ಹೆದ್ದಾರಿಯಲ್ಲಿ ಬಸ್ಸುಗಳು ಸಂಚರಿಸುವ ವೇಳೆ ಸ್ಟಾಪ್ ಇದ್ದರೆ, ರಸ್ತೆಯ ಎಡಭಾಗದಲ್ಲಿರುವ ಬಸ್ ಬೇ ಯಲ್ಲಿ ನಿಲ್ಲಿಸಬೇಕು ಎಂಬುದು ಕಡತಗಳಲ್ಲಿರುವ ನಿಯಮ. ಆದರೆ ಸುರತ್ಕಲ್ ಬಿ.ಸಿ.ರೋಡ್ ಚತುಷ್ಪಥ ಹೆದ್ದಾರಿ ನಿರ್ಮಾಣಗೊಂಡಾಗ ಶಿಸ್ತಿನಲ್ಲಿ ಟೋಲ್ ವಸೂಲಿಯಾಯಿತೇ ವಿನಃ ಬಸ್ ಗಳಿಗೆ ನಿಲ್ಲಲು ಜಾಗವೇ ಮೀಸಲಿಡಲಿಲ್ಲ. ಪ್ರಯಾಣಿಕರಿಗಂತೂ ಇಲ್ಲವೇ ಇಲ್ಲ. ಇದೇ ಚಾಳಿ ಬಿ.ಸಿ.ರೋಡ್ ಅಡ್ಡಹೊಳೆ ರಾಷ್ಟ್ರೀಯ ಹೆದ್ದಾರಿಯಲ್ಲೂ ಕಾಣಿಸುತ್ತಿದೆ ಎನ್ನುತ್ತಾರೆ ಪ್ರಯಾಣಿಕರು. ಅದಕ್ಕೆ ಕಲ್ಲಡ್ಕವನ್ನು ಅವ್ರು ಉದಾಹರಣೆಯಾಗಿ ನೀಡುತ್ತಾರೆ.
PHOTO COURTESY: VARUN KALLADKA
2.1 ಕಿ.ಮೀ ಉದ್ದದ ಸುದೀರ್ಘ ಷಟ್ಪಥ ಫ್ಲೈಓವರ್ ನಿರ್ಮಾಣಗೊಂಡ ಬಳಿಕ ಅದರ ಸರ್ವೀಸ್ ರೋಡ್ ಗಳ ನಿರ್ಮಾಣವನ್ನು ಕಲ್ಲಡ್ಕದಲ್ಲಿ ಪೂರ್ಣಗೊಳಿಸಲಾಗುತ್ತಿದೆ. ಕೆ.ಎಸ್.ಆರ್.ಟಿ.ಸಿ. , ಖಾಸಗಿ ಬಸ್ಸುಗಳು ಈ ರಸ್ತೆಯಲ್ಲೇ ಸಾಗಿ ಸ್ಥಳೀಯ ಪ್ರಯಾಣಿಕರನ್ನು ಹತ್ತಿಸಬೇಕು. ಆದರೆ ಎಲ್ಲಿಯೂ ಬಸ್ ಗಳಿಗೆ ನಿಲ್ಲಲು ಪ್ರತ್ಯೇಕ ಜಾಗವಾಗಲೀ, ಪ್ರಯಾಣಿಕರಿಗೆ ಹತ್ತಲು ಸೂರು ನಿರ್ಮಾಣವಾಗಲೀ ಇದುವರೆಗೂ ನಿರ್ಮಾಣವಾಗಿಲ್ಲ.
PHOTO COURTESY: VARUN KALLADKA
ಎಲ್ಲೆಲ್ಲಿ ಪ್ರಯಾಣಿಕರು ಕಾಯುತ್ತಾರೆ?
ಕಲ್ಲಡ್ಕದಲ್ಲಿ ಬಿ.ಸಿ.ರೋಡ್ ನಿಂದ ಪುತ್ತೂರಿಗೆ ತೆರಳುವ ಸರ್ವೀಸ್ ರಸ್ತೆಯಲ್ಲಿ ನಯಾರಾ ಪೆಟ್ರೋಲ್ ಪಂಪ್ ಸಮೀಪ, ಕೆ.ಟಿ. ಹೋಟೆಲ್ ಸಮೀಪ, ಕಲ್ಲಡ್ಕ ಶ್ರೀರಾಮ ವಿದ್ಯಾಸಂಸ್ಥೆಗೆ ತಿರುಗುವ ಸಮೀಪ ಇದುವರೆಗೂ ಬಸ್ ಗಳು ನಿಂತು ಪ್ರಯಾಣಿಕರನ್ನು ಹತ್ತಿಸುತ್ತಿತ್ತು. ಈಗಲೂ ಇದು ಮುಂದುವರೆದಿದೆ. ಇಲ್ಲಿ ಕಾಂಕ್ರೀಟ್ ರಸ್ತೆಯ ಪಕ್ಕದಲ್ಲೇ ಪ್ರಯಾಣಿಕರು ನಿಲ್ಲುತ್ತಾರೆ, ರಸ್ತೆಯಲ್ಲೇ ಬಸ್ಸುಗಳು ನಿಲ್ಲುತ್ತವೆ. ಬಸ್ ಸ್ಟ್ಯಾಂಡ್ ಅಂತೂ ಇಲ್ಲವೇ ಇಲ್ಲ.
ವಿಟ್ಲ ಕಡೆಗೆ ತಿರುಗುವ ಜಾಗದ ಸಮೀಪ ಹಿಂದೆ ನಿರ್ಮಿಸಲಾದ ಪ್ರಯಾಣಿಕರ ತಂಗುದಾಣವಿದೆಯಾದರೂ ಅದು ಶಿಥಿಲಸ್ವರೂಪದಲ್ಲಿದೆ. ಇಲ್ಲಿ ಯಾರೂ ಕುಳಿತುಕೊಳ್ಳುವುದಿಲ್ಲ.
ಹಾಗೆಯೇ, ಸೂರಿಕುಮೇರು ಕಡೆಯಿಂದ ಕಲ್ಲಡ್ಕ ಪೇಟೆಗೆ ಬಂದು ಮಂಗಳೂರು ಕಡೆ ತೆರಳುವ ರಸ್ತೆಯಲ್ಲಿಯೂ ಪ್ರಯಾಣಿಕರಿಗೆ ಸರಿಯಾದ ಸೂರಿಲ್ಲ. ಸರಕಾರಿ ಪ್ರಾಥಮಿಕ ಶಾಲೆಯ ಬಳಿ, ಕೆ.ಸಿ.ರೋಡ್ ತಿರುಗುವ ಜಾಗದಲ್ಲೂ ಬಸ್ ನಿಲ್ದಾಣವಿಲ್ಲ. ಇಲ್ಲೂ ಪ್ರಯಾಣಿಕರ ಹಿತದೃಷ್ಟಿಯನ್ನು ಗಮನದಲ್ಲಿರಿಸಬೇಕಾದ ಅವಶ್ಯವಿದೆ.