ಜಿಲ್ಲಾ ಸುದ್ದಿ

PUTTUR – MANGALORE NONSTOP : ಪುತ್ತೂರು ಬಿಟ್ರೆ ಮಂಗಳೂರು ಮಾತ್ರ – ಹೊರಟಿವೆ ಏಳು ಕೆ.ಎಸ್.ಆರ್.ಟಿ.ಸಿ. ಬಸ್ – ಏನಿದರ ವಿಶೇಷ? ವಿವರಗಳು ಇಲ್ಲಿವೆ

ದ.ಕ.ಜಿಲ್ಲೆಯ ಮಂಗಳೂರು ಮತ್ತು ಪುತ್ತೂರು ಕೆಎಸ್‌ಆರ್‌ಟಿಸಿ ವಿಭಾಗಗಳ ಇತಿಹಾಸದಲ್ಲೇ ಮೊದಲ ಬಾರಿಗೆ ಜಿಲ್ಲಾ ಕೇಂದ್ರ ಮತ್ತು ತಾಲೂಕು ಕೇಂದ್ರವೊಂದರ ಮಧ್ಯೆ ತಡೆರಹಿತ ಬಸ್ ಸೇವೆ ಆರಂಭಗೊಂಡಿದೆ.

ಪುತ್ತೂರು ಎಕ್ಸ್‌ಪ್ರೆಸ್ ಎಂಬ ಹೆಸರಿನಲ್ಲಿ ಮಂಗಳೂರು- ಪುತ್ತೂರು ಮಧ್ಯೆ ಓಡಲಿರುವ ಕೆಎಸ್‌ಆರ್‌ಟಿಸಿ ಬಸ್ ಸೇವೆಗೆ ಸೋಮವಾರ ಚಾಲನೆ ನೀಡಲಾಗಿದೆ. ಶಾಸಕ ಅಶೋಕ್ ರೈ  ಅವರ ಕನಸಿನ ಕೂಸಿಗೆ  ಸ್ವತಃ ಶಾಸಕರೇ ಹಸಿರು ನಿಶಾನೆ ತೋರಿದ್ದು,  ಪುತ್ತೂರಿನಿಂದ ಮಂಗಳೂರಿಗೆ ದಿನ ನಿತ್ಯ ಹೋಗಿ ಬರುವ ಸಾವಿರಾರು ಪ್ರಯಾಣಿಕರ ಪಾಲಿಗೆ ಇದು ಅತ್ಯುತ್ತಮ ಸೇವೆಯಾಗಿ ಪರಿಗಣಿಸಲಿದೆ.

ಜಾಹೀರಾತು

ಹೊರಟಿವೆ ಏಳು ಬಸ್‌ಗಳು:

ಪುತ್ತೂರು ಎಕ್ಸ್‌ಪ್ರೆಸ್ ಸೇವೆಗೆಂದೇ ಪುತ್ತೂರು ವಿಭಾಗದಿಂದ ೭ ಬಸ್‌ಗಳನ್ನು  ಸಜ್ಜುಗೊಳಿಸಲಾಗಿದೆ. ಈ ೭ ಬಸ್‌ಗಳು ಪ್ರತೀ ದಿನ ೨ ನಗರಗಳ ನಡುವೆ ಒಟ್ಟು ೬೦ ಟ್ರಿಪ್ ನಡೆಸಲಿವೆ. ಬೆಳಗ್ಗಿನಿಂದ ಮುಸ್ಸಂಜೆಯವರೆಗೆ ಎರಡೂ ನಗರಗಳಿಂದ ಆಗಮನ- ನಿರ್ಗಮನವಿರಲಿದೆ.

20 ನಿಮಿಷಕ್ಕೊಂದು ಬಸ್:

ಪ್ರಸ್ತುತ ಪುತ್ತೂರು- ಸ್ಟೇಟ್‌ಬ್ಯಾಂಕ್ (ಮಂಗಳೂರು) ನಡುವೆ ಲಿಮಿಟೆಡ್ ಎಕ್ಸ್‌ಪ್ರೆಸ್ ಬಸ್‌ಗಳಿದ್ದು, ಹತ್ತಾರು ನಿಲುಗಡೆ ಇರುವ ಗ್ರಾಮಾಂತರ ಸಾರಿಗೆ ಬಸ್‌ಗಳೂ ಇವೆ. ಇದಲ್ಲದೆ ಪುತ್ತೂರು-ಬಿಜೈ (ಮಂಗಳೂರು ಬಸ್ ನಿಲ್ದಾಣ) ನಡುವೆ ಪುತ್ತೂರು ಡಿಪ್ಪೋದ ಬಸ್‌ಗಳ ಜತೆಗೆ ಮಡಿಕೇರಿ, ಮೈಸೂರು ಡಿಪ್ಪೊಗಳ ವೇಗದೂತ ಬಸ್ ಸೌಕರ್ಯಗಳಿವೆ.

ಇಷ್ಟಿದ್ದರೂ, ನಿತ್ಯ ಪುತ್ತೂರಿನಿಂದ ಮಂಗಳೂರಿಗೆ ಹೋಗಿ ಬರುವವರ ಸಂಖ್ಯೆ ಸಾವಿರಾರು ಇರುವ ಕಾರಣ ನಾನ್‌ಸ್ಟಾಪ್ (ತಡೆರಹಿತ) ಬಸ್ ಬೇಕೆಂಬ ಬೇಡಿಕೆ ಕೇಳಿ ಬರುತ್ತಿತ್ತು. ಇದನ್ನು ಗಮನಿಸಿದ ಶಾಸಕ ಅಶೋಕ್ ರೈ, ಅಧಿಕಾರಿಗಳ ಜತೆ ಚರ್ಚಿಸಿ ಹೆಚ್ಚುವರಿ ಸಿಬ್ಬಂದಿ ಸರಕಾರದಿಂದ ಕೇಳಿ ಪಡೆದು ಹೊಸ ಯೋಜನೆ ಆರಂಭಿಸಿದ್ದಾರೆ.

ಪುತ್ತೂರು ಬಿಟ್ರೆ ಮಂಗ್ಳೂರು..

ಪುತ್ತೂರು ಎಕ್ಸ್‌ಪ್ರೆಸ್ ಬಸ್‌ಗಳು ಪುತ್ತೂರು ಬಿಟ್ಟರೆ ಎಲ್ಲೂ ನಿಲುಗಡೆ ಇಲ್ಲದೆ ಮಂಗಳೂರು ಸೇರುತ್ತದೆ. ಪುತ್ತೂರು ನಗರದೊಳಗೆ ಮುರದವರೆಗೆ ಪಿಕಪ್ ಪಾಯಿಂಟ್ ಇದೆ. ಅದೇ ರೀತಿ ಮಂಗಳೂರು ನಗರದಲ್ಲಿ  ಸ್ಟೇಟ್‌ಬ್ಯಾಂಕ್‌ನಿಂದ ಪಡೀಲ್‌ವರೆಗೆ ಪಿಕಪ್ ಪಾಯಿಂಟ್ ಇದೆ. ಮಡಿಕೇರಿ, ಮೈಸೂರಿನಿಂದ ಬರುವ ವೇಗದೂತ ಬಸ್‌ಗಳಿಗೆ ಪುತ್ತೂರು- ಮಂಗಳೂರು ಮಧ್ಯೆ ೭೧ ರೂ. ಟಿಕೆಟ್ ದರವಿದ್ದು, ಅದನ್ನೇ ಈ ಬಸ್‌ಗಳಿಗೂ ನಿಗದಿಪಡಿಸಲಾಗಿದೆ. ಮಹಿಳೆಯರಿಗೆ ಶಕ್ತಿ ಯೋಜನೆಯಡಿ ಉಚಿತ ಪ್ರಯಾಣವಿದೆ.

ಉದ್ಯೋಗಸ್ಥರಿಗೆ ವರದಾನ

ಸುಬ್ರಹ್ಮಣ್ಯ ಭಾಗದಿಂದ ಮಂಗಳೂರಿಗೆ ನಿತ್ಯ ಹೋಗಿ ಬರುವವರು ಈಗ ಮಂಗಳೂರು- ಸುಬ್ರಹ್ಮಣ್ಯ ರೋಡ್ ಪ್ಯಾಸೆಂಜರ್  ರೈಲು ಬಳಸುತ್ತಿದ್ದಾರೆ. ಪುತ್ತೂರಿನಿಂದ ನಿತ್ಯ ಬಸ್‌ನಲ್ಲಿ ಹೋಗಿ ಬರುತ್ತಿರುವವರಿಗೆ ತೀರಾ ಒತ್ತಡವಿತ್ತು. ಬಹುತೇಕ ಬಸ್‌ಗಳು ಶಟ್ಲ್ ಆಗಿದ್ದರೆ, ವೇಗದೂತ ಬಸ್‌ಗಳು ಕೂಡ ಹತ್ತಕ್ಕಿಂತ ಹೆಚ್ಚು ನಿಲುಗಡೆ ಹೊಂದಿದ್ದವು. ಇದಲ್ಲದೆ ವಿದ್ಯಾರ್ಥಿಗಳಿಗೆ ಪೀಕ್ ಅವರ್‌ನಲ್ಲಿ ಬಸ್ ಸಾಕಾಗುತ್ತಿರಲಿಲ್ಲ. ಶಕ್ತಿ ಯೋಜನೆಯಿಂದಾಗಿ ಮಹಿಳಾ ಬಳಕೆದಾರರು ಅಧಿಕವಿರುವ ಕಾರಣ ಪುರುಷರಿಗೆ ಸಮಸ್ಯೆಯಾಗುತ್ತಿತ್ತು. ಈಗ ಹಾಲಿ ಬಸ್‌ಗಳಿಗೆ ಹೊರತಾಗಿ ೬೦ ಟ್ರಿಪ್ ಜಾರಿಗೊಳಿಸಿರುವುದು ಎಲ್ಲ ಸಮಸ್ಯೆ ನಿವಾರಿಸಿದೆ.

ಸಾಕಷ್ಟು ಸಮಯ ಉಳಿತಾಯ..

ಪುತ್ತೂರಿನಿಂದ ಮಂಗಳೂರು ತಲುಪಲು ಈಗ ಒಂದೂವರೆ ಗಂಟೆ, ಕೆಲವೊಮ್ಮೆ ಒಂದುಮುಕ್ಕಾಲು ಗಂಟೆ ತಗುಲುತ್ತದೆ. ಹೊಸ ಎಕ್ಸ್‌ಪ್ರೆಸ್ ಬಸ್ಸಿನಿಂದಾಗಿ ೧ ಗಂಟೆಯಲ್ಲಿ ತಲುಪುವ ನಿರೀಕ್ಷೆ ಇದೆ. ಕೆಲ ದಿನಗಳ ಕಾಲ ಖುದ್ದು ನಮ್ಮ ಅಧಿಕಾರಿಗಳೇ ಬಸ್ಸಿನಲ್ಲಿ ಸಂಚರಿಸಿ ಪರೀಕ್ಷಿಸಲಿದ್ದಾರೆ. ಇದೊಂದು ಉತ್ತಮ ಪ್ರಯೋಗ ಎಂದು ಪುತ್ತೂರು ಡಿಪೊ ಮೆನೇಜರ್ ಸುಬ್ರಹ್ಮಣ್ಯ ಪ್ರಕಾಶ್ ಹೇಳಿದರು.

ಕಾರು ಬಿಟ್ಟು ಬಸ್ ಹತ್ತಿ

ಇನ್ನು ಕೇವಲ 1 ಗಂಟೆಯಲ್ಲಿ ಪುತ್ತೂರು- ಮಂಗಳೂರು ಸಂಪರ್ಕ ಸಾಧ್ಯ. ಕಾರಲ್ಲಿ ಮಂಗಳೂರಿಗೆ ಹೋಗಿ ಬರುವವರು ಕೂಡ ಇನ್ನು ಕಾರು ಬಿಟ್ಟು ಬಸ್ ಹತ್ತಬಹುದು. ಜನರ ಬಹುಕಾಲದ ಬೇಡಿಕೆ ಈಡೇರಿಸಿದ್ದೇವೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು..

ಗುಲಾಬಿ, ಲಡ್ಡು ಹಂಚಿದ ಶಾಸಕರು: ಸೋಮವಾರ ಪುತ್ತೂರಿನ ಕೆಎಸ್‌ಆರ್‌ಟಿಸಿ ಕೋಟಿ-ಚೆನ್ನಯ ಬಸ್ ನಿಲ್ದಾಣದಲ್ಲಿ ಎಕ್ಸ್‌ಪ್ರೆಸ್ ಬಸ್ ಸೇವೆಗೆ ಚಾಲನೆ ನೀಡಿದ ಶಾಸಕ ಅಶೋಕ್ ರೈ, ಮೊದಲ 2 ಬಸ್‌ಗಳ ಎಲ್ಲ ಪ್ರಯಾಣಿಕರಿಗೆ ಗುಲಾಬಿ ಹೂ ಮತ್ತು ಲಡ್ಡು ನೀಡಿ ಶುಭ ಕೋರಿದರು.

For the first time in the history of the Mangalore and Puttur KSRTC divisions of D.K. district, a non-stop bus service has been started between the district headquarters and a taluk headquarters

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts

ಎಲ್ಲರಿಗೂ, ಎಲ್ಲೆಡೆಯೂ ಆರೋಗ್ಯ, ಜಾಗೃತಿಗೆ ಬೀದಿನಾಟಕ

ಬಂಟ್ವಾಳದ ಹಲವೆಡೆ ಸಂಸಾರ ಜೋಡುಮಾರ್ಗ ತಂಡದಿಂದ ಕಾರ್ಯಕ್ರಮ, ಸಾರ್ವಜನಿಕರಿಗೆ ಮಾಹಿತಿ (more…)

16 hours ago