ಕಟ್ಟಡ ಮತ್ತು ಇತರ ನಿರ್ಮಾಣ ಕಾಮಗಾರಿಗಳಿಗೆ ಕೆಂಪು ಕಲ್ಲು ಮತ್ತು ಮರಳಿನ ಅಭಾವದಿಂದ ಕಾರ್ಮಿಕರಿಗೆ ಕೆಲಸ ಲಭಿಸುತ್ತಿಲ್ಲ. ಇದರಿಂದ ದೈನಂದಿನ ಆದಾಯವನ್ನೇ ನಂಬಿಕೊಂಡಿರುವ ಕೆಲಸಗಾರರಿಗೆ ತೀವ್ರ ಸಮಸ್ಯೆ ಉಂಟಾಗಿದ್ದು, ಇದಕ್ಕೆ ಸೂಕ್ತ ಕ್ರಮ ಕೈಗೊಂಡು ಕಟ್ಟಡ ಕಾರ್ಮಿಕರು ತಮ್ಮ ಜೀವನ ನಿರ್ವಹಿಸಲು ಅನುವು ಮಾಡಿಕೊಡಬೇಕು ಎಂದು ಭಾರತೀಯ ಮಜ್ದೂರ್ ಸಂಘ ಸಂಯೋಜಿತ ದಕ್ಷಿಣ ಕನ್ನಡ ಜಿಲ್ಲಾ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಮಜ್ದೂರ್ ಸಂಘದ ವತಿಯಿಂದ ಬಂಟ್ವಾಳದಲ್ಲಿ ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲೆಯಲ್ಲಿ ತಲೆದೋರಿರುವ ಕೆಂಪುಕಲ್ಲು ಹಾಗೂ ಮರಳಿನ ಅಭಾವದ ಸಮಸ್ಯೆಯನ್ನು ದ.ಕ.ಜಿಲ್ಲಾಧಿಕಾರಿಗಳು ಬಗೆಹರಿಸಿ ಕಟ್ಟಡ ಕಾರ್ಮಿಕರಿಗೆ ಜೀವನ ನಿರ್ವಹಿಸಲು ಅನುವು ಮಾಡಿಕೊಡುವಂತೆ ಒತ್ತಾಯಿಸಲಾಯಿತು.
ಬಿಎಂಎಸ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ವಸಂತಕುಮಾರ ಮಣಿಹಳ್ಳ ಈ ಸಂದರ್ಭ ಮಾತನಾಡಿ, ರಾಜ್ಯ ಸರಕಾರವು ಸ್ಪಷ್ಟವಾದ ಕಾನೂನು ರೂಪಿಸದ ಕಾರಣ, ಕಾರ್ಮಿಕರು ಕೆಲಸವಿಲ್ಲದೆ ಕುಟುಂಬ ಪೋಷಣೆಗೂ ತೊಂದರೆ ಅನುಭವಿಸುವ ಸ್ಥಿತಿ ಹೊಂದಿದ್ದಾರೆ. ಸಾಲದ ಕಂತು ಪಾವತಿಸುವುದೂ ಸವಾಲಾಗಿದೆ, ಸರಕಾರ ಈ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದರು.
ತಾಲೂಕು ಆಟೋ ರಿಕ್ಷಾ ಚಾಲಕ ಮಾಲೀಕರ ಸಂಘದ ಅಧ್ಯಕ್ಷ ವಿಶ್ವನಾಥ್ ಚಂಡ್ತಿಮಾರ್, ಕಾರ್ಯದರ್ಶಿ ಶ್ರೀಕಾಂತ್ ಪಾಣೆಮಂಗಳೂರು, ಪ್ರಮುಖರಾದ ನಾರಾಯಣ ಶೆಟ್ಟಿ, ಸುರೇಶ್, ನವೀನ್, ಉಮಾಶಂಕರ್, ವಿಶ್ವನಾಥ್ ಕಲಾಯಿ ಮೊದಲಾದವರು ಉಪಸ್ಥಿತರಿದ್ದರು. ಬಳಿಕ ದ.ಕ.ಜಿಲ್ಲಾಧಿಕಾರಿಗಳಿಗೆ ನೀಡಿದ ಮನವಿಯನ್ನು ತಹಸೀಲ್ದಾರ್ ಪರವಾಗಿ ಉಪತಹಸೀಲ್ದಾರ್ ನರೇಂದ್ರನಾಥ ಮಿತ್ತೂರು ಸ್ವೀಕರಿಸಿದರು.
Workers unemployed due to the lack of red stones and sand – BMS organized union demands to resolve the issue at BANTWAL