ಬಂಟ್ವಾಳ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ಲೋಕಾಯುಕ್ತ ಜನ ಸಂಪರ್ಕ ಸಭೆಯನ್ನು ಆಯೋಜಿಸಲಾಗಿದ್ದು, 21 ದೂರು ಅರ್ಜಿಗಳು ಸ್ವೀಕೃತಗೊಂಡವು.
ಮಂಗಳೂರು ಲೋಕಾಯುಕ್ತ ವಿಭಾಗದ ಪೊಲೀಸ್ ಅಧೀಕ್ಷಕ ಕುಮಾರ್ ಚಂದ್ರ, ಪೊಲೀಸ್ ಉಪಾಧೀಕ್ಷಕರಾದ ಡಾ. ಗಾನಾ ಪಿ.ಕುಮಾರ್, ಸುರೇಶ್ ಕುಮಾರ್ ಪಿ ಹಾಗೂ ತಂಡ ಭೇಟಿ ನೀಡಿ, ಕರ್ನಾಟಕ ಲೋಕಾಯುಕ್ತ ಕಾಯಿದೆಯಡಿ ದೂರು ಅರ್ಜಿಯ ನಮೂನೆಗಳನ್ನು ವಿತರಿಸಿ, ಭರ್ತಿ ಮಾಡಿ, ಅಫಿದಾವಿತ್ ಮಾಡಿಸಿದ ದೂರು ಅರ್ಜಿಗಳನ್ನು ಸ್ವೀಕರಿಸಿದರು. ಸರ್ಕಾರಿ ಕಚೇರಿಗಳಲ್ಲಿ ಕೆಲಸಗಳಲ್ಲಿ ವಿಳಂಬ ಹಾಗೂ ಹಲವು ವಿಷಯಗಳ ಕುರಿತು ಸಾರ್ವಜನಿಕರು ದೂರುಗಳನ್ನು ನೀಡಿದರು.
ಬಂಟ್ವಾಳ ತಹಸೀಲ್ದಾರ್ ಡಿ. ಅರ್ಚನಾ ಭಟ್, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸಚಿನ್ ಕುಮಾರ್ ಉಪಸ್ಥಿತರಿದ್ದು, ಪೂರಕ ಸಹಕಾರ ನೀಡಿದರು. ಲೋಕಾಯುಕ್ತ ಇನ್ಸ್ ಪೆಕ್ಟರ್ ಗಳಾದ ಚಂದ್ರಶೇಖರ ಕೆ.ಎನ್, ಭಾರತಿ, ಸಿಬ್ಬಂದಿಗಳಾದ ಸುರೇಂದ್ರ, ಮಹೇಶ್, ಗಂಗಣ್ಣ, ವೈಶಾಲಿ, ರಾಜಪ್ಪ, ಪ್ರವೀಣ್, ವಿವೇಕ್, ರುದ್ರೇಗೌಡ ಹಾಜರಿದ್ದು, ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.
ಗ್ರಾಮಸಭೆಗಳಲ್ಲೂ ಮಾಹಿತಿ:
ಲೋಕಾಯುಕ್ತ ಅಹವಾಲು ಸ್ವೀಕಾರ ಪ್ರತಿ ತಾಲೂಕು ಕೇಂದ್ರಗಳಲ್ಲಿ ನಡೆಸಲಾಗುತ್ತಿದೆ. ಇದಕ್ಕೆ ತಾಲೂಕು ಮಟ್ಟದ ಅಧಿಕಾರಿಗಳು ಬಂದರಷ್ಟೇ ಯಶಸ್ವಿಯಾಗಲು ಸಾಧ್ಯ. ಗ್ರಾಮಸಭೆಗಳಲ್ಲಿ ಲೋಕಾಯುಕ್ತ ಕಾರ್ಯವಿಧಾನ ಕುರಿತು ಮಾಹಿತಿ ನೀಡುವ ಕಾರ್ಯ ಮಾಡಲು ನಾವು ತಯಾರಿದ್ದು, ಇದಕ್ಕೆ ಮುಂಚಿತವಾಗಿ ಇಲಾಖೆಗಳು ಮಾಹಿತಿ ನೀಡಬೇಕು ಎಂದರು.
ಹಲವು ದೂರುಗಳು:
ಸೋಮವಾರ ಸುರಿಯುವ ಮಳೆ ಇದ್ದರೂ ಸುಮಾರು 21 ದೂರುಗಳು ಲೋಕಾಯುಕ್ತಕ್ಕೆ ಬಂದವು. ಕಳ್ಳಿಗೆಬೆಟ್ಟುವಿನ ಯಮುನಾ ಎಂಬ ಮಹಿಳೆಯ ಮನೆ ಎರಡು ವರ್ಷಗಳ ಹಿಂದೆ ಮಳೆಯಿಂದ ಸಂಪೂರ್ಣ ಹಾನಿಯಾಗಿದ್ದು, ಸರಕಾರದ ನೆರವು ದೊರಕುವುದಾಗಿ ಸ್ಥಳಕ್ಕೆ ಭೇಟಿ ನೀಡಿದವರೆಲ್ಲರೂ ಭರವಸೆ ನೀಡಿದ್ದರು. ಅದರಂತೆ ಮನೆ ಕಟ್ಟಿಸಿದರೂ ನೆರವು ಬಂದಿಲ್ಲ ಎಂದು ದೂರಿದರು. ಪಲ್ಲಮಜಲುವಿಬಲ್ಲಿ ಕೋರೆಯೊಂದರ ಸ್ಫೋಟದಿಂದ ಮನೆಗೆ ಹಾನಿಯಾಗಿದ್ದು, ನಿಲ್ಲಿಸಲು ಸೂಚಿಸಿದರೂ ನಿಲ್ಲಿಸುತ್ತಿಲ್ಲ ಎಂದು ಸ್ಥಳೀಯರು ಗಮನಕ್ಕೆ ತಂದರು. ಎರಡು ವರ್ಷಗಳ ಹಿಂದೆ ಅಂಬೇಡ್ಕರ್ ವಸತಿ ಶಾಲೆ ಬಗ್ಗೆ ದೂರು ತಂದಿದ್ದೇನೆ. ಆದರೂ ಅದು ಬೀಳುವ ಸ್ಥಿತಿಯಲ್ಲಿರುವ ಕುರಿತು ಗಮನ ಸೆಳೆದಿದ್ದೇನೆ. ಮೂರು ತಿಂಗಳಿಗೊಮ್ಮೆ ಪರಿಶಿಷ್ಟ ಜಾತಿ, ಪಂಗಡಗಳ ಕುಂದು ಕೊರತೆ ಸಭೆಯನ್ನು ಏರ್ಪಡಿಸಬೇಕು ಎಂದು ವಿಶ್ವನಾಥ ಚಂಡ್ತಿಮಾರ್ ಒತ್ತಾಯಿಸಿದರು.
ತುಂಬೆ ಡ್ಯಾಂ ಸಂತ್ರಸ್ತ ರೈತರಿಗೆ ವರತೆ ಪ್ರದೇಶಕ್ಕೆ ಕೇಂದ್ರ ಜಲ ಆಯೋಗದ ನಿರ್ದೇಶನದಂತೆ ನ್ಯಾಯೋಚಿತ ಸೂಕ್ತ ಪರಿಹಾರ ದೊರಕದಿರುವ ಬಗ್ಗೆ ತಾಲೂಕು ರೈತ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ದೂರು ನೀಡಿದರು. .ಸಜೀಪ ಮುನ್ನೂರು ಗ್ರಾಮದಲ್ಲಿ ಸಾರ್ವಜನಿಕ ಹಿಂದೂ ರುದ್ರಭೂಮಿಗೆ ಸರಕಾರ ಎರಡು ಸ್ಥಳ ಮಂಜೂರು ಆಗಿದೆ. ಈತನಕ ಸ್ಮಶಾನ ನಿರ್ಮಾಣ ಆಗದಿರುವ ಬಗ್ಗೆ ಅವರು ದೂರು ನೀಡಿದರು.ರಾಷ್ಟ್ರೀಯ ಹೆದ್ದಾರಿ ಮೆಲ್ಕಾರ್ ಡೆಂಜಿಪಾಡಿ ರಾಜ ಕಾಲುವೆ ಒತ್ತುವರಿಯಿಂದಾಗಿ ನೇತ್ರಾವತಿ ನದಿಗೆ ನೀರು ಹರಿದು ಹೋಗುವ ತೋಡು ಹೂಳು ತುಂಬಿದ್ದು ನರಿಕೊಂಬು ಗ್ರಾಮದ ನಾಯಿಲ ಪ್ರದೇಶದ ರೈತರ ಸುಮಾರು 200 ಎಕರೆ ಅಧಿಕ ಕೃಷಿ ಭೂಮಿ ನೀರು ತುಂಬಿ ಪ್ರತಿವರ್ಷ ನಷ್ಟವನ್ನು ಅನುಭವಿಸುತ್ತಿದ್ದು ರಾಜಕಾಲುವೆ ಒತ್ತುವರಿ ತೆರವುಗೊಳಿಸಿ ತೋಡಿನ ಹೂಳೆತ್ತುವ ಬಗ್ಗೆ.ದೂರು ನೀಡಿದರು.
ಸಜೀಪ ಮುನ್ನೂರು ಗ್ರಾಮದ ಅಲಾಡಿ ಮುಖ್ಯ ರಸ್ತೆಯಲ್ಲಿ ಮಂಜಿನಡ್ಕ ಎಂಬಲ್ಲಿ ದಿಡೀರ್ ಆಗಿ ಮೋರಿ ನಿರ್ಮಾಣ ಮಾಡಿ ಕಾಮಗಾರಿ ಅರ್ಧಂಬರ್ಧ ನಡೆದಿದ್ದು ರಸ್ತೆಯಲ್ಲಿ ಮಣ್ಣಿನ ರಾಶಿ ಹಾಕಿದ್ದು ವಾಹನ ಸಂಚಾರಕ್ಕೆ ತೊಡಕ್ಕಾಗುತ್ತಿರುವ ಬಗ್ಗೆ ಗಮನ ಸೆಳೆದರು. ಸುಜೀಪ ಮುನ್ನೂರು ಗ್ರಾಮದ ಶ್ರೀ ಮಹಾಕಾಳಿ ದೇವಸ್ಥಾನ ಸಂಪರ್ಕ ರಸ್ತೆಗೆ 2021 _22ನೇ ಸಾಲಿನ ಮಳೆ ಹಾನಿ ಪರಿಹಾರ ಲೆಕ್ಕ ಶೀರ್ಷಿಕೆ 5054 ಯೋಜನೆಯಡಿ ರೂಪಾಯಿ 40 ಲಕ್ಷ ರೂ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ ದೊರಕದಿರುವ ಬಗ್ಗೆ ಬಂಟ್ವಾಳ ತಾಲೂಕು ರೈತ ಸಂಘದ ಅಧ್ಯಕ್ಷ ಎಂ ಸುಬ್ರಹ್ಮಣ್ಯ ಭಟ್ ಲಿಖಿತ ಮನವಿ ನೀಡಿ ಸೂಕ್ತ ಕ್ರಮಕ್ಕೆ ಒತ್ತಾಯಿಸಿದರು