ಬಂಟ್ವಾಳ

Dharmastala Dharmarakshana Vedike meet at Bantwal: ಶ್ರೀ ಧರ್ಮಸ್ಥಳ ಧರ್ಮರಕ್ಷಣಾ ವೇದಿಕೆಯಿಂದ ಬಂಟ್ವಾಳದಲ್ಲಿ 20ರಂದು ಜನಾಗ್ರಹ ಸಭೆ

ಶ್ರೀ ಧರ್ಮಸ್ಥಳ ಧರ್ಮರಕ್ಷಣಾ ವೇದಿಕೆಯಿಂದ ಬಂಟ್ವಾಳದಲ್ಲಿ ಆಗಸ್ಟ್ 20ರಂದು ಜನಾಗ್ರಹ ಸಭೆ ಬಂಟ್ವಾಳದ ಸ್ಪರ್ಶ ಕಲಾ ಮಂದಿರದಲ್ಲಿ ಬೆಳಗ್ಗೆ 10 ಗಂಟೆಯಿಂದ ನಡೆಯಲಿದೆ.  ಧರ್ಮಸ್ಥಳ ಕ್ಷೇತ್ರ ಕುರಿತು ವ್ಯವಸ್ಥಿತವಾದ ಅಪಪ್ರಚಾರ, ಧರ್ಮಾಧಿಕಾರಿಗಳ ತೇಜೋವಧೆಯಂಥ ಘಟನೆಗಳು ನಾನಾ ರೀತಿಯಲ್ಲಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಭಕ್ತರಾದ ನಮಗೆ ಘಾಸಿಯಾಗಿದ್ದು, ಈ ಹಿನ್ನೆಲೆಯಲ್ಲಿ ಈ ಸಭೆ ನಡೆಯಲಿದೆ ಎಂದು ಮಾಜಿ ಶಾಸಕ ಎ.ರುಕ್ಮಯ ಪೂಜಾರಿ ಸಹಿತ ನಾನಾ ಮುಖಂಡರು ಬಂಟ್ವಾಳ ಸ್ಪರ್ಶ ಕಲಾ ಮಂದಿರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಸೋಮವಾರ ತಿಳಿಸಿದರು.

ಜಾಹೀರಾತು

OPTIC WORLD

ನಿರಂತರವಾದ ಸುಳ್ಳು ಆಪಾದನೆಗಳು, ಆಧಾರ ರಹಿತ ಕಪೋಲಕಲ್ಪಿತ ಸುದ್ದಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು ನಿಂದಿಸುವ ಮೂಲಕ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಕೆಲಸವನ್ನು ಕೆಲವು ಧರ್ಮದ್ರೋಹಿ ಶಕ್ತಿಗಳು ನಡೆಸುತ್ತಿವೆ ಎಂದು ಆಪಾದಿಸಿದರು. ಬೆಳಗ್ಗೆ 10 ಗಂಟೆಗೆ ಸ್ಪರ್ಶ ಕಲಾ ಮಂದಿರದಲ್ಲಿ ಸಭೆ ಸೇರಲಿದೆ, ಅಲ್ಲಿಂದ ಬಿ.ಸಿ.ರೋಡಿಗೆ ತೆರಳಿ ತಹಸೀಲ್ದಾರ್ ಕಚೇರಿ ಮೂಲಕ ಮನವಿ ಸಲ್ಲಿಸಲಾಗುವುದು ಎಂದವರು ಮಾಹಿತಿ ನೀಡಿದರು.

ಈ ಕುರಿತು ಮಾತನಾಡಿದ ಮುಖಂಡರಾದ ಎನ್. ಪ್ರಕಾಶ್ ಕಾರಂತ್,  ಧರ್ಮಸ್ಥಳ ಕುರಿತು ಅಲ್ಪತನದಿಂದ ಮಾತನಾಡುವುದು ನಮಗೆ ಬೇಸರ ತಂದಿದೆ ಎಂದರು. ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ತುಕಾರಾಮ ಪೂಜಾರಿ ಮಾತನಾಡಿ, ಧರ್ಮಸ್ಥಳ ಕ್ಷೇತ್ರದಿಂದ ಹಲವು ಜನೋಪಕಾರಿ ಕಾರ್ಯಗಳು ನಡೆಯುತ್ತಿದ್ದು, ಅವಹೇಳನ ಕಾರ್ಯ ನಡೆಯುತ್ತಿರುವುದು ಖೇದಕರ ಎಂದರು.ಪ್ರಮುಖರಾದ ರಾಮದಾಸ ಬಂಟ್ವಾಳ ಮಾತನಾಡಿ, ಸಮಾಜಪರ ಕಾರ್ಯ ನಡೆಸುತ್ತಿರುವ ಭವ್ಯ ಸಂಸ್ಕೃತಿ ನಾಶ ಮಾಡಬೇಕು ಎಂಬುದು ದೊಡ್ಡ ಷಡ್ಯಂತ್ರವಾಗಿದೆ ಎಂದರು. ಸುದರ್ಶನ ಜೈನ್, ಅಶೋಕ್ ಶೆಟ್ಟಿ ಸರಪಾಡಿ ಅವರು ಮಾತನಾಡಿ ನಿರಂತರ ಸುಳ್ಳು ಆಪಾದನೆಯನ್ನು ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ವಿರುದ್ಧ ಮಾಡಲಾಗುತ್ತಿದೆ ಎಂದರು.ಪ್ರಮುಖರಾದ ತುಂಗಪ್ಪ ಬಂಗೇರ, ಪ್ರವೀಣ್ ಕಾಡಬೆಟ್ಟು, ಸುಭಾಶ್ಚಂದ್ರ ಜೈನ್, ಪ್ರಭಾಕರ ಪ್ರಭು, ವಸಂತ ಮಣಿಹಳ್ಳ, ಸುರೇಶ್ ಕುಲಾಲ್, ಶೇಖರ ಸಾಮಾನಿ, ಪುರುಷೋತ್ತಮ ಮಜಲು, ನವೀನ್ ಚಂದ್ರ ಶೆಟ್ಟಿ, ರೊನಾಲ್ಡ್ ಡಿಸೋಜ, ಸದಾನಂದ ನಾವರ, ಜಯಕೀರ್ತಿ ಜೈನ್,  ಜಯಚಂದ್ರ ಬೊಲ್ಮಾರ್ ಮತ್ತಿತರರು ಉಪಸ್ಥಿತರಿದ್ದರು.

ಜಾಹೀರಾತು
Team bantwal news