ಪ್ರಮುಖ ಸುದ್ದಿಗಳು

ಮಂಗಳೂರಿನ ಕದ್ರಿಯಲ್ಲಿ ಅಪೂರ್ವ ಬುದ್ಧನ ಶಿಲ್ಪ ಪತ್ತೆ: ಪುರಾತತ್ವಶಾಸ್ತ್ರ ನಿವೃತ್ತ ಸಹಪ್ರಾಧ್ಯಾಪಕ ಪ್ರೊ.ಟಿ.ಮುರುಗೇಶಿ ಏನಂತಾರೆ?

ಮಂಗಳೂರು: ಮಂಗಳೂರಿನ ಕದ್ರಿ ಮಂಜುನಾಥ ದೇವಾಲಯದ ಕೆರೆಯೊಂದರಲ್ಲಿ ಅಪೂರ್ವವಾದ ಬುದ್ಧನ ಶಿಲ್ಪ ಮತ್ತು ಗುಹಾ ಸಮುಚ್ಚಯಗಳು ಇತ್ತೀಚೆಗೆ ನಡೆಸಿದ ಪುರಾತತ್ತ್ವ ಅನ್ವೇಷಣೆಯ ಸಂದರ್ಭದಲ್ಲಿ ಪತ್ತೆಯಾಗಿದೆ ಎಂದು ಶಿರ್ವದ ಮುಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜಿನ ಪ್ರಾಚೀನ ಇತಿಹಾಸ ಮತ್ತು ಪುರಾತತ್ತ್ವಶಾಸ್ತ್ರ ವಿಭಾಗದ ನಿವೃತ್ತ ಸಹ ಪ್ರಾಧ್ಯಾಪಕ ಪ್ರೊ.ಟಿ.ಮುರುಗೇಶಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಜಾಹೀರಾತು

ಕೆರೆಯ ನೀರಿನಲ್ಲಿ ವಿಸರ್ಜನೆ ಮಾಡಿರುವ ಸ್ಥಿತಿಯಲ್ಲಿ ಕಂಡುಬಂದ ಈ ಶಿಲ್ಪವನ್ನು ಕದ್ರಿ ದೇವಾಲಯದ ಆಡಳಿತಾಧಿಕಾರಿಗಳ ಅನುಮತಿಯೊಂದಿಗೆ ಮೇಲೆ ತೆಗೆದು ಅಧ್ಯಯನ ಮಾಡಲಾಯಿತು ಎಂದು ಮುರುಗೇಶಿ ತಿಳಿಸಿದ್ದಾರೆ..

ಈ ಶಿಲ್ಪವು ಪದ್ಮಪೀಠದ ಮೇಲೆ ಪದ್ಮಾಸನದಲ್ಲಿ ಧ್ಯಾನಮುದ್ರೆಯಲ್ಲಿ ಕುಳಿತಂತೆ ಕಂಡರಿಸಲ್ಪಟ್ಟಿದೆ. ಶಿಲ್ಪದ ಬಲಗೈ ಸಂಪೂರ್ಣ ತುಂಡಾಗಿದೆ, ಎಡಗೈನ ಹಸ್ತ ಮಡಚಿದ ಕಾಲುಗಳ ಮಧ್ಯೆ ಇರಿಸಲ್ಪಟ್ಟಿದೆ. ಎಡಭುಜದ ಮೇಲಿಂದ ಹಾದುಬಂದಿರುವ ಉತ್ತರೀಯ, ಶಿಲ್ಪದ ಎಡಭಾಗದ ಎದೆಯ ಮೇಲೆ ಚಪ್ಪಟೆಯಾಗಿ ಇಳಿಬಿಟ್ಟಂತೆ ಅಸ್ಪಸ್ಟವಾಗಿ ಕಾಣುತ್ತದೆ. ತಲೆಯಭಾಗ ತುಂಡಾಗಿದ್ದು, ಕಾಣೆಯಾಗಿದೆ. ದೇವಾಲಯದ ಹೊರ ಆವರಣದಲ್ಲಿರುವ ಸ್ಥಂಭದ ಕೆಳಭಾಗದ ಫಲಕಗಳಲ್ಲಿ ಪದ್ಮಪೀಠದ ಮೇಲೆ ಕುಳಿತ ಧ್ಯಾನಿಬುದ್ಧರ ಉಬ್ಬುಶಿಲ್ಪಗಳಿವೆ. ಆದ್ದರಿಂದ, ಈ ಶಿಲ್ಪವನ್ನು ವಿವಾದೀತವಾಗಿ ಬುದ್ಧನ ಶಿಲ್ಪವೆಂದು ಗುರುತಿಸಲಾಗಿದೆ. ಶಿಲ್ಪವು ೬೮ ಸೆ.ಮೀ ಎತ್ತರವಾಗಿದ್ದು, ೪೮ ಸೆ.ಮೀ ಅಗಲವಾಗಿದೆ. ಈ ಶಿಲ್ಪವು ಬಹುತೇಕ ಗೋವಾದ ಮುಶಿರಾ ವಾಡೋದಲ್ಲಿ ದೊರೆತ ಶಿಲ್ಪವನ್ನು ಹೋಲುತ್ತದೆ. ಆದ್ದರಿಂದ ಶಿಲ್ಪದ ಕಾಲಮಾನವನ್ನು ಕ್ರಿ.ಶ. ೪-೬ನೇ ಶತಮಾನದ ಶಿಲ್ಪವೆಂದು ಪರಿಗಣಿಸಬಹುದಾಗಿದೆ. ಶಿಲ್ಪವು ಪದ್ಮದ ಕೆಳಭಾಗದಲ್ಲಿ ಪಾಣಿಪೀಠದ ಒಳಗೆ ಸಿಕ್ಕಿಸುವ ಗೂಟವನ್ನು ಹೊಂದಿದ್ದು, ಇದುವೇ ಕದ್ರಿಯ ಮೂಲಸ್ಥಾನ ವಿಗ್ರಹವಾಗಿತ್ತೆಂದು ಭಾವಿಸಬಹುದಾಗಿದೆಎಂದು ಮುರುಗೇಶಿ ತಿಳಿಸಿದ್ದಾರೆ..

ಕದ್ರಿಯ ಗುಹೆಗಳು:

ಕದ್ರಿ ಮಂಜುನಾಥ ದೇವಾಲಯದ ಕೆರೆಗಳ ಮೇಲ್ಭಾಗದ ಗುಡ್ಡೆಯಲ್ಲಿ ಮೂರು ಗುಹೆಗಳನ್ನು ಕೆಂಪುಮುರಕಲ್ಲಿನ್ನು ಕಡಿದು ನಿರ್ಮಿಸಲಾಗಿದೆ. ಬಲಭಾಗದ ಗುಹೆಯ ಪ್ರವೇಶದ್ವಾರವು ಬೃಹತ್‌ಶಿಲಾಯುಗದ ಕಲ್ಮನೆ ಸಮಾಧಿಗಳ ಪ್ರವೇಶದ್ವಾರದಂತಿದೆ ಹಾಗೂ ಇಡೀ ರಚನೆ ಕಲ್ಮನೆ ಸಮಾಧಿಯಂತಿದೆ. ಇನ್ನೆರೆಡು ಗುಹೆಗಳು ಎತ್ತರವಾದ ಜಗತಿಯ ಮೇಲೆ ನಿರ್ಮಿಸಲಾಗಿದ್ದು, ಚೌಕಾಕಾರದ ಎರಡು ಪ್ರವೇಶದ್ವಾರಗಳನ್ನು ಒಳಗೊಂಡಿವೆ. ಗುಹೆಗಳ ಹೊರ ಮತ್ತು ಒಳಭಾಗದ ಭಿತ್ತಿಗಳು ನಯವಾಗಿ ನಿರಾಡಂಬರವಾಗಿವೆ. ಗುಹೆಗಳು ಕೇವಲ ಒಂದೊಂದು ಕೋಣೆಯನ್ನು ಒಳಗೊಂಡಿದ್ದು, ದೀಪಗಳನ್ನು ಇರಿಸುವ ಗೂಡುಗಳನ್ನು ಒಳಗೊಂಡಿವೆ. ಆದದ್ದರಿಂದ, ಈ ಗುಹಾ ರಚನೆಗಳನ್ನು ವಾಸ್ತವ್ಯದ ಉದ್ದೇಶಕ್ಕಾಗಿ ರಚಿಸಿದ ಗುಹೆಗಳೆಂದು ತರ್ಕಿಸಬಹುದಾಗಿದೆ. ಗುಹೆಗಳ ವಾಸ್ತು ರಚನೆಯ ವಿನ್ಯಾಸ ಮತ್ತು ಶೈಲಿಗಳನ್ನು ಗಮನಿಸಿದರೆ, ಅವುಗಳನ್ನು ಕ್ರಿ.ಶ. ಸಮಾರು ೪-೬ನೇ ಶತಮಾನದಲ್ಲಿ ನಿರ್ಮಿಸಿದ ಗುಹೆಗಳೆಂದು ನಿರ್ಧರಿಸಬಹುದಾಗಿದೆ ಎಂದು ಮುರುಗೇಶಿ ತಿಳಿಸಿದ್ದಾರೆ.

ಮಹತ್ತ:   ಕದ್ರಿಯ ಈ ಶೋಧಗಳು, ಕದ್ರಿಯ ಪ್ರಾಚೀನತೆಯನ್ನು ಕ್ರಿ.ಶ.೪-೫ನೇ ಶತಮಾನಕ್ಕೆ ತೆಗೆದುಕೊಂಡು ಹೋಗುತ್ತವೆ. ಕದ್ರಿಯು, ಕ್ರಿಸ್ತ ಶಕಾರಂಬದಲ್ಲಿ ಮಹಾಯಾನ ಬೌದ್ಧ ಕೇಂದ್ರವಾಗಿದ್ದು, ನಂತರ ವಜ್ರಯಾ ಬೌದ್ಧ ಕೇಂದ್ರವಾಗಿ ಕೊನೆಗೆ ದಕ್ಷಿಣ ಭಾರತದ ಪ್ರಮುಖ ನಾಥಪಂಥದ ಕೇಂದ್ರವಾಗಿ ಪರಿವರ್ತನೆ ಹೊಂದಿತೆಂದು ತಿಳಿಯಬಹುದಾಗಿದೆ. ಕದ್ರಿಯಲ್ಲಿ ಪುರಾತತ್ತ್ವ ಅನ್ವೇಷಣೆಗೆ ಅನುಮತಿ ನೀಡಿ ದೇವಾಲಯದ ಆಡಳಿತಾಧಿಕಾರಿ ಅರುಣ್ ಕುಮಾರ್ ಸಹಕರಿಸಿದ್ದು, ಈ ಅನ್ವೇಷಣೆಯಲ್ಲಿ ಮಣಿಪಾಲ್ ವಿಶ್ವವಿದ್ಯಾನಿಲಯದ ಪಿ.ಹೆಚ್‌ಡಿ. ವಿಧ್ಯಾರ್ಥಿ, ಶ್ರೇಯಸ್ ಕೊಳಪೆ, ಶಿರ್ವ ಎಂ.ಎಸ್.ಆರ್.ಎಸ್. ಕಾಲೇಜಿನ ಪುರಾತತ್ತ್ವ ವಿಭಾಗದ ಉಪನ್ಯಾಸಕರಾದ ಶ್ರೇಯಸ್ ಬಂಟಕಲ್ಲು, ಕಾಲೇಜಿನ ಪುರಾತತ್ತ್ವ ವಿಭಾಗದ ವಿಧ್ಯಾರ್ಥಿ ರವೀಂದ್ರ ಕುಶ್ವಾ, ಮಂಗಳೂರು ವಿಶ್ವವಿದ್ಯಾ ಕಾಲೇಜಿನ ಸ್ನಾತಕೋತ್ತರ ವಿಭಾಗದ ವಿಧ್ಯಾರ್ಥಿ ಕಾರ್ತಿಕ್ ಭಾಗವಹಿಸಿದ್ದರು ಎಂದು ಮುರುಗೇಶಿ ತಿಳಿಸಿದ್ದಾರೆ.

ಜಾಹೀರಾತು
NEWSDESK

www.bantwalnews.comನಲ್ಲಿ ಪ್ರಕಟಗೊಳ್ಳುವ ಜಾಹೀರಾತುಗಳ, ಲೇಖನಗಳ ವಿಚಾರಗಳಿಗೂ ವೆಬ್ ತಾಣಕ್ಕೂ ಸಂಬಂಧವಿಲ್ಲ. ಇದು ಓದುಗರ ಗಮನಕ್ಕೆ. NOTE: : All opinions regarding the advertisments and articles published in bantwalnews and the related topic are those of the author and advertiser, and this has no relation to BantwalNews. Recommendations and suggestions provided here are left for the readers' consideration.