್ ನಿರ್ದೇಶನ,ಸೂಚನೆಯೊಂದಿಗೆ ಬಸ್ಸುಗಳು ನಿಲ್ದಾಣ ಪ್ರವೇಶಿಸಿದವು. ದಿನವಿಡೀ ಬಸ್ಸುಗಳು ನಿಲ್ದಾಣಕ್ಕೆ ಬಂದು ಹೋಗಿದ್ದು, ಪುರಸಭೆ, ಪೊಲೀಸರ ಮನವಿ ಮೇರೆಗೆ ಬಸ್ಸುಗಳನ್ನು ನಿಲುಗಡೆಗೊಳಿಸಲಾಗಿದ್ದು, ಇದೀಗ ಪ್ರಯಾಣಿಕರು ಅಲ್ಲಿ ಬಸ್ಸಿಗಾಗಿ ನಿಲ್ಲುವ ವ್ಯವಸ್ಥೆಗಳು ರೂಢಿಯಾಗಬೇಕು.
ಮೂಡುಬಿದಿರೆ ಬಸ್ಸುಗಳು ಇಲ್ಲಿಗೆ ಬರ್ತವೆ:
ಬಿ.ಸಿ.ರೋಡಿನಿಂದ ಬಂಟ್ವಾಳ ಪೇಟೆಯ ಮೂಲಕ ಸಾಗಿ ಬಳಿಕ ತುಂಬ್ಯ ಜಂಕ್ಷನ್ ಮೂಲಕ ಮೂಡುಬಿದಿರೆಗೆ ಸಾಗುವ ಬಸ್ಸುಗಳು ಈ ಮಾರ್ಗದಲ್ಲಿ ಬರುತ್ತವೆ. ಹೀಗಾಗಿ ಈ ಮಾರ್ಗದಲ್ಲಿ ಸಂಚರಿಸುವ ಮೂಡುಬಿದಿರೆ ಕಡೆಗೆ ತೆರಳುವ ಪ್ರಯಾಣಿಕರು ಬಸ್ಸುಗಳನ್ನು ಹತ್ತಬೇಕಾದರೆ, ಕೊಟ್ರಮಣಗಂಡಿ ದೇವರಕಟ್ಟೆ ಎಂಬಲ್ಲಿ ನಿರ್ಮಿಸಲಾದ ಬಸ್ ನಿಲ್ದಾಣಕ್ಕೆ ಬರಬೇಕಾಗುತ್ತದೆ
ಎರಡು ದೊಡ್ಡ ವಾಹನಗಳು ಎದುರುಬದುರಾಗಿ ಬಂದರೆ ಟ್ರಾಫಿಕ್ ಜಾಮ್ ಆಗುವ ಬಂಟ್ವಾಳದಲ್ಲಿ ವಾಹನಗಳನ್ನು ಎರಡು ನಿಮಿಷಕ್ಕಿಂತ ಜಾಸ್ತಿ ನಿಲ್ಲಿಸಿದರೆ, ಹಾರ್ನ್ ಗಳ ಸದ್ದು ಕೇಳಲಾರಂಭಿಸುತ್ತದೆ. ಬಸ್ಸುಗಳು ಈ ಕೊಟ್ರಮನಗಂಡಿ ಬಸ್ ನಿಲ್ದಾಣಕ್ಕಿಂತ ಸ್ವಲ್ಪ ಮೊದಲು ಪ್ರಯಾಣಿಕರನ್ನು ಹತ್ತಿಸಿ ಚಲಿಸುತ್ತಿದ್ದವು. ಈಗ ಪೊಲೀಸ್ ವ್ಯವಸ್ಥೆಯ ಮೂಲಕ ಬಸ್ಸುಗಳನ್ನು ಕೊಟ್ರಮಣಗಂಡಿಯಲ್ಲೇ ನಿಲ್ಲಿಸಲಾಗುತ್ತಿದೆ. ಪ್ರಯಾಣಿಕರೂ ಅಲ್ಲಿಗೇ ಹೋಗಿ ಹತ್ತಬೇಕು, ತನ್ಮೂಲಕ ವಾಹನದಟ್ಟಣೆ ತಪ್ಪಿಸಬೇಕು ಎಂಬುದು ಉದ್ದೇಶ. ಆದರೆ, ಕೈಚೀಲಗಳನ್ನು ಹಿಡಿದುಕೊಂಡು ಯಾವುದಾದರೂ ಅಂಗಡಿ ಬದಿ, ಹೋಟೆಲ್ ಬದಿ ಕಾದುಕೊಳ್ಳುವುದನ್ನು ರೂಢಿ ಮಾಡಿಕೊಂಡಿರುವ ಪ್ರಯಾಣಿಕರು ಹೇಗೆ ಸ್ಪಂದಿಸುತ್ತಾರೆ ಎಂಬುದು ಕುತೂಹಲಕಾರಿ.
ವಿಶಾಲವಾದ ಬಸ್ ತಂಗುದಾಣ, ಪ್ರಯಾಣಿಕರಿಗೆ ಸೂರು, ಶೌಚಾಲಯ ವ್ಯವಸ್ಥೆ ಇರುವ ಈ ಭಾಗದಲ್ಲಿರುವ ಬಸ್ ನಿಲ್ದಾಣವನ್ನು ಸದ್ಬಳಕೆ ಮಾಡುವ ನಿಟ್ಟಿನಲ್ಲಿ ಹಲವಾರು ಬಾರಿ ಚರ್ಚೆಗಳು ನಡೆದಿದ್ದವು. ಇದೀಗ ಸ್ಥಳಭೇಟಿ ಬಳಿಕ ಕಾರ್ಯರೂಪಕ್ಕೆ ಬಂದಿದ್ದು, ಬಸ್ ಗಳು ಪ್ರವೇಶವಾಗಿದೆ ಎಂದು ಪುರಸಭಾಧ್ಯಕ್ಷ ಬಿ.ವಾಸು ಪೂಜಾರಿ ಲೊರೆಟ್ಟೊ ಹೇಳಿದರು.