ವಿದ್ಯಾರ್ಥಿಗಳು ಒಳ್ಳೆಯ ಅಂಕದ ಜೊತೆಗೆ ಸಂಸ್ಕಾರಯುತವಾಗಿ ಮುನ್ನಡೆದು ತಂದೆ ತಾಯಂದಿರಿಗೆ, ಗುರುಹಿರಿಯರಿಗೆ ಗೌರವ ತರುವಂತಾದರೆ ಸಮೃದ್ಧ ಸಮಾಜವಾಗಬಹುದು ಎಂದು ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನದ ಆಡಳಿತ ನಿರ್ದೇಶಕ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಫರಂಗಿಪೇಟೆ ಸೇವಾಂಜಲಿ ಟ್ರಸ್ಟಿ ಕೃಷ್ಣಕುಮಾರ್ ಪೂಂಜ ಹೇಳಿದರು.
ಬಂಟ್ವಾಳ ತಾಲೂಕು ಜಮೀಯ್ಯತುಲ್ ಫಲಾಹ್ ವತಿಯಿಂದ ಶನಿವಾರ ಬಿ.ಸಿ.ರೋಡ್ ಲಯನ್ಸ್ ಸೇವಾ ಮಂದಿರದಲ್ಲಿ ನಡೆದ ಎಸ್ಸೆಸ್ಸೆಲ್ಸಿ, ಪಿಯುಸಿ ಮತ್ತು ಸಿಬಿಎಸ್ಸಿ ಯಲ್ಲಿ ತಾಲೂಕಿಗೆ ಟಾಪರ್ ಆದ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ ಜಮೀಯ್ಯತುಲ್ ಫಲಾಹ್ ಅಧ್ಯಕ್ಷ ರಶೀದ್ ವಿಟ್ಲ ಮಾತನಾಡಿ ಮಕ್ಕಳನ್ನು ಹಣ ಸಂಪಾದಿಸುವ ಯಂತ್ರಗಳನ್ನಾಗಿ ಮಾಡದೇ ಬದುಕಲ್ಲಿ ಸಂತೋಷ ತುಂಬುವ ಸತ್ಪ್ರಜೆಯಾಗಿ ಮೂಡಿಸಬೇಕು ಎಂದು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಸಾಹಿತಿ, ಕವಯತ್ರಿ ಶಮೀಮಾ ಕುತ್ತಾರ್ ಮಾತನಾಡಿ ಮಕ್ಕಳ ವಿದ್ಯಾಭ್ಯಾಸದಲ್ಲಿ ತಾಯಿಯಾದವಳ ಪಾತ್ರ ಮಹತ್ತರವಾಗಿದೆ. ವಿದ್ಯೆ, ಉದ್ಯೋಗದ ಬಳಿಕವೂ ಗುರು ಹಿರಿಯರ ಸ್ಮರಣೆ ಅತೀ ಅಗತ್ಯ ಎಂದರು.
ಅಭಿನಂದನಾ ಬಾಷಣ ಮಾಡಿದ ಉಪನ್ಯಾಸಕ ಅಬ್ದುಲ್ ರಝಾಕ್ ಅನಂತಾಡಿ ವಿದ್ಯಾರ್ಥಿಗಳು ಬೇಜವಬ್ದಾರಿತನ, ಆಲಸ್ಯ ತೋರದೇ ಜೀವನದ ಪ್ರತಿ ಹಂತದಲ್ಲೂ ಕಷ್ಟಪಟ್ಟು ಮುಂದೆ ಬರಬೇಕು ಎಂದು ಹೇಳಿದರು.
ಮಾಜಿ ಜಿಲ್ಲಾಧ್ಯಕ್ಷ ಮಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭ ರಾಜ್ಯಪ್ರಶಸ್ತಿ ವಿಜೇತ ಸಮಾಜಸೇವಕ ಕೆ.ಕೆ.ಪೂಂಜ ಹಾಗೂ ಲೆಕ್ಕಪರಿಶೋಧಕ (ಸಿಎ) ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಬ್ದುಲ್ ನೂಮಾನ್ ತುಂಬೆ ಅವರನ್ನು ಸನ್ಮಾನಿಸಲಾಯಿತು. ತಾಲೂಕಿನ ಪ್ರತಿಭಾವಂತ ಹಾಗೂ ಜಮೀಯ್ಯತುಲ್ ಫಲಾಹ್ ಮಕ್ಕಳಿಗೆ ನಗದು ಹಣ ಮತ್ತು ಪುರಸ್ಕಾರ ನೀಡಲಾಯಿತು. ನೂತನ ಆಜೀವ ಸದಸ್ಯ ಪಿ.ಎ. ರಹೀಮ್ ಅವರನ್ನು ಅಭಿನಂದಿಸಲಾಯಿತು.
ತಾಲೂಕು ಕಾರ್ಯದರ್ಶಿ ಹಾಗೂ ಜಿಲ್ಲಾಧ್ಯಕ್ಷ ಕೆ.ಕೆ. ಶಾಹುಲ್ ಹಮೀದ್ ಸ್ವಾಗತಿಸಿದರು. ಆಶಿಕ್ ಕುಕ್ಕಾಜೆ ಕಿರಾಅತ್ ಪಠಿಸಿದರು. ಪಿ. ಮಹಮ್ಮದ್, ಶೇಖ್ ರಹ್ಮತುಲ್ಲಾ, ಹಕೀಮ್ ಕಲಾಯಿ, ಉಬೈದ್ ವಿಟ್ಲ, ಕರೀಂ ಸಜಿಪ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಕೋಶಾಧಿಕಾರಿ ಎಂ.ಎಚ್. ಇಕ್ಬಾಲ್ ವಂದಿಸಿದರು. ಮುಸ್ತಫಾ ಗೋಳ್ತಮಜಲು ಕಾರ್ಯಕ್ರಮ ನಿರೂಪಿಸಿದರು.