ಸಣ್ಣ ಮಕ್ಕಳ ಆರೈಕೆಗೆಂದೇ ಅಂಗನವಾಡಿ ಕಂ ಕ್ರಷ್ ಸೆಂಟರ್ ಅನ್ನು ಈ ವರ್ಷದಿಂದ ಆರಂಭಿಸಲಾಗಿದೆ. ಬಂಟ್ವಾಳ ತಾಲೂಕಿನಲ್ಲಿ ಮೊದಲ ಕೇಂದ್ರ ಬಿ.ಸಿ.ರೋಡಿನ ಕೈಕುಂಜೆ ಅಂಗನವಾಡಿ ಕೇಂದ್ರದಲ್ಲಿ ಆರಂಭವಾಗಿದ್ದು, ಮಕ್ಕಳ ಪ್ರವೇಶ ಇನ್ನೂ ಆಗಬೇಕಷ್ಟೇ.
ರಾಜ್ಯದಾದ್ಯಂತ ಈ ಕೇಂದ್ರಗಳು ಆಯ್ದ ಅಂಗನವಾಡಿ ಕೇಂದ್ರಗಳಲ್ಲಿ ಆರಂಭಗೊಳ್ಳುತ್ತಿವೆ. ಮೇ 15ಕ್ಕೆ ರಾಜ್ಯದಾದ್ಯಂತ ಅಂಗನವಾಡಿ ಕೇಂದ್ರಗಳು ಚಟುವಟಿಕೆಗಳನ್ನು ಆರಂಭಿಸಿದ್ದು, ಈ ನಿಟ್ಟಿನಲ್ಲಿ ಶಿಶು ಅಭಿವೃದ್ಧಿ ಯೋಜನೆಯಡಿ ಅಂಗನವಾಡಿ ಕಂ ಕ್ರಷ್ ಸೆಂಟರ್ ಪೇಟೆ, ಪಟ್ಟಣಗಳ ಆಯ್ದ ಕೇಂದ್ರಗಳಲ್ಲಿ ಆರಂಭಗೊಳ್ಳುತ್ತಿವೆ. ಕೇಂದ್ರ ಸರಕಾರದ ಮಿಷನ್ ಶಕ್ತಿಯಡಿ ಅಂಗನವಾಡಿ ಕಂ ಕ್ರಷ್ ಎಂಬ ಪಾಲ್ನಾ ಹೆಸರಿನಡಿ ಈ ಯೋಜನೆ ಆರಂಭಗೊಂಡಿದೆ. ರಾಜ್ಯ ಸರಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಶಿಶು ಅಭಿವೃದ್ಧಿ ಯೋಜನೆಯಡಿ ಈ ಕೇಂದ್ರಗಳು ಆರಂಭಗೊಳ್ಳುತ್ತಿದೆ., ಇದಕ್ಕೆ ಕೇಂದ್ರ ಸರಕಾರ ಅನುದಾನ ನೀಡುತ್ತಿದೆ. 2 ರಿಂದ 3 ವರ್ಷದ ಪುಟಾಣಿ ಮಕ್ಕಳೂ ಆಟವಾಡಲು ಹಾಗೂ ಸುರಕ್ಷಿತವಾಗಿರಲು ಇದಕ್ಕೆ ಸಿಬ್ಬಂದಿಗಳನ್ನು ನೇಮಕ ಮಾಡಲಾಗುತ್ತದೆ. ಉದ್ಯೋಗಸ್ಥ ಮಹಿಳೆಯರಿಗೆ ಅನುಕೂಲವಾಗುವಂತೆ ಅಂಗನವಾಡಿ ಕಂ ಕ್ರಷ್ ಸೆಂಟರ್ ಗಳನ್ನು ತೆರೆಯಲಾಗಿದೆ. ಈ ಮಕ್ಕಳಿಗೆ ಪೌಷ್ಟಿಕ ಆಹಾರದೊಂದಿಗೆ ಆಟವಾಡಲು ಅವಕಾಶ ನೀಡಲಾಗುತ್ತದೆ. ಈ ಕೇಂದ್ರಗಳನ್ನು ಬಡವರು ಮಾತ್ರವಲ್ಲದೆ, ಅಗತ್ಯವಿರುವವರೂ ಬಳಸಿಕೊಳ್ಳಬಹುದು.
ಈಗಾಗಲೇ ಅಂಗನವಾಡಿ ಕಂ ಕ್ರಷ್ ಕೇಂದ್ರ ಕೈಕುಂಜೆಯಲ್ಲಿ ಆರಂಭವಾಗಿದ್ದು, ಬಿ.ಸಿ.ರೋಡ್ ನಿಂದ ಕೇವಲ ೫೦೦ ಮೀಟರ್ ದೂರದಲ್ಲಿದೆ. ನಗರದ ಮಧ್ಯ ಭಾಗದಲ್ಲಿರುವ ಈ ಕೇಂದ್ರ ಜನವಸತಿ ಪ್ರದೇಶದ ಮಧ್ಯದಲ್ಲಿ ಹಾಗೂ ರಸ್ತೆಯ ಸನಿಹದಲ್ಲೇ ಇರುವ ಕಾರಣ, ತಾಯಂದಿರಿಗೆ ಮಕ್ಕಳನ್ನು ಬಿಟ್ಟುಹೋಗಲು ಅನುಕೂಲಕರವಾಗಲಿದೆ. ಇಲ್ಲಿ ಮಕ್ಕಳನ್ನು ನೋಡಿಕೊಳ್ಳಲು ಪ್ರತ್ಯೇಕ ಸಹಾಯಕ, ಸಿಬ್ಬಂದಿಯ ನೇಮಕವೂ ಆಗಿದೆ ಎಂದು ಸಿಡಿಪಿಓ ಮಮ್ತಾಜ್ ಹೇಳಿದ್ದಾರೆ.