ಪುತ್ತೂರು ನಗರಸಭಾ ಸದಸ್ಯ ರಮೇಶ್ ರೈ ನೆಲ್ಲಿಕಟ್ಟೆ (55) ಅವರು ಗುರುವಾರ ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ನೇತ್ರಾವತಿ ನದಿ ಕಿನಾರೆ ಬಳಿ ಬೆಳಗ್ಗೆ ನಾಪತ್ತೆಯಾಗಿದ್ದು, ಕುಡಿಯುವ ನೀರಿನ ಟ್ಯಾಂಕ್ ನೊಳಗೆ ಅವರ ಶವ ಸಂಜೆ ಪತ್ತೆಯಾಗಿದೆ. ಅವರು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಅಸಹಜ ಸಾವು ಪ್ರಕರಣ ದಾಖಲಾಗಿದೆ.
ಅವರು ಪತ್ನಿ, ಒಂದು ಗಂಡು ಮತ್ತು ಒಂದು ಹೆಣ್ಣು ಮಗಳ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಇವರ ಮಗಳು ವಿದ್ಯಾರ್ಥಿನಿಯಾಗಿದ್ದರೆ, ಮಗ ಟೌನ್ ಬ್ಯಾಂಕ್ ಉದ್ಯೋಗಿಯಾಗಿದ್ದಾರೆ. ರೈ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ.
ಗುರುವಾರ ಬೆಳಗ್ಗೆ ನೇತ್ರಾವತಿ ಸೇತುವೆ ಬಳಿ ಬೈಕ್, ಚಪ್ಪಲಿ ಮೊಬೈಲ್ ಬಿಟ್ಟು ಹೋಗಿದ್ದು, ಅದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿ, ಬಳಿಕ ಮನೆಯವರಿಗೆ ಮಾಹಿತಿ ಕೊಡಲಾಗಿತ್ತು. ಅದಾದ ಬಳಿಕ ನಗರ ಪೊಲೀಸರು, ಅಗ್ನಿಶಾಮಕದಳ ಸಹಾಯದಿಂದ ಸ್ಥಳೀಯ ಮುಗುಳುತಜ್ಞರ ಸಹಕಾರ ಪಡೆದು ಹುಡುಕಾಟ ನಡೆಸಲಾಯಿತು. ಸಂಜೆ ಸುಮಾರು 4.30 ಗಂಟೆ ವೇಳೆಗೆ ಬೈಕ್ ನಿಲ್ಲಿಸಿದ ಸಮೀಪದಲ್ಲಿ ಇರುವ ಪುರಸಭೆ ಇಲಾಖೆಗೆ ಸೇರಿದ ಕುಡಿಯುವ ನೀರಿನ ಟ್ಯಾಂಕ್ ನೊಳಗೆ ಮೃತದೇಹ ತೇಲಾಡುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇವರು ಅಂಗಿ ತೆಗೆದು ಮೊಬೈಲ್ ಸಹಿತ ಇತರ ಸೊತ್ತುಗಳನ್ನು ಅಲ್ಲಿ ಬಿಟ್ಟು ಟ್ಯಾಂಕ್ ಒಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಶಂಕಿಸಲಾಗಿದೆ. ಮುಳುಗುತಜ್ಞರಾದ ವಿಜೆ ಅಬುಸಾಲಿ, ಮಹಮ್ಮದ್ ಗೂಡಿನಬಳಿ, ಅಶ್ರಫ್ ಅಕ್ಕರಂಗಡಿ, ಲತೀಫ್ ನಂದಾವರ, ಅಸ್ಪಕ್ ಅಕ್ಕರಂಗಡಿ, ಇರ್ಫಾನ್ ಅಕ್ಕರಂಗಡಿ ಅವರು ಟ್ಯಾಂಕ್ ನೊಳಗೆ ಇಳಿದು ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ ಮಾಜಿ ಸಂಸದ ನಳಿನ್ ಕುಮಾರ್ ಕಟೀಲು, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಮಾಜಿ ಶಾಸಕ ಸಂಜೀವ ಮಠಂದೂರು, ನಗರ ಅಧ್ಯಕ್ಷೆ ಲೀಲಾವತಿ , ಉಪಾಧ್ಯಕ್ಷ ಬಾಲಚಂದ್ರ, ಬಿಜೆಪಿ ಮುಖಂಡರಾದ ಅರುಣ್ ಕುಮಾರ್ ಪುತ್ತಿಲ, ಆರ್.ಸಿ.ನಾರಾಯಣ ರೆಂಜ, ದಯಾನಂದ, ಬಂಟ್ವಾಳ ಕ್ಷೇತ್ರ ಬಿಜೆಪಿ ಅಧ್ಯಕ್ಷ ಚೆನ್ನಪ್ಪ ಆರ್ ಕೋಟ್ಯಾನ್ ಸಂತಾಪ ಸೂಚಿಸಿದ್ದಾರೆ.