ಮಂಚಿ ಕೊಳ್ನಾಡು ಪ್ರೌಢಶಾಲೆಯಲ್ಲಿ ಯಕ್ಷಧ್ರುವ ಯಕ್ಷಶಿಕ್ಷಣದ ಮೂರನೇ ಶೈಕ್ಷಣಿಕ ತರಬೇತಿ ಕೇಂದ್ರ ಆರಂಭವಾಯಿತು. ಚಾಲನೆಯನ್ನು ನೀಡಿದ ಯಕ್ಷಧ್ರುವ ಪಟ್ಲ ಫೌಂಡೇಶನ್ ವಿಟ್ಲ ಘಟಕದ ಅಧ್ಯಕ್ಷ ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ ಮಾತನಾಡಿ, ಪಟ್ಲ ಫೌಂಡೇಶನ್ ಅನೇಕ ಕಲಾವಿದರ ಪಾಲಿಗೆ ನೆರವಾಗುತ್ತಿದ್ದು, ಶಿಕ್ಷಣ ನೀಢುವ ಮೂಲಕವೂ ಗಮನ ಸೆಳೆಯುತ್ತಿದೆ ಎಂದರು.
ಯಕ್ಷಧ್ರುವ ಪಟ್ಲ ಫೌಂಡೇಶನ್ ವಿಟ್ಲ ಘಟಕದ ಪ್ರಧಾನ ಕಾರ್ಯದರ್ಶಿ ಪೂವಪ್ಪ ಶೆಟ್ಟಿ ಅಳಿಕೆ ಮಾತನಾಡಿ, ಯಕ್ಷಗಾನವನ್ನು ಮನೆ ಮನೆಗೂ ಬಿತ್ತರಿಸಿ ಆ ಮೂಲಕ ಸಾಮೂಹಿಕ ಯಕ್ಷ ಪ್ರತಿಭೆಗಳನ್ನು ಹುಟ್ಟು ಹಾಕುವ ವಿನೂತನ ಕಾರ್ಯ ಯೋಜನೆ ವಿಶಿಷ್ಟವಾಗಿದೆ ಎಂದರು. ಗುರುಗಳಾದ ಅಶ್ವತ್ ಮಂಜನಾಡಿ ಮಾತನಾಡಿ, “ಎಲ್ಲಾ ಪ್ರಬುದ್ಧ ಯಕ್ಷಗಾನ ಕಲಾವಿದರ ಸಂಪನ್ಮೂಲ ಕ್ರೋಢೀಕರಿಸಿ ಈ ಬಾರಿ ಸಿದ್ಧವಾಗಿರುವ ಯಕ್ಷಗಾನ ಪುಸ್ತಕವು ಭವಿಷ್ಯದ ಪ್ರತಿಭೆಗಳನ್ನು ಒಂದೇ ಸೂರಿನಡಿ ಸೇರಿಸುವ ಪ್ರಯತ್ನ ಎಂದರು. ಯಕ್ಷ ಶಿಕ್ಷಣಕ್ಕೆ ದಾಖಲಾತಿ ಹೊಂದಿದ 60 ವಿದ್ಯಾರ್ಥಿಗಳಿಗೆ ಸಾಂಕೇತಿಕ ನಾಟ್ಯ ಬೋಧನೆ ಮಾಡಲಾಯಿತು.
ಮಂಚಿ ಕೊಳ್ನಾಡು ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿಗಳು ಹಾಗೂ ಯುಕ್ಷಗಾನ ರಂಗದಲ್ಲಿ ವಿಶಿಷ್ಟ ಸಾಧನೆ ಮಾಡುತ್ತಿರುವ ಕಾರ್ತಿಕ್ ಕುಲಾಲ್ ಮಂಚಿ ಹಾಗೂ ಕಳೆದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದ ಯಕ್ಷ ಪ್ರತಿಭೆ ದಿವ್ಯಶ್ರೀ ಅವರನ್ನು ಗೌರವದಿಂದ ಅಭಿನಂದಿಸಲಾಯಿತು.
ಅತಿಥಿಗಳಾಗಿ ಯಕ್ಷಧ್ರುವ ಪಟ್ಲ ಫೌಂಡೇಶನ್ ವಿಟ್ಲ ಘಟಕ ಗೌರವ ಮಾರ್ಗದರ್ಶಕ ದೇವಪ್ಪ ಶೇಖ ಪೀಲ್ಯಡ್ಕ, ಪ್ರಧಾನ ಸಂಚಾಲಕ ಅರವಿಂದ ರೈ ಮೂರ್ಜೆಬೆಟ್ಟು, ಸಂಘಟನಾ ಕಾರ್ಯದರ್ಶಿ ಪದ್ಮನಾಭ ಕುಡ್ತಮುಗೇರು, ಶಾಲಾಭಿವೃದ್ಧಿ ಸಮಿತಿಯ ಸದಸ್ಯರಾದ ಜಯಂತ ಕುಕ್ಕಾಜೆ ಉಪಸ್ಥಿತರಿದ್ದರು. ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಸವಿತಾ ಶುಭ ಹಾರೈಸಿದರು. ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ರಾಮ್ ಪ್ರಸಾದ್ ರೈ ತಿರುವಾಜೆ ಸ್ವಾಗತಿಸಿದರು, ಶಾಲಾ ಮುಖ್ಯೋಪಾಧ್ಯಾಯರಾದ ಸುಶೀಲ ವಿಟ್ಲ ವಂದಿಸಿದರು, ಶಿಕ್ಷಕ, ಕಲಾವಿದ ತಾರಾನಾಥ್ ಕೈರಂಗಳ ಕಾರ್ಯಕ್ರಮ ನಿರ್ವಹಿಸಿದರು.