ಕಲ್ಲಡ್ಕ ಸಮೀಪವೇ ಇರುವ ನರಹರಿಪರ್ವತ ದೇವಸ್ಥಾನದಲ್ಲಿ ಆಟಿ ಅಮಾವಾಸ್ಯೆ ತೀರ್ಥಸ್ನಾನ ಪ್ರಸಿದ್ಧ. ಇಲ್ಲಿನ ಶಂಖ, ಚಕ್ರ, ಗದಾ ಪದ್ಮ ಎಂಬ ಕೆರೆಗಳಲ್ಲಿ ನೀರಿನ ಪ್ರೋಕ್ಷಣೆ ಮಾಡಿಕೊಳ್ಳಲು ಸಾವಿರಾರು ಮಂದಿ ನರಹರಿಬೆಟ್ಟ ಹತ್ತುತ್ತಾರೆ. ಈ ಪುಣ್ಯಕಾರ್ಯಕ್ಕೆ ಈ ವರ್ಷ ಆಗಮಿಸುವುದು ಹೇಗೆ ಎಂಬುದು ಭಕ್ತರ ಆತಂಕ.
ಇದಕ್ಕೆ ಕಾರಣವಿಷ್ಟೇ. ಬಿ.ಸಿ.ರೋಡ್ ನಿಂದ ಅಡ್ಡಹೊಳೆವರೆಗೆ ರಾಷ್ಟ್ರೀಯ ಹೆದ್ದಾರಿ ಅಗಲಗೊಂಡು ಚತುಷ್ಪಥವಾಗುತ್ತಿದ್ದು, ಹಲವೆಡೆ ರಸ್ತೆಯ ಪಥವೇ ಬದಲಾಗುತ್ತಿದೆ. ಈ ಬದಲಾವಣೆ ಪರ್ವದಲ್ಲಿ ಎತ್ತರದಿಂದ ಸಾಗುತ್ತಿರುವ ರಸ್ತೆ ನರಹರಿ ಪರ್ವತ ಬಳಿ ತಗ್ಗಿನಲ್ಲಿ ಸಂಚರಿಸುತ್ತಿದೆ. ಇದರಿಂದ ರಸ್ತೆಯೇನೋ ಸುಗಮವಾಯಿತು. ಭಕ್ತರು ಬೆಟ್ಟ ಹತ್ತುವುದು ಹೇಗೆ ಎಂಬುದೇ ಪ್ರಶ್ನೆ.
ಚತುಷ್ಪಥ ಹೆದ್ದಾರಿ ಕಾಮಗಾರಿ ಹಿನ್ನೆಲೆ ಕಲ್ಲಡ್ಕ ಹಾಗೂ ಮೆಲ್ಕಾರ್ ನಡುವಿನ ಬೋಳಂಗಡಿ ತಿರುವು ಹಾಗೂ ಏರು ರಸ್ತೆ ಇದೀಗ ನೇರರಸ್ತೆಯಾಗಿ ಪರಿವರ್ತನೆ ಹೊಂದಿದ್ದು, ಏರು ರಸ್ತೆಯನ್ನು ತಗ್ಗಿಸಿ, ಕಾಂಕ್ರಿಟೀಕರಣದ ಚತುಷ್ಪಥ ರಸ್ತೆ ಸಿದ್ದವಾಗುತ್ತಿದೆ. ಈ ಚತುಷ್ಪಥ ಹೆದ್ದಾರಿ ಕಾಮಗಾರಿಯ ಕಾರಣದಿಂದ ಹೆದ್ದಾರಿಯಿಂದ ನೇರ ನರಹರಿ ಪರ್ವತ ರಸ್ತೆಗೆ ಸಂಪರ್ಕಿಸುತ್ತಿದ್ದ ರಸ್ತೆಯನ್ನು ಕಡಿದು ಹಾಕಲಾಗಿದ್ದು, ಪಕ್ಕದಲ್ಲಿಯೇ ಸರ್ವೀಸ್ ರಸ್ತೆ ನಿರ್ಮಿಸುವ ಕಾಮಗಾರಿ ಪ್ರಗತಿಯಲ್ಲಿದೆ. ಈ ಕಾರಣದಿಂದ ಚತುಷ್ಪಥ ರಸ್ತೆಯಿಂದ ನರಹರಿ ಪರ್ವತ ಮತ್ತಷ್ಟು ಎತ್ತರ ಹಾಗೂ ಸುತ್ತು ಬಳಸಿ ಹೋಗಬೇಕಾಗಿರುವ ಹಿನ್ನೆಲೆಯಲ್ಲಿ ಮತ್ತಷ್ಟು ದೂರವಾಗಿದೆ.
ಯೂಟರ್ನ್ ಬರಬೇಕು
ಕಲ್ಲಡ್ಕ ಕಡೆಯಿಂದ ಹೋಗುವವರಿಗೆ ಸರ್ವೀಸ್ ರಸ್ತೆ ನಿರ್ಮಾಣಗೊಳ್ಳುತ್ತಿದ್ದು, ಬಿ.ಸಿ.ರೋಡು,ಮಂಗಳೂರಿನಿಂದ ಬರುವ ಭಕ್ತರು ಕಲ್ಲಡ್ಕ ಫ್ಲೈ ಓವರ್ ಮೇಲೆ ಸಾಗದೆ, ಕಲ್ಲಡ್ಕ ಸರ್ವೀಸ್ ರಸ್ತೆಗೆ ಸಾಗಿ ಕೆಸಿ ರೋಡು ತಿರುವಿನಲ್ಲಿ ಯೂಟರ್ನ್ ಹೊಡೆದು ನರಹರಿ ಪರ್ವತಕ್ಕೆ ಸರ್ವೀಸ್ ರಸ್ತೆಯ ಪಯಣಮಾಡಬೇಕಾಗಿದೆ.
ಆಟಿ ಅಮವಾಸ್ಯೆಯ ತೀರ್ಥ ಸ್ನಾನಕ್ಕೆ ಬರುವ ಬಹುತೇಕ ಮಂದಿ ಕಾಲ್ನಡಿಗೆಯಲ್ಲಿಯೇ ಸಂಚರಿಸುತ್ತಾರೆ. ವಾಹನಗಳಲ್ಲಿ ಬರುವವರು ತಮ್ಮ ವಾಹನಗಳನ್ನು ಹೆದ್ದಾರಿ ಪಕ್ಕದಲ್ಲಿ ನಿಲ್ಲಿಸಿ ಕಾಲ್ನಡಿಗೆಯಲ್ಲಿ ಬೆಟ್ಟ ಏರುತ್ತಿದ್ದರು. ಆದರೆ ಈ ಬಾರಿ ಹೆದ್ದಾರಿಯಲ್ಲಿ ಕಾಮಗಾರಿ ಕಾರಣದಿಂದ ವಾಹನ ನಿಲುಗಡೆಗೆ ಸ್ಥಳಾವಕಾಶ ದ ಕೊರತೆ ಕಾಡಲಿದೆ. ಸಂಚಾರಿ ಪೊಲೀಸರಿಗೂ ಹೆಚ್ಚು ಸಮಸ್ಯೆ ಉಂಟಾಗುವುದು ಖಚಿತ. ಹೆದ್ದಾರಿ ಪಕ್ಕದಲ್ಲಿ ನರಹರಿ ಪರ್ವತ ಶ್ರೀ ಸದಾಶಿವ ದೇವಸ್ಥಾನದ ದ್ವಾರ ಈ ಹಿಂದೆ ಇದ್ದು, ಅಗೆದು ಹಾಕಿರುವ ಮಣ್ಣಿನ ನಡುವೆ ಈ ದ್ವಾರವೂ ಕಾಣಿಸುತ್ತಿಲ್ಲ.
OPTIC WORLD