ಬಂಟ್ವಾಳ

May 29 – ಮಾಣಿ ಬಳಿಯ ವೆಹಿಕಲ್ ಅಂಡರ್ ಪಾಸ್(ವಿಯುಪಿ) | June 2ರಿಂದ ಕಲ್ಲಡ್ಕ ಫ್ಲೈಓವರ್‌ ಎಡಭಾಗ ವಾಹನಗಳ ಸಂಚಾರಕ್ಕೆ ತೆರವು: ಕ್ಯಾ. ಚೌಟ

ನಿರೀಕ್ಷೆಗೂ ಮೊದಲೇ ಮಳೆಗಾಲ ಪ್ರಾರಂಭವಾಗಿದ್ದು, ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿ.ಸಿ ರೋಡ್‌-ಅಡ್ಡಹೊಳೆ  ಚತುಷ್ಪಥ ಕಾಮಗಾರಿ ಅಂತಿಮ ಹಂತದ ಪ್ರಗತಿಯಲ್ಲಿರುವ ಕಾರಣ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಲ್ಲಡ್ಕ ಫ್ಲೈಓವರ್‌ ಸೇರಿದಂತೆ ಕೆಲವೆಡೆ ವಾಹನಗಳ ಸುಗಮ ಸಂಚಾರಕ್ಕೆ ರಸ್ತೆಯನ್ನು ತೆರವುಗೊಳಿಸಿ ಅನುಕೂಲ ಮಾಡಿಕೊಡುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸೂಚನೆ ನೀಡಿರುವುದಾಗಿ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಹೇಳಿದ್ದಾರೆ.

ಜಾಹೀರಾತು

ಮುಂಗಾರು ಚುರುಕುಗೊಂಡಿರುವ ಕಾರಣ ಮಂಗಳೂರು-ಬೆಂಗಳೂರು ಹೆದ್ದಾರಿಯಲ್ಲಿ ಬಿ.ಸಿ.ರೋಡ್‌-ಅಡ್ಡಹೊಳೆ ಚತುಷ್ಪಥ ರಸ್ತೆ ಕಾಮಗಾರಿಯಿಂದಾಗಿ ವಾಹನಗಳ ಸಂಚಾರಕ್ಕೆ ಅಡ್ಡಿ-ಆತಂಕ ಎದುರಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿವೆ. ಈ ಹಿನ್ನಲೆಯಲ್ಲಿ ಎಲ್ಲೆಲ್ಲಿ ಕಾಮಗಾರಿಯಿಂದ ವಾಹನಗಳ ಸಂಚಾರಕ್ಕೆ ತೊಂದರೆ ಎದುರಾಗಿದೆಯೋ ಅಲ್ಲೆಲ್ಲ ಸಮಸ್ಯೆಗಳಿಗೆ ತುರ್ತಾಗಿ ಸ್ಪಂದಿಸಿ ಜನರ ಓಡಾಟಕ್ಕೆ ತೊಂದರೆಯಾಗದಂತೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕೆಂದು ಕ್ಯಾ. ಚೌಟ ಅವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಸದ್ಯ ಸರ್ವಪಕ್ಷದ ನಿಯೋಗದಲ್ಲಿ ವಿದೇಶದಲ್ಲಿರುವ ಕ್ಯಾ. ಚೌಟ ಅವರು, ಮಳೆಗಾಲ ಪ್ರಾರಂಭವಾಗಿರುವ ಕಾರಣ ಬಿ.ಸಿ.ರೋಡ್‌-ಅಡ್ಡಹೊಳೆ ಹೆದ್ದಾರಿಯಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಯಾವುದೇ ತೊಂದರೆಯಾಗದಂತೆ ಹೆಚ್ಚಿನ ಮುತುವರ್ಜಿ ವಹಿಸಿ ಅಗತ್ಯ ಕ್ರಮ ಕೈಗೊಳ್ಳುವ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ನಿರಂತರ ಮಾತನಾಡಿ ಮಾಹಿತಿ ಪಡೆದುಕೊಂಡಿದ್ದಾರೆ. ಅಲ್ಲದೆ, ಭಾರೀ ಮಳೆಯಿಂದಾಗಿ ಜಿಲ್ಲೆಯಲ್ಲಿ ಹೆದ್ದಾರಿ ಕಾಮಗಾರಿಗಳಿಂದ ಎಲ್ಲೆಲ್ಲಿ ತೊಂದರೆಯಾಗುತ್ತಿದೆ ಎಂಬ ಬಗ್ಗೆಯೂ ಅಧಿಕಾರಿಗಳಿಂದ ಮಾಹಿತಿ ಪಡೆದು ಅವುಗಳಿಗೆ ಆದ್ಯತೆ ಮೇರೆಗೆ ತುರ್ತಾಗಿ ಸ್ಪಂದಿಸುವುದಕ್ಕೆ ಸೂಚನೆ ಕೊಟ್ಟಿದ್ದಾರೆ.

ಮೇ. 29ರಿಂದ ಹೆದ್ದಾರಿ ಪ್ರಾಧಿಕಾರವು ಮಾಣಿ ಬಳಿಯ ವೆಹಿಕಲ್ ಅಂಡರ್ ಪಾಸ್(ವಿಯುಪಿ)  ಹಾಗೂ ಉಪ್ಪಿನಂಗಡಿ ಬಳಿಯ ವೆಹಿಕಲ್ ಅಂಡರ್ ಪಾಸ್  ದ್ವಿ ಪಥವನ್ನು ಸಂಚಾರಕ್ಕೆ ಮುಕ್ತಗೊಳಿಸಿದೆ. ಅಲ್ಲದೆ, ಜೂ. 2ರಿಂದ ಕಲ್ಲಡ್ಕ ಪೇಟೆಯಲ್ಲಿರುವ ಮೇಲುರಸ್ತೆ(ಫ್ಲೈಓವರ್‌)ಯಲ್ಲಿ ಎಡಭಾಗವನ್ನು ವಾಹನಗಳ ಸಂಚಾರಕ್ಕೆ ತೆರವುಗೊಳಿಸಲಾಗುತ್ತದೆ. ಇನ್ನು ತುಂಬೆಯಲ್ಲಿ ನೀರು ನಿಲ್ಲುವ ಸಮಸ್ಯೆ ಪರಿಹರಿಸುವಂತೆಯೂ ಹೆದ್ದಾರಿ ಪ್ರಾಧಿಕಾರಕ್ಕೆ ಸೂಚಿಸಲಾಗಿತ್ತು. ಇದಕ್ಕೆ ಪರಿಹಾರವಾಗಿ ಎನ್.ಹೆಚ್.ಎ.ಐ  ಪೈಪ್ ಕಲ್ವರ್ಟ್ ಅಳವಡಿಸಿದ್ದು, ಕಾಮಗಾರಿ ಪೂರ್ಣಗೊಂಡರೆ ಇಲ್ಲಿಯೂ ಮಳೆಗಾಲದಲ್ಲಿ ವಾಹನಗಳ ಸಂಚಾರಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಆ ಮೂಲಕ, ಕಾಮಗಾರಿ ಪ್ರಗತಿಯಲ್ಲಿರುವ ಜಿಲ್ಲೆಯ ಎಲ್ಲ ಹೆದ್ದಾರಿಗಳಲ್ಲಿಯೂ ಮಳೆಗಾಲದ ಸಮಸ್ಯೆಯಿಂದ ವಾಹನ ಸಂಚಾರಕ್ಕೆ ಯಾವುದೇ ತೊಂದರೆಯಾಗದಂತೆ ಸೂಕ್ತ ಕ್ರಮದ ಜತೆಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವುದಕ್ಕೆ ಸೂಚಿಸಿರುವುದಾಗಿ ಕ್ಯಾ. ಚೌಟ ಹೇಳಿದ್ದಾರೆ.

 ಬಿ.ಸಿ.ರೋಡ್ ನಿಂದ ಅಡ್ಡಹೊಳೆವರೆಗೆ 64 ಕಿ.ಮೂಈ. ಉದ್ದದ ಹೆದ್ದಾರಿ ಕಾಮಗಾರಿ 2017ರಲ್ಲಿ ಎಲ್. ಆಂಡ್ ಟಿ ಕಂಪನಿಗೆ 821 ಕೋಟಿ ರೂಗಳಿಗೆ ವಹಿಸಲಾಗಿತ್ತು. ಹಲವು ಕಾರಣಕ್ಕೆ ವಿಳಂಬವಾಗಿ ಬಳಿಕ ಅರ್ಧದಲ್ಲೇ ಸ್ಥಗಿತಗೊಂಡಿತು. 2021ರಲ್ಲಿ 64 ಕಿ.ಮೀ. ಉದ್ದದ ಹೆದ್ದಾರಿಯನ್ನು 49 ಕಿ.ಮೀ ಹಾಗೂ 15 ಕಿ.ಮೀ. ಎಂದು ವಿಭಾಗಿಸಿ ಕೆಎನ್ ಆರ್ ಕನ್ಸ್ ಸ್ಟ್ರಕ್ಷನ್ಸ್ ಹೈದರಾಬಾದ್ ಹಾಗು ಎಂ. ಔತಡೆ ಪ್ರೈ. ಲಿ. ಮಹಾರಾಷ್ಟ್ರ ಕಂಪನಿಗಳಿಗೆ ಗುತ್ತಿಗೆ ನೀಡಲಾಯಿತು. ಅಲ್ಲಿಂದ ಕಾಮಗಾರಿಗೆ ವೇಗ ದೊರಕಿತು. ಪಾಣೆಮಂಗಳೂರು, ಮೆಲ್ಕಾರ್, ಮಾಣಿ, ನೆಕ್ಕಿಲಾಡಿ, ಉಪ್ಪಿನಂಗಡಿ ಜಂಕ್ಷನ್, ಉಪ್ಪಿನಂಗಡಿ ಸುಬ್ರಹ್ಮಣ್ಯ ಕ್ರಾಸ್, ನೆಲ್ಯಾಡಿ, ಪೆರಿಯಶಾಂತಿಗಳಲ್ಲಿ ಓವರ್ ಪಾಸ್ ಮೇಲ್ಸೇತುವೆ ಹಾಗೂ ಕಲ್ಲಡ್ಕದಲ್ಲಿ 2.1 ಕಿ.ಮೀ. ಉದ್ದದ ಫ್ಲೈಓವರ್ ನಿರ್ಮಾಣ ಕಾಮಗಾರಿ ಏಕಕಾಲದಲ್ಲಿ ಆರಂಭಗೊಂಡಿತು.

ಕಲ್ಲಡ್ಕದ ಪೂರ್ಲಿಪ್ಪಾಡಿಯಿಂದ ಕೃಷಱಣಕೋಡಿಯವರೆಗೆ ಒಟ್ಟು 2.1 ಕಿ.ಮೀ. ಉದ್ದರ ಈ ಮೇಲ್ಸೇತುವೆಯಲ್ಲಿ 70 ಪಿಲ್ಲರ್ ಗಳಿವೆ. ಒಂದರಿಂದ ಇನ್ನೊಂದಕ್ಕೆ 30 ಮೀಟರ್ ಅಂತರವಿದ್ದು, ಒಟ್ಟು 72 ಸ್ಪಾನ್ ಗಳ ಫ್ಲೈಓವರ್ ಇದಾಗಿದೆ.ಜೂನ್ 10ರೊಳಗೆ ಫ್ಲೈಓವರ್ ಗೆ ಸಂಬಂಧಪಟ್ಟ ಎಲ್ಲ ಕಾಮಗಾರಿ ಮುಕ್ತಾಯಗೊಳ್ಳಲಿದೆ.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.