ಮಗುಚೋ ಮಾಡಿನ ಬಿರುಕಿನ ಗೋಡೆಯ
ಗುಡಿಸಲ ಗೂಡಿನ ಬಡ ಬಗ್ಗರು ನಾವು
ಬತ್ತಿದ ಕಣ್ಣಲಿ ಸಾಸಿರ ಸುಂದರ ಕನಸನು ಕಾಣುವ
ಹರಕು ಚಿಂದಿಯ ಒಡೆಯರು ನಾವು||೧||
ಜಗಚಕ್ಷುವೆನಿಪ ಸೂರ್ಯನ ಪ್ರಖರ ಕಿರಣಕೆ
ಈ ಧರೆ ಹತ್ತಿ ಉರಿಯಲೂಬಹುದು
ಬಡತನದ ಉರಿಯ ಧಗೆ ಹತ್ತಿದರೂ ಬೆದರದು
ಶ್ವಾನವೂ ಮೂಸದ ಅಂಬಲಿ ಉಂಬ ಬಡವನೆದೆ||೨||
ಅಂಗೈ ರೇಖೆಯಿಂದಲಿ ನಾಳೆಯ ಕಾಂಬರು
ಕಾರುಣ್ಯವಿರದ ಕಲ್ಲೆದೆಯವ ಕಲ್ಲ ಮೂರುತಿಯಲಿ
ಲೋಚನಕೆ ಗೋಚರಿಸದ ದೇವರ ಕಾಂಬರು
ಹಸಿದ ಬಡವನೆದೆಯ ಸಿರಿತನವನಾರು ಕಾಂಬರು||೩||
ಕಷ್ಟ ಕಾರ್ಪಣ್ಯಗಳ ಬವಣೆಯಲಿ ದಿನ ಬೆಂದು
ತೀರವ ಸೇರದ ಈ ಜೀವನವೆಂಬ ನುಗ್ಗುನುರಿಯಾದ
ನೌಕೆಯಲಿ ಈ ತಿರುಬೋಕಿಯ ಪಯಣ
ಸಾಗುವುದೆಂತೋ ಸೇರುವುದೆಂತೋ||೪||
ನಿತ್ಯ ನಂಬಿದೆವು ಮಾಡೋ ಕಾಯಕವ
ಅನವರತನು ಅಚ್ಚರಿಗೊಳುವಂತೆ ಗೈವನು
ಈ ಬಡವನ ಸ್ವಾರ್ಥರಹಿತ ಸೇವೆಯ ಕಂಡು
ಕಾಣದ ಶಕ್ತಿಗೆ ಸಲ್ಲುವ ಪ್ರಾರ್ಥನೆ ಇದೊಂದೆ||೫||
ದುಡಿಮೆಯ ನೆಚ್ಚಿದ ಕೃತ್ರಿಮವ ಅರಿಯದ
ಹೂ ನಗೆಯ ಆಂತರ್ಯದವರು ನಾವು
ದ್ರೋಹವ ಬಗೆಯದೆ ದೈನ್ಯದಿ ಬಡತನವೆಂಬ ಭಾರದ
ನೊಗವನು ಹೆಗಲಲಿ ಹೊತ್ತು ಬಾರದ ಸುಖವ
ಹಂಬಲಿಸುವ ಬಡವರು ನಾವು||೬||
ಕೊಚ್ಚೆಯ ರಾಢಿಯಿರದ ಆಡುವ ಪ್ರತಿ ಮಾತಲೂ
ಒಲವ ಧಾರೆಯ ಹರಿಸುವ ಮುಗ್ಧ ಬಡವರು ನಾವು
ರಟ್ಟೆಯ ಕಸುವನು ನಂಬಿ ಹರಿಸುವೆವು ನೆತ್ತರ ಬೆವರನು
ಎಟುಕದಿರುವ ಆಸೆಯನು ಹುಳಿ ದ್ರಾಕ್ಷಿಯೆಂದರಿತು
ಮನದಲೇ ಮರುಗುವ ಬಡ ಮಂದಿ ನಾವು||೭||
ತೊಡುವ ವಸನದಲೂ ಸಾಸಿರ ತೂಬು
ಆಡಂಬರವಿಲ್ಲದ ನಮ್ಮ ಜೋಪಡಿಯ ತುಂಬಾ ತೂಬು
ಬಡವರಾದ ನಮ್ಮ ಎದೆಯ ತುಂಬಾ ಬಡತನದ ತೂಬು
ಇದ ಕಂಡು ಸೊರಗಿ ಹೆದರಿತು ತೂಬಿನೊಳಗ ಬರಲು
ನಾಳೆಯೆಂಬ ಸೂರ್ಯ ರಶ್ಮಿ||೮||
ಸಾಸಿರ ಸ್ವಪ್ನದ ಸರದಾರರು ನಾವು
ಕಾಣುವ ಕನಸದು ಈಡೇರಿ ನನಸಾದೀತೆ?
ಕಾರ್ಮೋಡದ ತೆರೆ ಸರಿದು ಬಡವನ ಭಾಗ್ಯವೆಂಬ
ಸ್ವರ್ಣ ರೇಖೆಯ ಮಿಂಚು ಮಿಂಚೀತೆ?
ಕಾದು ನೋಡುವ, ಕಾಲ ಉರುಳದಿರುವುದೇ!?||೯||
ರಚನೆ : ರಮೇಶ್ ಮೆಲ್ಕಾರ್
RAMESH MELKAR