– ARTICLE BY: ಅರವಿಂದ ಹೆಬ್ಬಾರ್ ಮುಂಡಾಜೆ ( ARAVINDA HEBBAR MUNDAJE)
“ಪ್ರಥಮ ಹಂತದ ಔಷಧ ಸಿಂಪಡಣೆ ಮಳೆಗೆ ಆಗಿದ್ದು ಇದೀಗ ನಿರಂತರ ಸುರಿಯುವ ಮಳೆಯಿಂದ ಸಿಂಪಡಣೆ ಸಾಧ್ಯವಾಗುತ್ತಿಲ್ಲ.ಮಳೆ ಇರುವಾಗ ಔಷಧ ಸಿಂಪಡಿಸಿದರೂ ಅದು ಪರಿಣಾಮಕಾರಿಯಾಗುವುದಿಲ್ಲ.ಈಗಾಗಲೇ ತೋಟದಲ್ಲಿ ಕೊಳೆರೋಗದ ಲಕ್ಷಣ ಕಂಡುಬರುತ್ತಿದೆ” ಎನ್ನುತ್ತಾರೆ ಇಂದಬೆಟ್ಟಿನ ಅಡಿಕೆ ಕೃಷಿಕ ಜಯಾನಂದ ಬಂಗೇರ. ಪ್ರಸ್ತುತ ಸನ್ನಿವೇಶದಲ್ಲಿ ಬಹುತೇಕ ಅಡಿಕೆ ಬೆಳೆಗಾರರ ಸ್ಥಿತಿಯೂ ಹೀಗೆಯೇ ಆಗಿದೆ. ಈ ಬಾರಿ ಮಳೆ ನಿರಂತರವಾಗಿ ಸುರಿಯುತ್ತಿರುವುದು ಕೊಳೆರೋಗಕ್ಕೆ ಕಾರಣವಾಗುತ್ತಿದೆ.
ಶಿಲೀಂದ್ರಗಳ ಮೂಲಕ ಹರಡುವ ಕೊಳೆರೋಗ ಸಾಮಾನ್ಯ ಮತ್ತು ತುಂತುರು ಮಳೆಗೆ ವೇಗವಾಗಿ ಪಸರಿಸುತ್ತದೆ. ಒಮ್ಮೆ ಆರಂಭವಾದರೆ ನಿಯಂತ್ರಣ ಕಷ್ಟ. ಬಿಸಿಲು ಹಾಗೂ ಮಳೆಯ ವಾತಾವರಣ ಇದ್ದರೆ ಹೆಚ್ಚು ಅಪಾಯಕಾರಿ. ಒಂದು ಬಾರಿ ಔಷದ ಸಿಂಪಡಿಸಲು ಎಕರೆಗೆ ಸುಮಾರು 12 ಸಾವಿರ ರೂ.ಗಿಂತ ಅಧಿಕ ವೆಚ್ಚ ತಗುಲುತ್ತದೆ ವರ್ಷಕ್ಕೆ ಮೂರರಿಂದ ನಾಲ್ಕು ಬಾರಿ ಇದು ಪುನರಾವರ್ತನೆಯಾಗುತ್ತದೆ.
ಕಳೆದ ಎರಡು ತಿಂಗಳಿನಿಂದ ಕರಾವಳಿಯ ಹೆಚ್ಚಿನ ಭಾಗಗಳಲ್ಲಿ ಸುರಿಯುತ್ತಿರುವ ನಿರಂತರ ಮಳೆ ಅಡಿಕೆ ಕೃಷಿಗೆ ಕೊಳೆರೋಗ ಹರಡುವ ಭೀತಿ ತಂದೊಡ್ಡಿದೆ. ಅಡಿಕೆ ಮಾರುಕಟ್ಟೆ ದರ ಏರಿಳಿತವಾದರೆ, ಕೃಷಿಕರ ಜೀವನದಲ್ಲೂ ಏರುಪೇರಾಗುತ್ತದೆ. ಹಾಗೆಯೇ ಹವಾಮಾನ ವೈಪರೀತ್ಯವೂ ಇದಕ್ಕೆ ಪೂರಕವಾಗಿ ಪರಿಣಮಿಸುತ್ತದೆ. ರಾಜ್ಯದ ಸುಮಾರು 11 ಜಿಲ್ಲೆಗಳಲ್ಲಿ ಅಡಿಕೆ ಬೆಳೆ ಕೃಷಿಕರ ಅವಿಭಾಜ್ಯ ಅಂಗವಾಗಿದೆ.ಅಡಕೆ ಮಾರುಕಟ್ಟೆಯಲ್ಲಿ ಬೆಲೆ ಏರಿಳಿತ ಕಾಣುವುದರಿಂದ ಅಡಕೆ ಕೃಷಿಕರ ಜೀವನದಲ್ಲೂ ಏರುಪೇರು ಸಂಭವಿಸುತ್ತದೆ.
ಕಳೆದ ವರ್ಷ ಭಾರಿ ಮಳೆಯಿಂದ ವಿಪರೀತ ಕೊಳೆ ರೋಗದಿಂದ ಹೆಚ್ಚಿನ ತೋಟಗಳಲ್ಲಿ ಅರ್ಧಕ್ಕರ್ಧ ಪಸಲು ಇರಲಿಲ್ಲ. ಪ್ರಸ್ತುತ ಅಡಕೆಗೆ 475 ರೂ. ಆಸುಪಾಸು ದರ ಇದೆ. ಇದು ಉತ್ತಮವಾದ ದರವೂ ಹೌದು. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಅಡಿಕೆ ಫಸಲು ಉತ್ತಮವಾಗಿದೆ ಆದರೆ ನಿರಂತರ ಸುರಿಯುತ್ತಿರುವ ಮಳೆಯಿಂದ ಅಡಿಕೆ ಕೃಷಿಕರಿಗೆ ಫಸಲನ್ನು ಕಾಪಾಡುವುದು ಸವಾಲಾಗಿ ಪರಿಣಮಿಸಿದೆ. ‘
ಸಾಮಾನ್ಯವಾಗಿ ಮೇ ಮಧ್ಯ ಭಾಗದಿಂದ ಜೂನ್ ತಿಂಗಳ ಆರಂಭದಲ್ಲಿ ಸಣ್ಣ ಅಡಿಕೆ ಬೆಳೆಯಲು ಆರಂಭವಾಗುತ್ತದೆ. ಈ ಸಮಯ ಬೋರ್ಡೋ ಮಿಶ್ರಣ ಸಿಂಪಡಣೆ ಅಗತ್ಯ. ಒಂದು ತಿಂಗಳು ಅಥವಾ 40 ದಿನಗಳಲ್ಲಿ ಇನ್ನೊಂದು ಸಿಂಪಡಣೆ ಮಾಡಬೇಕು. ಈ ಬಾರಿ ಮೇ ಕೊನೆ ವಾರದಿಂದಲೇ ಭಾರಿ ಮಳೆಯಾಗುತ್ತಿದೆ. ಇದು ಅಡಿಕೆ ಸಿಂಪಡಣೆಗೆ ತೊಂದರೆ ಉಂಟು ಮಾಡಿದೆ.
ಆದರೆ ಎಡೆಬಿಡದೆ ಸುರಿಯುತ್ತಿರುವ ಮಳೆ ಇದಕ್ಕೆ ಅವಕಾಶ ನೀಡುತ್ತಿಲ್ಲ. ಇದರಿಂದ ಅನೇಕ ಕಡೆ ತೋಟಗಳಲ್ಲಿ ಬೋರ್ಡೋ ಮಿಶ್ರಣದ ಸಿಂಪಡಣೆಗೆ ಅವಕಾಶ ಸಿಕ್ಕಿಲ್ಲ. ಇದು ಕೊಳೆರೋಗ ಆರಂಭಕ್ಕೆ ಕಾರಣವಾಗಿದ್ದು ಇದೀಗ ಹೆಚ್ಚಿನ ತೋಟಗಳಲ್ಲಿ ಅಡಕೆ ಉದುರತೊಡಗಿದೆ. ಮಳೆ ಬಿಡಲು ಕೃಷಿಕರು ಕಾಯುತ್ತಿದ್ದು ಔಷಧ ಸಿಂಪಡಣೆಗೆ ದಿನಗಣನೆ ಮಾಡುತ್ತಿದ್ದಾರೆ.
ನುರಿತ ಕೆಲಸಗಾರರ ಅಲಭ್ಯತೆ
ಒಂದೆಡೆ ಅಡಕೆ ಬೆಳೆಗೆ ಮಳೆ ತೊಂದರೆ ನೀಡುತ್ತಿದ್ದರೆ ಇನ್ನೊಂದೆಡೆ ಔಷಧ ಸಿಂಪಡಿಸುವ ಕಾರ್ಮಿಕರ ಕೊರತೆ ಇದೆ ಅಡಕೆ ಔಷಧ ಸಿಂಪಡಣೆಗೆ ಸಾಕಷ್ಟು ಯಂತ್ರಗಳ ಆವಿಷ್ಕಾರವಾಗಿದ್ದರು,ಅವು ಇನ್ನಷ್ಟು ಅಭಿವೃದ್ಧಿ ಹೊಂದಿದರೆ ಮಾತ್ರ ಪರಿಣಾಮಕಾರಿಯಾಗಬಹುದು. ಬೆರಳೆಣಿಕೆಯ ನುರಿತ ಕಾರ್ಮಿಕರು ಅನೇಕ ತೋಟಗಳಲ್ಲಿ ಔಷಧ ಸಿಂಪಡಸುತ್ತಾರೆ ಇದರಿಂದ ಸಮಯಕ್ಕೆ ಸರಿಯಾಗಿ ಔಷಧ ಸಿಂಪಡಿಸಲು ಸಾಧ್ಯವಾಗುತ್ತಿಲ್ಲ ಇದೇ ರೀತಿ ಮಳೆ ಮುಂದುವರಿದರೆ ಔಷಧ ಸಿಂಪಡಣೆಯು ಸದ್ಯ ಅಸಾಧ್ಯವಾಗಿದೆ. ಸಿಂಪಡಣೆ ಆಗದಿದ್ದರೆ ಕೊಳರೋಗ ಹರಡುವುದು ಖಚಿತ. ಇದು ಮುಂದಿನ ವರ್ಷದ ಫಸಲಿಗೆ ಮಾರಕವಾಗಲಿದೆ.
The ongoing heavy rains across much of the coast over the past two months have increased the risk of rot disease spreading to areca nut farms.