ತ್ಯಾಜ್ಯ ವಿಲೇವಾರಿ ಘಟಕ, ಪಾಣೆಮಂಗಳೂರು ಸೇತುವೆ, ಬೀದಿನಾಯಿ ಹಾವಳಿ ಸಹಿತ ಹಲವು ವಿಚಾರಗಳು ಬುಧವಾರ ನಡೆದ ಬಂಟ್ವಾಳ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಚರ್ಚೆಗೊಳಗಾದವು.
ಅಧ್ಯಕ್ಷ ಬಿ.ವಾಸು ಪೂಜಾರಿ ಲೊರೆಟ್ಟೊ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮುಖ್ಯಾಧಿಕಾರಿ ಮತ್ತಡಿ ಅವರು ಉಪಸ್ಥಿತರಿದ್ದು ಪೂರಕ ಮಾಹಿತಿ ನೀಡಿದರು. ಆರಂಭದಲ್ಲಿ ಇತ್ತೀಚೆಗೆ ನಿಧನರಾದ ಹಾಲಿ ಸದಸ್ಯ ಜನಾರ್ದನ ಚಂಡ್ತಿಮಾರ್ ಹಾಗೂ ಮಾಜಿ ಉಪಾಧ್ಯಕ್ಷೆ ಖತೀಜಮ್ಮ ನಿಧನಕ್ಕೆ ಸಂತಾಪ ಸೂಚಿಸಲಾಯಿತು.
ಬಂಟ್ವಾಳ ಪಾಣೆಮಂಗಳೂರು ಸೇತುವೆ ಸಾಮರ್ಥ್ಯ ದೃಢೀಕರಣ ಪತ್ರ ಎನ್.ಐ.ಟಿ.ಕೆ. ಸುರತ್ಕಲ್ ಅವರಿಂದ ಬಂದಿದ್ದು, ಅದರಂತೆ ಕ್ರಮ ಜರಗಿಸುವ ಕುರಿತು ತೀರ್ಮಾನಿಸಲಾಯಿತು. ಅದರ ಮಾಹಿತಿಯನ್ನು ಆರೋಗ್ಯ ನಿರೀಕ್ಷಕ ರತ್ನಪ್ರಸಾದ್ ಓದಿದರು. ಕಳೆದ ಮೀಟಿಂಗ್ ವೇಳೆ ಪಾಣೆಮಂಗಳೂರು ಸೇತುವೆ ಬಂದ್ ಮಾಡಿಸುವ ವಿಚಾರವಾಗಿ ಚರ್ಚೆ ನಡೆದಿದ್ದು, ಈ ಸಂದರ್ಭ ಆ ವಾರ್ಡ್ ವ್ಯಾಪ್ತಿಯ ಸದಸ್ಯರಾದ ತಾವು ವಿಷಯ ಪ್ರಸ್ತಾಪಿಸಿ, ಪೂರ್ತಿ ಬಂದ್ ಮಾಡುವುದರಿಂದ ಸಾರ್ವಜನಿಕರಿಗೆ ಆಗುವ ಅನಾನುಕೂಲಗಳ ಕುರಿತು ಗಮನ ಸೆಳೆದಿದ್ದೆವು. ಹಾಕಿದ್ದ ತಡೆಬೇಲಿಯನ್ನು ಯಾರೋ ತೆರವು ಮಾಡಿದ್ದು, ಇದಕ್ಕೆ ತಮ್ಮ ವಿರುದ್ಧ ಪೊಲೀಸ್ ಠಾಣೆಗೆ ತಹಸೀಲ್ದಾರ್ ದೂರು ನೀಡಿದ್ದು ಸರಿಯಲ್ಲ ಎಂದು ಅಬುಬಕರ್ ಸಿದ್ದೀಕ್ ಮತ್ತು ಇದ್ರೀಸ್ ಆಕ್ಷೇಪ ಸಲ್ಲಿಸಿ, ಅಧ್ಯಕ್ಷರು ಈ ವಿಷಯದ ಕುರಿತು ಗಮನಹರಿಸಲು ಆಗ್ರಹಿಸಿದರು.
OPTIC WORLD
ಬೀದಿ ನಾಯಿಗಳ ಉಪಟಳದಿಂದ ಕೊಡಂಗೆ ಸಹಿತ ಪುರಸಭಾ ವ್ಯಾಪ್ತಿಯ ಹಲವೆಡೆ ಇರುವ ಶಾಲಾ ಮಕ್ಕಳು ತೊಂದರೆ ಅನುಭವಿಸುವ ಕುರಿತು ಮಹಮ್ಮದ್ ಶರೀಫ್, ಮೊಹಮ್ಮದ್ ನಂದರಬೆಟ್ಟು, ಸಿದ್ದೀಕ್ ಗುಡ್ಡೆಯಂಗಡಿ ಸಹಿತ ಹಲವರು ಗಮನ ಸೆಳೆದರು.
ಕಂಚಿನಡ್ಕಪದವಿನಲ್ಲಿರುವ ಘನತ್ಯಾಜ್ಯ ಘಟಕದ ಸುರಕ್ಷತೆ ಬಗ್ಗೆ ಗಂಭೀರ ಚರ್ಚೆ ನಡೆಯಿತು. ಸುಮಾರು ಐದು ಕೋಟಿಗೂ ಅಧಿಕ ರೂಗಳ ಜನಸಾಮಾನ್ಯರ ದುಡ್ಡನ್ನು ಬಂಟ್ವಾಳ ಪುರಸಭೆಯ ಘನತ್ಯಾಜ್ಯ ನಿರ್ವಹಣೆ ಮಾಡುವ ಜಾಗವಾದ ಉಳ್ಳಾಲ ತಾಲೂಕಿನ ಸಜೀಪನಡು ಗ್ರಾಮದ ಕಂಚಿನಡ್ಕಪದವಿನ ತ್ಯಾಜ್ಯ ನಿರ್ವಹಣೆಗೆ ಇದುವರೆಗೆ ವ್ಯಯ ಮಾಡಲಾಗಿದೆ ಎಂದು ಅಂದಾಜಿಸಲಾಗಿದ್ದು, ಆದರೂ ಇದರ ನಿರ್ವಹಣೆ, ಕೆಲಸದ ವೈಖರಿ ಇಂದಿಗೂ ಯಕ್ಷಪ್ರಶ್ನೆಯಾಗಿಯೇ ಉಳಿದಿದೆ ಎಂದು ಬಂಟ್ವಾಳ ಪುರಸಭೆ ಹಿರಿಯ ಸದಸ್ಯ ಎ.ಗೋವಿಂದ ಪ್ರಭು ದೂರಿದರು. ಅಲ್ಲಿ ಏನಾಗುತ್ತಿದೆ ಎಂಬುದು ಊಹೆಗೂ ನಿಲುಕದ ವಿಚಾರದಂದಿತೆ ಎಂದು ಹರಿಪ್ರಸಾದ್ ಹೇಳಿದರು. ಇದಕ್ಕೆ ಪುರಸಭೆ ವಿನಿಯೋಗಿಸಿದ ಹಣ ಸಮುದ್ರಕ್ಕೆ ಕಲ್ಲು ಹಾಕಿದಂತಾಗಿದೆ ಎಂದು ರಾಮಕೃಷ್ಣ ಆಳ್ವ ಹೇಳಿದರು. ಯಾರಿಗಾದರೂ ಜವಾಬ್ದಾರಿ ನೀಡಿ ಎಂದು ಮಹಮ್ಮದ್ ಶರೀಫ್ ಹೇಳಿದರು.
ಬೀದಿದೀಪ ಖರೀದಿ ವಿಚಾರವೇನಾಯಿತು? ಟೆಂಡರ್ ಯಾವಾಗ? ಎಂದು ಮಹಮ್ಮದ್ ಶರೀಫ್ ಹೇಳಿದರು. ಸಿದ್ದೀಕ್ ಗುಡ್ಡೆಯಂಗಡಿ ದನಿಗೂಡಿಸಿದರು. ಒಂದು ಬೀದಿ ದೀಪ ಹಾಕಲು ಆಗದಿದ್ದರೆ ಏನು ಫಲ ಎಂದು ಪ್ರಶ್ನಿಸಿದ ಸಿದ್ದೀಕ್, ಅಧ್ಯಕ್ಷರು ಜವಾಬ್ದಾರಿ ವಹಿಸಬೇಕು ಎಂದು ಕಿವಿಮಾತು ಹೇಳಿದರು. ಇಪ್ಪತ್ತು ದಿನಗಳಲ್ಲಿ ಎಲ್ಲ ವಾರ್ಡ್ ನಲ್ಲಿ ಬೀದಿದೀಪ ಉರಿಯುತ್ತದೆ ಎಂದು ಇಂಜಿನಿಯರ್ ಡೊಮಿನಿಕ್ ಡಿಮೆಲ್ಲೊ ಹೇಳಿದರು. ಮುಖ್ಯಾಧಿಕಾರಿ ಬೀಳ್ಕೊಡುಗೆ ಸಮಾರಂಭದಲ್ಲಿ ದಲ್ಲಾಳಿಗಳು ಇದ್ದ ವಿಚಾರ ಭಾರೀ ಚರ್ಚೆಗೆ ಕಾರಣವಾಯಿತು.ಇಲ್ಲಿ ಪ್ರಸ್ತಾವಿಸಿದ ವಿಷಯಗಳಲ್ಲದೆ ಹಲವು ವಿಷಯಗಳ ಕುರಿತು ಸುದೀರ್ಘ ಚರ್ಚೆ, ವಾದಗಳು ನಡೆದವು. ಸದಸ್ಯರಾದ ಹಸೈನಾರ್, ಜೀನತ್ ಫಿರೋಜ್, ಜೆಸಿಂತಾ ಮತ್ತಿತರರು ವಿವಿಧ ವಿಷಯಗಳ ಕುರಿತು ಮಾತನಾಡಿದರು. ಸಿಬ್ಬಂದಿ ರಝಾಕ್ ಸಭೆಯ ನಡಾವಳಿಗಳನ್ನು ವಾಚಿಸಿದರು.