ಗೋಳ್ತಮಜಲು ಸರಕಾರಿ ಪ್ರೌಢಶಾಲೆಯಲ್ಲಿ ಶೇ 100 ಫಲಿತಾಂಶದೊಂದಿಗೆ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳು ಹಾಗೂ ಶಿಕ್ಷಕ ವೃಂದವನ್ನು ಅಭಿನಂದಿಸುವ ಕಾರ್ಯಕ್ರಮ ಶಾಲಾ ಸಭಾಂಗಣದಲ್ಲಿ ನಡೆಯಿತು.
ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ,ಸರಕಾರಿ ಶಾಲೆಯಲ್ಲಿ ನೂರಕ್ಕೆ ನೂರು ಫಲಿತಾಂಶ ಬರುವಲ್ಲಿ ವಿಶೇಷ ಪ್ರಯತ್ನ ಮಾಡಿದ ಶಿಕ್ಷಕ ವೃಂದಕ್ಕೆ ಅಭಿನಂದನೆ ಸಲ್ಲಿಸಿದರು. ಗ್ರಾಮೀಣ ಭಾಗದ ಬಡತನದ ವಿದ್ಯಾರ್ಥಿಗಳು ಮಾಡಿದ ಸಾಧನೆ ನಿಜಕ್ಕೂ ಶ್ಲಾಘನೀಯ ಎಂದು ಅವರು ಸಂತಸ ವ್ಯಕ್ತಪಡಿಸಿದರು.
ಸಮಿತಿ ಸದಸ್ಯರಾದ ಕೃಷ್ಣಪ್ಪ ಪೂಜಾರಿ , ಬಾಲಕೃಷ್ಣ ಕೊಟ್ಟಾರಿ,ನಾಗೇಶ್ ಪೂಜಾರಿ, ನಾರಾಯಣ ಗೌಡ, ಗ್ರಾ.ಪಂ.ಸದಸ್ಯರಾದ ಪುರುಷೋತ್ತಮ, ಸರೋಜಿನಿ,ನಳಿನಾಕ್ಷಿ, ಶಾಲಾ ಮುಖ್ಯ ಶಿಕ್ಷಕ ರಮೇಶ್ ನಾಯಕ್, ನಿವೃತ್ತ ಮುಖ್ಯೋಪಾಧ್ಯಾಯ ಸೀತಾರಾಮ ಭಟ್ ಉಪಸ್ಥಿತರಿದ್ದರು. ಜಯಂತಿ ಅವರು ಕಳೆದ 11ವರ್ಷಗಳಿಂದ ಶಾಲೆಯ ಅಡುಗೆಯವರಾಗಿದ್ದು, ಇದೀಗ ನಿವೃತ್ತಿ ಹೊಂದಿದ್ದು ಅವರನ್ನು ಗೌರವಿಸಲಾಯಿತು. ಶಿಕ್ಷಕಿ ಸುಜಾತ ಸ್ವಾಗತಿಸಿ, ಪ್ರಕಾಶ್ ವಂದಿಸಿದರು. ಸುನೀತಾ ಕಾರ್ಯಕ್ರಮ ನಿರೂಪಿಸಿದರು.