PINK TOILET, BCROAD
ದಕ್ಷಿಣ ಕನ್ನಡ ಜಿಲ್ಲೆಯ ಪ್ರಥಮ ಎಂಬ ಹೆಗ್ಗಳಿಕೆಯೊಂದಿಗೆ ಆರಂಭಗೊಂಡಿದ್ದ ಬಂಟ್ವಾಳ ತಾಲೂಕು ಆಡಳಿತ ಸೌಧದ ಬಳಿ ಇರುವ ಮಹಿಳೆಯರಿಗೆಂದೇ ಮೀಸಲಾದ ಪಿಂಕ್ ಟಾಯ್ಲೆಟ್ ಈಗ ಬಂದ್ ಆಗಿದೆ. ಬಂಟ್ವಾಳ ಪುರಸಭೆಗೆ ಬಂದ ನಗರೋತ್ಥಾನ ಯೋಜನೆಯ ಅನುದಾನದಲ್ಲಿ ಸುಮಾರು ೨೫ ಲಕ್ಷ ರೂ.ಗಳಿಂದ ಪಿಂಕ್ ಶೌಚಾಲಯ ನಿರ್ಮಾಣಗೊಂಡಿದ್ದು, ಇದು ಕೇವಲ ಶೌಚಾಲಯ ಮಾತ್ರ ಆಗಿರದೆ ಅದರಲ್ಲಿ ತಾಯಂದಿರಿಗೆ ಹಾಲುಣಿಸುವ ಕೊಠಡಿ, ಮಹಿಳೆಯರ ವಿಶ್ರಾಂತಿ ಕೊಠಡಿ, ಸ್ಯಾನಿಟರಿ ನ್ಯಾಪ್‌ಕಿನ್ ಮೊದಲಾದ ವ್ಯವಸ್ಥೆಗಳನ್ನು ಒಳಗೊಂಡ ಸಂಕೀರ್ಣವಾಗಿ ನಿರ್ಮಾಣಗೊಂಡಿತ್ತು.
PINK TOILET, BCROAD
ಇದರ ನಿರ್ಮಾಣ ವೇಳೆ ಸಾಕಷ್ಟು ಚರ್ಚೆಗಳು ನಡೆದಿದ್ದವು. 2023ರಲ್ಲಿ ನಿರ್ಮಾಣಗೊಂಡು, 2024ರಲ್ಲಿ ಇದು ಮಹಿಳೆಯರ ಬಳಕೆಗೆ ಲಭ್ಯವಾಗಿತ್ತು. ಇದೀಗ ಆರಂಭಗೊಂಡು ಒಂದೇ ವರ್ಷದಲ್ಲಿ ಬಾಗಿಲು ಹಾಕಿದೆ.
ಮಹಿಳೆಯರ ಸಾಕಷ್ಟು ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಈ ವ್ಯವಸ್ಥೆಯನ್ನು ಬಂಟ್ವಾಳ ಪುರಸಭೆ ಖಾಸಗಿ ಸಂಸ್ಥೆಯೊಂದಕ್ಕೆ ನಿರ್ವಹಣೆಗೆ ನೀಡಿತ್ತು. ಆದರೆ ಅದನ್ನು ಉಪಯೋಗಿಸುವ ಮಹಿಳೆಯರ ಸಂಖ್ಯೆ ಕಡಿಮೆಯಾದ ಹಿನ್ನೆಲೆಯಲ್ಲಿ ನಿರ್ವಹಣೆಯ ಸಮಸ್ಯೆ ತಲೆದೋರಿದ್ದಾಗಿ ಹೇಳಲಾಗಿದೆ. ಹೀಗಾಗಿ ಕಳೆದ ಹಲವು ಸಮಯಗಳಿಂದ ಶೌಚಾಲಯ ಮುಚ್ಚಿದೆ.
ಶೌಚಾಲಯದಲ್ಲಿ ನಿರ್ವಹಣೆ ಸಂಸ್ಥೆಯ ಓರ್ವ ಮಹಿಳಾ ಸಿಬಂದಿ ಕೆಲಸ ಮಾಡುತ್ತಿದ್ದು, ಶೌಚಾಲಯವು ಪ್ರತಿನಿತ್ಯವೂ ತೆರೆಯುತ್ತಿರಲಿಲ್ಲ ಎಂಬ ಮಾತು ಕೆಲ ದಿನಗಳಿಂದ ಕೇಳಿಬರುತ್ತಿತ್ತು.
ಇದೀಗ ಕಳೆದ ಸುಮಾರು ೧೫ ದಿನಸಗಳಿಂದ ಸಂಪೂರ್ಣ ಮುಚ್ಚಿದ ಸ್ಥಿತಿಯಲ್ಲಿದೆ. ಇದು ಬಿ.ಸಿ.ರೋಡಿನ ನಗರದ ಮಧ್ಯದಲ್ಲಿಯೇ ಇರುವುದರಿಂದ ಮಹಿಳೆಯರು ಅಲ್ಲಿಗೆ ಹೋಗುವುದಕ್ಕೆ ಹಿಂದೇಟು ಹಾಕುತ್ತಾರೆ ಎಂಬ ಅಭಿಪ್ರಾಯವಿದ್ದು, ದಿನಕ್ಕೆ ಬೆರಳೆಣಿಕೆಯ ಮಂದಿ ಬರುವುದರಿಂದ ನಿರ್ವಹಣೆ ಮಾಡುವ ಸಂಸ್ಥೆಗೂ ಹೊರೆಯಾಗುತ್ತಿದೆ.
ಪಕ್ಕದಲ್ಲೇ ಪುರುಷರ ಶೌಚಾಲಯ ನಿರ್ಮಾಣ
ಪಿಂಕ್ ಶೌಚಾಲಯಕ್ಕೆ ಮಹಿಳೆಯರು ಕಡಿಮೆ ಸಂಖ್ಯೆಯಲ್ಲಿ ಭೇಟಿ ನೀಡುತ್ತಿರುವುದರಿಂದ ಅದರ ನಿರ್ವಹಣೆ ಹೊರೆಯಾಗುತ್ತಿದೆ ಎನ್ನುವ ಕಾರಣಕ್ಕೆ ಅದರ ಪಕ್ಕದಲ್ಲಿರುವ ಜಾಗದಲ್ಲಿ ಪುರುಷರ ಶೌಚಾಲಯ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಬಂಟ್ವಾಳ ಪುರಸಭಾಧ್ಯಕ್ಷ ಬಿ.ವಾಸು ಪೂಜಾರಿ ಯೋಜನೆ ಹಾಕಿದ್ದಾರೆ. ನಿರ್ವಹಣೆ ಮಾಡುವ ಸಂಸ್ಥೆಗೆ ಆದಾಯ ಹೆಚ್ಚು ಸಿಗುವುದರ ಜೊತೆಗೆ ಸಮರ್ಪಕ ನಿರ್ವಹಣೆ ಸಾಧ್ಯ ಎಂಬ ನಂಬಿಕೆ ಇದೆ.
ಪಿಂಕ್ ಶೌಚಾಲಯವನ್ನು ಕಡಿಮೆ ಸಂಖ್ಯೆಯ ಮಹಿಳೆಯರು ಉಪಯೋಗ ಮಾಡುವುದರಿಂದ ನಿರ್ವಹಣೆಗೆ ತೊಂದರೆಯಾಗಿದ್ದು, ಮುಂದೆ ಪಕ್ಕದಲ್ಲಿ ಖಾಲಿ ಇರುವ ಜಾಗದಲ್ಲಿ ಪುರುಷರ ಉಪಯೋಗಕ್ಕೂ ಶೌಚಾಲಯ ನಿರ್ಮಾಣಗೊಂಡಲ್ಲಿ ನಿರ್ವಹಣೆಗೆ ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಯೋಜನೆ ಹಾಕಿಕೊಳ್ಳಲಾಗುತ್ತಿದೆ ಎನ್ನುತ್ತಾರೆ ಬಂಟ್ವಾಳ ಪುರಸಭಾಧ್ಯಕ್ಷ ಬಿ.ವಾಸು ಪೂಜಾರಿ.
The pink toilet exclusively for women near the Bantwal Taluk Administration Building, which was opened with the distinction of being the first in the Dakshina Kannada district, is now closed.