ಈ ವರ್ಷ ಇದ್ದಕ್ಕಿದ್ದಂತೆ ಕೇರಳದ ಪುಣ್ಯಕ್ಷೇತ್ರವೊಂದು ಗಮನ ಸೆಳೆಯುತ್ತಿದೆ. ಸೋಶಿಯಲ್ ಮೀಡಿಯಾದಲ್ಲಂತೂ ಕೇರಳ ಕಣ್ಣೂರು ಜಿಲ್ಲೆಯಲ್ಲಿರುವ ಕೊಟ್ಟಿಯೂರು ಕ್ರೇಝ್ ಸೃಷ್ಟಿಸಿದೆ. ಇಲ್ಲೇನು ವಿಶೇಷ?ಕಣ್ಣೂರು ಜಿಲ್ಲೆಯಲ್ಲಿರುವ ಕೊಟ್ಟಿಯೂರು ಶಿವ ಕ್ಷೇತ್ರದಲ್ಲಿ ವರ್ಷಕ್ಕೊಂದು ಬಾರಿ 27 ದಿನಗಳ ವೈಶಾಖ ಮಹೋತ್ಸವ ನಡೆಯುತ್ತಿದ್ದು, ಈ ವರ್ಷ ಹಠಾತ್ತನೇ ಕೊಟ್ಟಿಯೂರಿನ ಕೀರ್ತಿ ಸಂಚಲನ ಮೂಡಿಸಿತು.
ದಕ್ಷಯಜ್ಞದ ಪುರಾಣ ಕಥೆಯೊಂದಿಗೆ ಸಂಬಂಧವಿರುವ ಕೊಟ್ಟಿಯೂರು ಸನ್ನಿಧಿಯಲ್ಲಿ ಪರಮೇಶ್ವರನ ಉದ್ಭವ ಲಿಂಗ ದರ್ಶನಕ್ಕಾಗಿ ಸಾವಿರಾರು ಭಕ್ತರು ಹೋಗಿ ಬಂದಿದ್ದಾರೆ. ಜುಲೈ 4ರವರಗೆ ಮಹೋತ್ಸವ ನಡೆಯಲಿದ್ದು, ಪ್ರತೀ ದಿನ ಪುತ್ತೂರು, ಸುಳ್ಯ, ಕಡಬ, ಬೆಳ್ತಂಗಡಿ, ಬಂಟ್ವಾಳ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಿಂದಲೇ ಸಾವಿರಾರು ಭಕ್ತರು ಹೋಗುತ್ತಿದ್ದಾರೆ.
ವಾವಲಿ ನದಿ ತಟದಲ್ಲಿರುವ ಕೊಟ್ಟಿಯೂರು ಕ್ಷೇತ್ರಸುಮಾರು 30 ಸಾವಿರ ಎಕರೆ ವನ್ಯಧಾಮ ವ್ಯಾಪ್ತಿಯಲ್ಲಿ ಬರುತ್ತದೆ. ಹತ್ತಾರು ಪ್ರಾಚೀನ ಸಾಂಪ್ರದಾಯಿಕ ಆಚರಣೆಗಳು ಈಗಲೂ ಇಲ್ಲಿ ಮೂಲ ರೂಪದಲ್ಲೇ ಉಳಿದುಕೊಂಡಿವೆ. ಈ ವರ್ಷ ಕೊಟ್ಟಿಯೂರು ವೈಶಾಖ ಮಹೋತ್ಸವಕ್ಕೆ ಡಿಜಿಟಲ್ ಮಾಧ್ಯಮದಲ್ಲಿ ವ್ಯಾಪಕ ಪ್ರಚಾರ ದೊರಕಿದ್ದು ಜನಸಾಗರಕ್ಕೆ ಕಾರಣವೆನ್ನಲಾಗಿದೆ. ಮೊಬೈಲ್ ಸ್ಟೇಟಸ್, ಡಿ.ಪಿ.ಗಳಲ್ಲಿ ಕೊಟ್ಟಿಯೂರು ನಿತ್ಯ ಕಂಗೊಳಿಸುತ್ತಿದೆ. ಯೂಟ್ಯೂಬ್‌ನಲ್ಲಿ ಕೊಟ್ಟಿಯೂರಿನ ಹೇರಳ ವೀಡಿಯೋಗಳಿದ್ದು, ಲಕ್ಷಾಂತರ ಜನ ವೀಕ್ಷಿಸುತ್ತಿರುವುದನ್ನು ಗಮನಿಸಬಹುದು. ಈ ಬಾರಿ ಕೇರಳದಿಂದಲೂ ಭಾರೀ ಸಂಖ್ಯೆಯ ಭಕ್ತರು ಹೋಗುತ್ತಿದ್ದಾರೆ. ಇಲ್ಲಿನ ಸ್ಥಳಪುರಾಣವೇನು?
ಪ್ರಜಾಪತಿ ದಕ್ಷ ಮಹಾರಾಜ ಯಾಗ ಮಾಡಿದ ಜಾಗವಿದು ಎಂಬುದು ಐತಿಹ್ಯ. ಶಿವನ ಪತ್ನಿ ಸತೀದೇವಿ (ದಾಕ್ಷಾಯಿಣಿ) ತನ್ನ ಗಂಡನಿಗೆ ತಂದೆ ಮಾಡಿದ ಅವಮಾನ ಸಹಿಸದೆ ಆತ್ಮದ ಅಗ್ನಿಯನ್ನೇ ಪ್ರಜ್ವಲಿಸಿಕೊಂಡು ಇಲ್ಲಿ ಪ್ರಾಣಾಹುತಿ ಮಾಡಿಕೊಳ್ಳುತ್ತಾಳೆ. ಶಿವಸಂಭೂತ ವೀರಭದ್ರ ದಕ್ಷನನ್ನು ಇಲ್ಲೇ ವಧೆ ಮಾಡಿದ. ಬಳಿಕ ಶಿವ ಬಂದು ಸತಿಯ ವಿರಹದಲ್ಲಿ ಧ್ಯಾನ ಮಾಡಿದ ಜಾಗವೇ ಈ ಉದ್ಭವಲಿಂಗ ಕ್ಷೇತ್ರ. ಭಕ್ತರ ಅಭೀಷ್ಟೆಗಳನ್ನು ಶಿವ-ಶಕ್ತಿಯರು ಇಲ್ಲಿ ಈಡೇರಿಸುತ್ತಾರೆ ಎಂಬ ನಂಬಿಕೆ ಇದೆ.
ಕಣ್ಣೂರು ಜಿಲ್ಲಾ ಕೇಂದ್ರದಿಂದ 68,5 ಕಿ.ಮೀ. ದೂರದಲ್ಲಿದೆ ಕೊಟ್ಟಿಯೂರು ಕ್ಷೇತ್ರ. ವಾವಲಿ ನದಿಯ ಎಡ ದಂಡೆಯಲ್ಲಿ ಇಕ್ಕರೆ ಕೊಟ್ಟಿಯೂರು ಶಾಶ್ವತ ದೇಗುಲವಿದೆ. ಬಲ ದಂಡೆಯಲ್ಲಿ ಅಕ್ಕರೆ ಕೊಟ್ಟಿಯೂರು ಉದ್ಭವಲಿಂಗವಿದೆ. ವೈಶಾಖ ಮಹೋತ್ಸವ ಸಂದರ್ಭ ಹೊರತುಪಡಿಸಿದರೆ, ಬೇರೆ ದಿನಗಳಲ್ಲಿ ಏನೂ ವಿಶೇಷವಿರುವುದಿಲ್ಲ. ವೈಶಾಖ ಮಹೋತ್ಸವದ ಮೊದಲ 2 ದಿನ ಮತ್ತು ಕೊನೆಯ 4 ದಿನ ಇಲ್ಲಿ ಮಹಿಳೆಯರಿಗೆ ಪ್ರವೇಶವಿಲ್ಲ. ಬಿದಿರಿನ ದಂಟನ್ನೇ ಸೀಳಿ ದಾರದ ಗೋಂಚಿಲು ಸೃಷ್ಟಿಸಿ ಮಾಡಿದ ಒಡಪ್ಪೂವು (ಒಡಪ್ಪು) ಕೊಟ್ಟಿಯೂರಿನ ವಿಶೇಷ ಆಕರ್ಷಣೆ.