ರಾಜ್ ಬಿ ಶೆಟ್ಟಿ ಅವರ ಲೈಟರ್ ಬುದ್ಧ ಫಿಲಂಸ್ ನಿರ್ಮಾಣ ಸಂಸ್ಥೆಯಲ್ಲಿ ನಿರ್ಮಾಣಗೊಂಡ ಸು ಪ್ರಮ್ ಸೋ(ಸುಲೋಚನಾ ಫ್ರಂ ಸೋಮೇಶ್ವರ) ಕನ್ನಡ ಸಿನಿಮಾ ಜು.25ರಂದು ತೆರೆಗಪ್ಪಳಿಸಲು ಸಿದ್ದವಾಗಿದೆ.
OPTIC WORLD
ಈಗಾಗಲೇ ಸಿನಿಮಾದ ಟ್ರೈಲರ್, ವೀಡಿಯೋ ಹಾಡುಗಳು ಬಿಡುಗಡೆಯಾಗಿದ್ದು, ಸಿನಿ ಪ್ರಿಯರ ಮೆಚ್ಚುಗೆ ಗಳಿಸಿದೆ.ಕರಾವಳಿಯ ಸೊಗಡನ್ನು ಗರುಡ ಗಮನ ವೃಷಭ ವಾಹನ ಮೂಲಕ ತೋರಿಸಿ ಗಮನ ಸೆಳೆದ ರಾಜ್ ಬಿ.ಶೆಟ್ಟಿ ಅವರ ಲೈಟರ್ ಬುದ್ಧ ತಂಡ ಇಲ್ಲೂ ಅದೇ ಕಮಾಲ್ ಮಾಡ ಹೊರಟಿದೆ.
ರಂಗಭೂಮಿಯಲ್ಲಿ ಖ್ಯಾತಿಗಳಿಸಿದ, ಸಿನಿಮಾ ರಂಗದಲ್ಲೂ ಜನಪ್ರಿಯತೆ ಪಡೆದ ಯುವ ನಿರ್ದೇಶಕ ಜೆ.ಪಿ. ತೂಮಿನಾಡು ಅವರು ಸು ಫ್ರಮ್ ಸೋ ಸಿನಿಮಾದಲ್ಲಿ ನಟಿಸಿ ಮೊಟ್ಟ ಮೊದಲ ಬಾರಿಗೆ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾವನ್ನು ಶಶಿಧರ್ ಶೆಟ್ಟಿ ಬರೋಡಾ, ರವಿ ರೈ ಕಳಸ, ರಾಜ್ ಬಿ ಶೆಟ್ಟಿ ಮೂವರು ಸೇರಿ ನಿರ್ಮಿಸಿದ್ದಾರೆ. ಚಂದ್ರಶೇಖರ್ ಅವರ ಛಾಯಾಗ್ರಹಣ, ಸುಮೇದ್ ಕೆ. ಅವರ ಸಂಗೀತ ನಿರ್ದೇಶನ, ಸಂದೀಪ್ ತುಳಸಿದಾಸ್ ಅವರ ಹಿನ್ನೆಲೆ ಸಂಗೀತ ಇರುವ ಈ ಚಿತ್ರಕ್ಕೆ ಅರ್ಜುನ್ ರಾಜ್ ಸಾಹಸ ಸಂಯೋಜನೆ ಮಾಡಿದ್ದಾರೆ. ಗ್ರಾಮೀಣ ಪ್ರದೇಶಗಳಾದ ಅಳದಂಗಡಿ, ನಾರಾವಿ, ವೇಣೂರು, ಕಜೆಕಾರು, ಕಕ್ಯಪದವು, ಸರಪಾಡಿ ಮೊದಲಾದೆಡೆ ಹಾಗೂ ಇತರ ಕಡೆ ಸಿನಿಮಾ 50 ದಿನಗಳ ಕಾಲ ಚಿತ್ರೀಕರಣಗೊಂಡಿದೆ.
ಸಿನಿಮಾದ ಡ್ಯಾಂಕ್ಸ್ ಅಂಥಮ್ ವಿಡಿಯೋ ಸಾಂಗ್ ಬಿಡುಗಡೆ ಆಗಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿದೆ.. ಈ ಹಾಡಿಗೆ ಸಾಹಿತ್ಯ ರಾಜ್ ಬಿ ಶೆಟ್ಟಿ ಅವರದ್ದಾಗಿದ್ದು, ಅನುರಾಗ್ ಕುಲಕರ್ಣಿ ಅವರು ಹಾಡಿದ್ದಾರೆ: ಸುಮೇದ್ ಕೆ. ಸಂಗೀತ ನೀಡಿದ್ದಾರೆ. ವಿನಾಯಕ ಆಚಾರ್ಯ ನೃತ್ಯ ಸಂಯೋಜನೆ ಇದೆ.
ರಾಜ್ ಬಿ.ಶೆಟ್ಟಿ ಅವರ ಪ್ರಕಾರ, “ರಂಗಭೂಮಿಯಲ್ಲಿ ಸಾಕಷ್ಟು ಹೆಸರು ಮಾಡಿರುವ ಗೆಳೆಯ ಜೆಪಿ ತೂಮಿನಾಡು ಮೊದಲ ಬಾರಿಗೆ ನಿರ್ದೇಶನ ಮಾಡಿರುವ ಚಿತ್ರವಿದು. ಆರು ವರ್ಷಗಳ ಹಿಂದೆಯೇ ಅವರು ಸಿದ್ಧ ಮಾಡಿಕೊಂಡಿದ್ದ ಈ ಕಥೆ ಈಗ ಸಿನಿಮಾ ರೂಪ ಪಡೆದುಕೊಂಡಿದೆ. ನಾನು ಬಹಳ ಇಷ್ಟಪಡುವ ಕಾಮಿಡಿ ಜಾನರ್‌ನ ಚಿತ್ರವಿದು ಎನ್ನುತ್ತಾರೆ. ನಿರ್ದೇಶಕ ಜೆ.ಪಿ. ತೂಮಿನಾಡು ಅವರು, “ಸಿನಿಮಾ ನಿರ್ದೇಶಕ ನಾಗಬೇಕೆಂದು ಚಿತ್ರರಂಗಕ್ಕೆ ಬಂದ ನಾನು, ನಟನಾದೆ. ಈಗ ಕೆಲವು ವರ್ಷಗಳ ನಂತರ ಮೊದಲ ಚಿತ್ರವನ್ನು ನಿರ್ದೇಶನ ಮಾಡಿದ್ದೇನೆ. ಇದೊಂದು ಕಾಲ್ಪನಿಕ ಕಥೆ. ನೋಡುಗರನ್ನು ನಗೆಗಡಲಿನಲ್ಲಿ ತೇಲಿಸುವ ಕಥೆಯೂ ಹೌದು ಎನ್ನುತ್ತಾರೆ .
ಚಿತ್ರದಲ್ಲಿ ಜೆ.ಪಿ. ತೂಮಿನಾಡು, ಶನೀಲ್ ಗೌತಮ್, ಪ್ರಕಾಶ್ ಕೆ.ತೂಮಿನಾಡು, ದೀಪಕ್ ರೈ ಪಾಣಾಜೆ, ಮೈಮ್ ರಾಮದಾಸ್, ಅರ್ಜುನ್ ಕಜೆ , ಸಂಧ್ಯಾ ಅರೆಕೆರೆ, ಶಿವಪ್ರಕಾಶ್ ಪೂಂಜ ಮತ್ತಿತರ ರಂಗಭೂಮಿ ಕಲಾವಿದರು ನಟಿಸಿದ್ದಾರೆ.
ಈಗಾಗಲೇ ಪ್ರೀಮಿಯರ್ ಶೋಗಳು ಪ್ರದರ್ಶಿತಗೊಂಡಿದ್ದು, ಭರ ಪೂರ ಮನರಂಜನೆ ಒದಗಿಸಿದ್ದು, ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ. ಜು.೨೫ ಕ್ಕೆ ರಾಜ್ಯಾದ್ಯಾಂತ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳಲಿದೆ. ಚಿತ್ರವನ್ನು ನೋಡಿ ಪ್ರೋತ್ಸಾಹಿಸುವಂತೆ ಚಿತ್ರ ತಂಡ ವಿನಂತಿಸಿದೆ.