ಜೂನ್ 23ರಂದು ಗ್ರಾಮಮಟ್ಟದಲ್ಲಿ ರಾಜ್ಯ ಸರಕಾರದ ವಿರುದ್ಧ ಹೋರಾಟ: ರಾಜೇಶ್ ನಾಯ್ಕ್
ಭಾರತೀಯ ಜನತಾ ಪಾರ್ಟಿಯ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಕಾರ್ಯಕಾರಿಣಿ ಸಭೆ ಹಾಗೂ ವಿಕಸಿತ ಭಾರತ ಸಂಕಲ್ಪ ಸಭೆ ಬಂಟ್ವಾಳದ ಸ್ಪರ್ಶ ಕಲಾ ಮಂದಿರದಲ್ಲಿ ನಡೆಯಿತು.ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಉದ್ಘಾಟಿಸಿ ಮಾತನಾಡಿ ಜೂನ್ ೨೩ರಂದು ರಾಜ್ಯ ಸರಕಾರದ ವಿರುದ್ಧ ಪ್ರತಿ ಪಂಚಾಯಿತಿಯಲ್ಲಿ ಹೋರಾಟ ನಡೆಯಲಿದೆ. ಸರಕಾರ ಇದಯೇ ಎಂಬುದು ಗೊತ್ತಾಗುತ್ತಿಲ್ಲ. ಎಲ್ಲದಕ್ಕೂ ದುಪ್ಪಟ್ಟು ಟ್ಯಾಕ್ಸ್ ಹಾಕುವ ಮೂಲಕ ಗ್ಯಾರಂಟಿ ಜಾರಿಗೆ ಜನರಿಗೆ ಹೊರೆ ಹಾಕುತ್ತಿದ್ದಾರೆ. ಬಡವರ ಕಷ್ಟಗಳಿಗೆ ಸ್ಪಂದಿಸುವ ಕೆಲಸಗಳನ್ನು ಮಾಡುವ ಮೂಲಕ ಕಾರ್ಯಕರ್ತರು ಗಮನ ಸೆಳೆಯಬೇಕು. ನಮ್ಮ ಜಿಲ್ಲೆಯಲ್ಲಿ ಸುಮಾರು ಐವತ್ತು ಸಾವಿರದಷ್ಟು ಮಂದಿ ರಾಜ್ಯಸರಕಾರದ ಸೌಲಭ್ಯ ಕಡಿತದಿಂದ ವಂಚಿತರಾಗುತ್ತಿದ್ದಾರೆ. ಪಕ್ಷ ಅವರೊಂದಿಗೆ ನಿಲ್ಲಬೇಕು. ಪ್ರತಿಯೊಬ್ಬರೂ ಹೋರಾಟದಲ್ಲಿ ಭಾಗವಹಿಸಬೇಕುವ ಸೂಚನೆ ಇದ್ದು, ಪಕ್ಷ ನೀಡಿದ ಸೂಚನೆಯಂತೆ ರಾಯಿ ಗ್ರಾಮದಲ್ಲಿ ಹೋರಾಟಕ್ಕೆ ಕುಳಿತುಕೊಳ್ಳುವೆ ಎಂದರು.
ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ, ಸ್ಥಳೀಯವಾಗಿ ಜನರೊಂದಿಗೆ ಬೆರೆತು ವಿಶ್ವಾಸಗಳಿಸಿಕೊಂಡು ಕೆಲಸ ಮಾಡಿದರೆ ಮಾತ್ರ ಕಾರ್ಯಕರ್ತ ನಾಯಕನಾಗಿ ಬೆಳೆಯಲು ಸಾಧ್ಯವಾಗುತ್ತದೆ ಎಂದರು. ಬಿಜೆಪಿ ಕ್ಷೇತ್ರಾಧ್ಯಕ್ಷ ಆರ್. ಚೆನ್ನಪ್ಪ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು. ವಿಧಾನಪರಿಷತ್ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್, ಕಿಶೋರ್ ಕುಮಾರ್ ಪುತ್ಗೂರು, ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, ಅಭಿಯಾನದ ಜಿಲ್ಲೆ ಸಂಚಾಲಕ ಹರೀಶ್ ಕಂಜಿಪಿಲಿ, ಪಕ್ಷ ಪ್ರಮುಖರಾದ ಪ್ರೇಮಾನಂದ ಶೆಟ್ಟಿ, ಪೂಜಾ ಪೈ, ದೇವಪ್ಪ ಪೂಜಾರಿ, ದಿನೇಶ್ ಅಮ್ಟೂರು, ರಾಕೇಶ್ ರೈ ಕಡೆಂಜಿ, ರೂಪಾ. ನಿತೇಶ್, ಮೋಹನ್ ಪಿ ಎಸ್, ವಿಜಯ ರೈ, ವಸಂತ ಅಣ್ಣಳಿಕೆ, ಬಾಲಕೃಷ್ಣ ಸೆರ್ಕಳ, ಪ್ರಭಾಕರ ಪ್ರಭು ಉಪಸ್ಥಿತರಿದ್ದರು. ಮಂಡಲ ಪ್ರಧಾನ ಕಾರ್ಯದರ್ಶಿ ಸುದರ್ಶನ ಬಜ ಸ್ವಾಗತಿಸಿದರು. ಶಿವಪ್ರಸಾದ್ ಶೆಟ್ಟಿ ವಂದಿಸಿದರು.