OPTIC WORLD
ಮಂಗಳೂರು: ನಾವು ಆಪ್ತವಾಗಿ ಹರಟುವ, ಮಾಹಿತಿಗಳನ್ನು ಶೇರ್ ಮಾಡುವ, ಮಹತ್ವದ ಸಂಗತಿಗಳನ್ನೂ ಕಳುಹಿಸುವ ಪ್ರಬಲ ಸಾಮಾಜಿಕ ಜಾಲತಾಣ ವಾಟ್ಸಾಪ್ ಸುರಕ್ಷಿತವಾಗಿಲ್ಲ. ಅದೇ ನಂಬರ್ ಅನ್ನು ಯಾರೂ ಕಬ್ಜಾ ಮಾಡಿಕೊಂಡು ನಿಮ್ಮ ಸ್ನೇಹಿತರಿಗೆ, ಕಾಂಟಾಕ್ಟ್ ಗಳಿಗೆ ಮೆಸೇಜ್ ಕಳುಹಿಸುವುದಲ್ಲದೆ, ಹಣ ಕೂಡ ಕೇಳಬಹುದು…ಮಂಗಳವಾರ ಮೂರು ತಾಜಾ ಪ್ರಕರಣಗಳು ವರದಿಯಾಗಿದ್ದು, ವಿವರ ಇಲ್ಲಿದೆ.
ಡಿಜಿಟಲ್ ಜಗತ್ತಿನ ಕತ್ತಲ ಸಾಮ್ರಾಜ್ಯದ ದುಷ್ಟರು, ಸೈಬರ್ ಖದೀಮರು ವಾಟ್ಸಾಪ್ ಅನ್ನೇ ಅಸ್ತ್ರವಾಗಿಸಿಕೊಂಡು, ಖಾತೆಯನ್ನೇ ಹೈಜಾಕ್ ಮಾಡಿ, ಸ್ನೇಹಿತರು ಮತ್ತು ಕುಟುಂಬಸ್ಥರನ್ನೇ ಲೂಟಿ ಮಾಡುವ ಕೃತ್ಯಕ್ಕೆ ಹೊರಟಿದ್ದಾರೆ. ಇವತ್ತು ಇವರದ್ದು, ನಾಳೆ ಅವರದ್ದು, ನಾಡಿದ್ದು ನಮ್ಮ ನಂಬರ್ ಕೂಡ ಹೀಗೆ ಕಬ್ಜಾ ಆಗಬಹುದು.
ಪುತ್ತೂರಿನಲ್ಲಿ ಕೆಲಸ ಮಾಡುವ ಖಾಸಗಿ ಸಂಸ್ಥೆಯ ಉದ್ಯೋಗಿಯೊಬ್ಬರು, ಹಣಕಾಸಿಗೆ ಸಂಬಂಧಿಸಿದಂತೆಯೇ ಹೆಚ್ಚು ಕೆಲಸ ಮಾಡುವ ಹಿನ್ನೆಲೆಯಲ್ಲಿ ಅವರು ಹಣ ಕೇಳುವುದು ಹೊಸತೇನಲ್ಲ. ಹಾಗೆಯೇ ಅವರ ಕಾಂಟ್ಯಾಕ್ಟ್ ಲಿಸ್ಟ್ ನಲ್ಲಿರುವ ಅನೇಕ ಮಂದಿಗೆ ಬೆಳಗ್ಗೆ ಸುಮಾರು 11ರಿಂದ 12ರ ಅವಧಿಯಲ್ಲಿ ಮೆಸೇಜ್ ಒಂದು ಬಂದಿದೆ.
60000 urgent need
My UPI not working
Return money 2hours
Phonepe Googlepay *****9241745226 Avinash Kumar
ವಾಟ್ಸಾಪ್ ನಲ್ಲಿ ಈ ಮೆಸೇಜ್ ಸ್ನೇಹಿತರಿಗೆ ಬಂದಾಗ, ಏನಾಯಿತು ಇವರಿಗೆ ಎಂದು ಕರೆ ಮಾಡಲು ಹೊರಟರೆ, ಮೊಬೈಲ್ ಸ್ವಿಚ್ ಆಫ್. ಅವರ ಯುಪಿಐ ವರ್ಕ್ ಆಗ್ತಾ ಇಲ್ಲ, ಸ್ನೇಹಿತರ ನಂಬರ್ ಒಂದನ್ನು ಕೊಟ್ಟಿದ್ದಾರೆ, ಅವರಿಗಾದರು ಕರೆ ಮಾಡೋಣವೆಂದರೆ ಆ ನಿಗೂಢ ವ್ಯಕ್ತಿ ಸೋ ಕಾಲ್ಡ್ ಅವಿನಾಶ್ ಕುಮಾರ್ ಮೊಬೈಲ್ ಕೂಡ ವರ್ಕ್ ಆಗ್ತಿಲ್ಲ. ಹೀಗಾಗಿ ಯಾರು ಆ ನಂಬರ್ ಗೆ ದುಡ್ಡು ಹಾಕಿಲ್ಲ.
ಸೈಬರ್ ಕ್ರಿಮಿನಲ್ ಗಳು ಈ ನಂಬರ್ ಅನ್ನು ಹ್ಯಾಕ್ ಮಾಡಿ, ಅವರ ಸಂಪರ್ಕ ಪಟ್ಟಿಯಲ್ಲಿದ್ದ ಆಪ್ತ ಸ್ನೇಹಿತರಿಗೆ ತುರ್ತು ಸಂದೇಶ ರವಾನಿಸಿ ವಂಚಿಸಲು ಯತ್ನಿಸಿದ್ದಾರೆ. whatsapp ಹ್ಯಾಕ್ ಮಾಡಿ ಅವರದೇ ನಂಬರ್ ನಲ್ಲಿ ಸಂದೇಶ ಕಳುಹಿಸಿದ ವಂಚಕ, ಅರೆಬರೆ ಇಂಗ್ಲಿಷ್ನಲ್ಲಿ “ನನ್ನ UPI ಕೆಲಸ ಮಾಡುತ್ತಿಲ್ಲ, ತೀರಾ ತುರ್ತಾಗಿ ₹60,000 ಬೇಕಾಗಿದೆ. ಕೇವಲ ಎರಡು ಗಂಟೆಯೊಳಗೆ ವಾಪಸ್ ಮಾಡುತ್ತೇನೆ” ಎಂದು ಅಂಗಲಾಚಿದ್ದಾನೆ. ಈ ಹಣವನ್ನು ಅವಿನಾಶ್ ಕುಮಾರ್ ಎಂಬ ವ್ಯಕ್ತಿಯ 9241745226 ಸಂಖ್ಯೆಗೆ ಕಳುಹಿಸುವಂತೆ ಸೂಚಿಸಿದ್ದಾನೆ.ಸ್ನೇಹಿತನ ಕಷ್ಟಕ್ಕೆ ಮರುಗಿದರೂ, ಸಂದೇಶದ ಭಾಷೆ ಮತ್ತು ಅಪರಿಚಿತ ವ್ಯಕ್ತಿಯ ಖಾತೆಗೆ ಹಣ ಹಾಕಲು ಹೇಳಿದ್ದರಿಂದ ಸಂಶಯಗೊಂಡ ಗೆಳೆಯರು, ಅವರನ್ನು ಸಂಪರ್ಕಿಸಿದ್ದಾರೆ, ಆದರೆ, ಅವರ ಮೊಬೈಲ್ ಸಂಪರ್ಕಕ್ಕೆ ಸಿಗಲಿಲ್ಲ. ಇದು ವಂಚಕರ ಪೂರ್ವಯೋಜಿತ ತಂತ್ರವಾಗಿತ್ತು. ನಿಮ್ಮನ್ನು ಸಂಪರ್ಕಿಸಲು ಸಾಧ್ಯವಾಗದಂತೆ ಮಾಡಿ, ತುರ್ತಿನ ಲಾಭ ಪಡೆಯುವುದೇ ಅವರ ವಂಚನ ಕಾರ್ಯಶೈಲಿಯಾಗಿತ್ತು. ಘಟನೆಯಿಂದ ಆಘಾತಕ್ಕೊಳಗಾದ ತೊಂದರೆಗೆ ಒಳಗಾದ ವ್ಯಕ್ತಿಯೂ , ಕೂಡಲೇ ಪೊಲೀಸ್ ಠಾಣೆಗೆ ತೆರಳಿ ಮಾಹಿತಿ ನೀಡಿದ್ದಾರೆ. ವಂಚನೆಗೊಳಗಾದವರಿಗೆ ಪಾರ್ಸೆಲ್ ಇದೆಯೆಂದು ಒಂದು ಕರೆ ಬಂದಿರುತ್ತದೆ. ಅವರು ಕೊಟ್ಟ ನಂಬರ್ ಗೆ ಕರೆ ಮಾಡುವ ಮೊದಲು * # ಬಟನ್ ಗಳನ್ನು ಒತ್ತಲು ಹೇಳಿದ್ದಾರೆ. ಅದರಂತೆ ಕರೆ ಮಾಡಿದಾಗ ಪೂರ್ತಿ ಮೊಬೈಲ್ ಜಾಮ್ ಆಗಿದೆ. ತಕ್ಷಣವೇ ವಾಟ್ಸಾಪ್ ಹ್ಯಾಕರ್ ಕೈಯ ನಿಯಂತ್ರಣಕ್ಕೆ ಸಿಲುಕಿಕೊಂಡಿದೆ ಎನ್ನಲಾಗಿದೆ.
ಹಾಗಾದರೆ ಏನು ಮಾಡಬೇಕು?
ಕಾನೂನು ಕ್ರಮಗಳು ಈ ಪಿಡುಗನ್ನು ಮಟ್ಟಹಾಕಲು ಸಮಯ ತೆಗೆದುಕೊಳ್ಳಬಹುದು. ಆದರೆ, ನಿಮ್ಮನ್ನು ನೀವು ರಕ್ಷಿಸಿಕೊಳ್ಳುವುದು ನಿಮ್ಮ ಕೈಯಲ್ಲೇ ಇದೆ.