ಕೆಲ ದಿನಗಳಿಂದ ಭಾರಿ ಗಾಳಿ ಮಳೆ ಇನ್ನೊಂದು ಹಂತಕ್ಕೆ ತಲುಪಿದೆ. ನೇತ್ರಾವತಿ ನದಿಯ ನೀರಿನ ಮಟ್ಟವೂ ಏರತೊಡಗಿದ್ದು, ಅಣೆಕಟ್ಟುಗಳಿಂದ ನೀರು ಹೊರಚೆಲ್ಲಿದ ಪರಿಣಾಮ ಬಂಟ್ವಾಳದಲ್ಲಿ ಶನಿವಾರ ನೀರಿನ ಮಟ್ಟ ಏರಿಕೆ ಕಂಡಿತು. ಬಂಟ್ವಾಳ ನೇತ್ರಾವತಿ ನೀರಿನ ಅಪಾಯದ ಮಟ್ಟ 8.5 ಮೀಟರ್ ಆಗಿದ್ದು, ಶನಿವಾರ ಬೆಳಗ್ಗೆ 7.6 ಮೀಟರ್ ಎತ್ತರದಲ್ಲಿ ಹರಿಯುತ್ತಿದೆ. ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನದ ಬಳಿ ನದಿ ನೀರಿನ ಮಟ್ಟ ಏರಿಕೆ ಕಂಡರೆ, ಪಾಣೆಮಂಗಳೂರು ಪುರಸಭೆಯ 24ನೇ ವಾರ್ಡ್ ನ ಆಲಡ್ಕಪಡ್ಪು ಎಂಬಲ್ಲಿ ಮನೆಗಳು ಜಲಾವೃತಗೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ಅಲ್ಲಿದ್ದ ಕುಟುಂಬಗಳ ಸ್ಥಳಾಂತರ ಪ್ರಕ್ರಿಯೆಯನ್ನು ಮಾಡಲಾಯಿತು. ವಾರ್ಡ್ ಸದಸ್ಯ ಸಿದ್ದೀಕ್ ಗುಡ್ಡೆಯಂಗಡಿ, ಕಂದಾಯ ಇಲಾಖೆಯ ಕಂದಾಯ ನಿರೀಕ್ಷಕ ವಿಜಯ್ ಆರ್ , ಸಿಬ್ಬಂದಿ ಸದಾಶಿವ ಕೈಕಂಬ , ಯಶೋಧ ಪಾಣೆಮಂಗಳೂರು ಸಹಿತ ಸಿಬ್ಬಂದಿ ಸ್ಥಳೀಯರನ್ನು ಸುರಕ್ಷಿತ ಸ್ಥಳಕ್ಕೆ ತೆರಳಲು ಸಹಾಯ ಮಾಡಿದರು. ನದಿ ನೀರಿನ ಮಟ್ಟ ಇದೇ ರೀತಿಯಾಗಿ ಮುಂದವರಿದರೆ, ಮತ್ತಷ್ಟು ಪ್ರದೇಶಗಳಿಗೆ ನೀರು ನುಗ್ಗುವ ಸಂಭವವಿದೆ.