ಬಂಟ್ವಾಳ ತಾಲೂಕಿನ ನಾವೂರು ಗ್ರಾಮದ ಮೈಂದಾಲ ನಿವಾಸಿ ನೌಫಲ್ ಮಹಮ್ಮದ್ ಕಳೆದ ಮೂವತ್ತು ವರ್ಷಗಳಿಂದ ಬಂಟ್ವಾಳದ ಬಡ್ಡಕಟ್ಟೆಯಲ್ಲಿ ಅಡಕೆ ವ್ಯಾಪಾರ ಮಾಡಿಕೊಂಡಿದ್ದು, ಗ್ರಾಹಕರಿಗೆ ನಂಬಿಕೆದ್ರೋಹವೆಸಗಿ ಸುಮಾರು 94 ಲಕ್ಷಕ್ಕೂ ಆಧಿಕ ರೂಪಾಯಿಗಳಷ್ಟು ಹಣ ಬಾಕಿ ಇರಿಸಿ ವಂಚನೆ ಎಸಗಿರುವ ಕುರಿತು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾವೂರ ಗ್ರಾಮ, ಬಂಟ್ವಾಳ ನಿವಾಸಿ ಪ್ರವೀಣ್ ಡಿ ಸೋಜಾ ಎಂಬವರು ಈ ಕುರಿತು ನೀಡಿದ ದೂರಿನಂತೆ ಎಫ್.ಐ.ಆರ್. ದಾಖಲಾಗಿದೆ. ಅಡಿಕೆ ಮಾರಾಟ ಮಾಡುವ ವೇಳೆ ನೌಫಲ್ ಮಾರಾಟಗಾರರಿಗೆ ಸ್ವಲ್ಪ ಹಣವನ್ನು ಕೊಡುತ್ತಿದ್ದು, ಬಳಿಕ ಸ್ವಲ ದಿನಗಳ ನಂತರ ಹಣವನ್ನು ಕೊಡುತ್ತಿರುವ ಪ್ರಕ್ರಿಯೆ ನಡೆಯುತ್ತಿತ್ತು. ಮಾರ್ಚ್ 8ರಂದು ಬೆಳಿಗ್ಗೆ ಪ್ರವೀಣ್ ಅವರು ನೌಫಲ್ ಮಹಮ್ಮದ್ ಅಂಗಡಿಗೆ ವಾಹನದಲ್ಲಿ ಹೋಗಿ ಸುಮಾರು 6.5 ಕ್ವಿಂಟಾಲ್ ಅಡಿಕೆಯನ್ನು ಮಾರಾಟ ಮಾಡಿದ ಅಂದಾಜು ಮೌಲ್ಯ 3,50,000 ರೂ ಹಣವನ್ನು ನೀಡಿರಲಿಲ್ಲ. ಜೂನ್ 9ರಂದು ರಾತ್ರಿ ಪ್ರವೀಣ್ ಗೆ ನೌಫಲ್ ಕರೆ ಮಾಡಿ, ತಾನು ನಷ್ಟದಲ್ಲಿದ್ದು, ಬಾಕಿ ಹಣವನ್ನು ಸ್ವಲ್ಪ ಸ್ವಲ್ಪವಾಗಿ ನೀಡುವುದಾಗಿ ಮೆಸೇಜ್ ಕಳುಹಿಸಿದ್ದಾಗಿ ದೂರಲಾಗಿದೆ. ಇದರಿಂದ ಗಾಬರಿಗೊಂಡ ಪ್ರವೀಣ್, ಜೂನ್ 10ರಂದು ಬೆಳಿಗ್ಗೆ ಅಂಗಡಿಗೆ ಹೋಗಿ ನೋಡಿದಾಗ ಬೀಗ ಹಾಕಿದ್ದು, ಮನೆಗೆ ಬೀಗ ಹಾಕಲಾಗಿತ್ತು. ಆರೋಪಿಯ ಮೊಬೈಲ್ ಸ್ವಿಚ್ಡ್ ಆಪ್ ಆಗಿದ್ದು, ಹಣ ಪಡೆಯಲು ಬಾಕಿಯಿದ್ದ ಇತರೆ 24 ಜನರು ಕೂಡಾ ಸ್ಥಳದಲ್ಲಿದ್ದರು. ಆರೋಪಿಯು ತನ್ನೊಂದಿಗೆ ಅಡಿಕೆ ಮತ್ತು ಕರಿಮೆಣಸು ವ್ಯಾಪಾರ ಮಾಡಿಕೊಂಡಿದ್ದವರಿಗೆ ಒಟ್ಟು ರೂ 94,77,810 ನೀಡದೆ ಅಪರಾಧಿಕ ನಂಬಿಕೆ ದ್ರೋಹ ಮತ್ತು ವಂಚನೆ ಮಾಡುವ ಉದ್ದೇಶದಿಂದ ತಲೆಮರೆಸಿಕೊಂಡಿರುವ ಆರೋಪದ ಮೇಲೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಅಕ್ರ: 64/2025 ಕಲಂ: 316(2) 318(4) ಬಿಎನ್ಎಸ್ -2023 ರಂತೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.