79ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಬಿ.ಸಿ ರೋಡ್ ನ ತಾಲೂಕು ಆಡಳಿತ ಸೌಧದಲ್ಲಿ ಶುಕ್ರವಾರ ಕಾರ್ಯಕ್ರಮಗಳು ತಾಲೂಕು ಮಟ್ಟದ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಡೆಯಿತು.
ತಾಲೂಕು ಆಡಳಿತ ಸೌಧದ ಮುಂಭಾಗ ಬಂಟ್ವಾಳ ಶಾಸಕ ರಾಜೇಶ್ ಯು.ನಾಯ್ಕ್ ಉಪಸ್ಥಿತಿಯಲ್ಲಿ ಬಂಟ್ವಾಳ ತಹಸೀಲ್ದಾರ್ ಡಿ.ಅರ್ಚನಾ ಭಟ್ ಧ್ವಜಾರೋಹಣ ನೆರವೇರಿಸಿದರು. ಪೊಲೀಸ್, ಗೃಹರಕ್ಷಕ, ಸ್ಕೌಟ್ಸ್, ಗೈಡ್ಸ್ ನಿಂದ ಪಥಸಂಚಲ ನಡೆದು ಧ್ವಜಕ್ಕೆ ವಂದನೆ ಸಲ್ಲಿಸಲಾಯಿತು.
ಬಳಿಕ ಸಭಾ ಕಾರ್ಯಕ್ರಮ ಅಂಬೇಡ್ಕರ್ ಭವನದಲ್ಲಿ ನಡೆಯಿತು. ದಿನಾಚರಣೆ ಅಂಗವಾಗಿ ನಡೆಸಿದ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಬಂಟ್ವಾಳ ಎಸ್.ವಿ.ಎಸ್. ವಿದ್ಯಾಗಿರಿ ಹೈಸ್ಕೂಲ್ ವಿದ್ಯಾರ್ಥಿನಿ ಭೂಮಿಕಾ ಎಸ್. ಶೆಟ್ಟಿ ಮಾತನಾಡಿ, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರರನ್ನು ಸ್ಮರಿಸಿ, ಇಂದು ಶಿಕ್ಷಣ, ಆರೋಗ್ಯ, ಬಾಹ್ಯಾಕಾಶ, ಮಾಹಿತಿ ತಂತ್ರಜ್ಞಾನ, ವೈಜ್ಞಾನಿಕ ಸಂಶೋಧನೆಗಳಿಂದ ಭಾರತ ಗಮನ ಸೆಳೆದಿದೆ ಎಂದರು.
BHOOMIKA SHETTY
ಬುಡಾ ಅಧ್ಯಕ್ಷ ಬೇಬಿ ಕುಂದರ್ ಮಾತನಾಡಿ, ಸ್ವಾತಂತ್ರ್ಯ ದಿನಾಚರಣೆ ಎಂಬುದು ಹಬ್ಬದಂತೆ. ಇದನ್ನು ವಿಜೃಂಭಣೆಯಿಂದ ಆಚರಿಸುವುದು ನಮ್ಮ ಕರ್ತವ್ಯ ಎಂದರು. ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷೆ ಜಯಂತಿ ವಿ.ಪೂಜಾರಿ ಮಾತನಾಡಿ, ವಿದ್ಯಾರ್ಥಿಗಳು ಸ್ವೇಚ್ಛಾಚಾರ, ದುಶ್ಚಟಗಳಿಗೆ ದಾಸರಾಗದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ ಎಂದರು. ತಹಸೀಲ್ದಾರ್ ಡಿ.ಅರ್ಚನಾ ಭಟ್ ಸಂದೇಶ ನೀಡಿ, ತ್ಯಾಗ, ಬಲಿದಾನಗಳಿಂದ ದೊರಕಿದ ಸ್ವಾತಂತ್ರ್ಯವನ್ನು ಸಂರಕ್ಷಿಸುವ ಕೆಲಸವಾಗಬೇಕು ಎಂದರು.
B. VASU POOJARY
ಅಧ್ಯಕ್ಷತೆಯನ್ನು ವಹಿಸಿದ್ದ ಬಂಟ್ವಾಳ ಪುರಸಭಾಧ್ಯಕ್ಷ ಬಿ.ವಾಸು ಪೂಜಾರಿ ಲೊರೆಟ್ಟೊ ಮಾತನಾಡಿ ಜನಸಾಮಾನ್ಯರಿಗೆ ಮೂಲಸೌಕರ್ಯ ಒದಗಿಸಲು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮುತುವರ್ಜಿಯಿಂದ ಕೆಲಸ ಮಾಡಿದಾಗ ಸ್ವಾತಂತ್ರ್ಯ ದೊರಕಿದ್ದು ಸಾರ್ಥಕ ಎನಿಸುತ್ತದೆ ಎಂದರು.
BABY KUNDER
PRIZE DISTRIBUTION
ಈ ಸಂದರ್ಭ ನಾನಾ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವಿವಿಧ ಮನೋರಂಜನಾ ಕಾರ್ಯಕ್ರಮಗಳು ನಡೆದವು. ವೇದಿಕೆಯಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸಚಿನ್ ಕುಮಾರ್, ತಾಲೂಕು ಆರೋಗ್ಯಾಧಿಕಾರಿ ಡಾ. ಅಶೋಕ್ ಕುಮಾರ್ ರೈ, ಎಪಿಎಂಸಿ ಅಧಿಕಾರಿ ಶಶಾಂಕ್, ನಗರ ಪೊಲೀಸ್ ಠಾಣೆ ಎಸ್.ಐ. ಸಂದೀಪ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ನೋಣಯ್ಯ, ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಜೋ ಪ್ರದೀಪ್ ಡಿಸೋಜ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ವಿನಯ ಕುಮಾರಿ, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಆಶಾ ನಾಯಕ್ ಉಪಸ್ಥಿತರಿದ್ದರು. ತಾಪಂ ಇಒ ಸಚಿನ್ ಕುಮಾರ್ ವಂದಿಸಿದರು. ಶಿಕ್ಷಕರಾದ ಸುರೇಖಾ ಯಳವರ ಮತ್ತು ಗೋಪಾಲಕೃಷ್ಣ ನೇರಳಕಟ್ಟೆ ಕಾರ್ಯಕ್ರಮ ನಿರ್ವಹಿಸಿದರು.
PAGE 1
PAGE 2