ಕವರ್ ಸ್ಟೋರಿ

ಬಂಟ್ವಾಳದ ಅಂಬೇಡ್ಕರ್ ಭವನಕ್ಕೆ ನಿರ್ವಹಣೆ ಸಮಸ್ಯೆ

ಸಮಾಜ ಕಲ್ಯಾಣ ಇಲಾಖೆಯ ಮೂಲಕ ಬಿ.ಸಿ.ರೋಡಿನಲ್ಲಿ ನಿರ್ಮಾಣಗೊಂಡ ಬಂಟ್ವಾಳ ತಾಲೂಕು ಮಟ್ಟದ ಭಾರತರತ್ನ ಡಾ. ಬಿ.ಅರ್. ಅಂಬೇಡ್ಕರ್ ಸಭಾಭವನಕ್ಕೆ ನಿರ್ವಹಣೆಯ ಸಮಸ್ಯೆ ಎದುರಾಗಿದೆ. ಸಭಾಭವನ ನಿರ್ವಹಣೆ ಮಾಡುವ ಉದ್ದೇಶದಿಂದ ಹಸ್ತಾಂತರ ಪಡೆದುಕೊಳ್ಳಲು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ಬಂಟ್ವಾಳ ಪುರಸಭೆಗೆ ಪತ್ರ ಬರೆದಿದ್ದಾರೆ. ಆದರೆ ಪುರಸಭೆ ಸದ್ಯಕ್ಕಂತೂ ಇದನ್ನು ಒಪ್ಪಿಕೊಂಡಿಲ್ಲ. ಪುರಸಭೆಯ ನಿರ್ವಹಣೆಯನ್ನೇ ಮಾಡುವುದು ಕಷ್ಟ, ಇನ್ನು ಅಂಬೇಡ್ಕರ್ ಭವನದ ನಿರ್ವಹಣೆಯ ಹೊಣೆ ಯಾರು ಹಒತ್ತುಕೊಳ್ಳುವುದು ಎಂಬಿತ್ಯಾದಿ ಚರ್ಚೆಗಳೊಂದಿಗೆ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಇದನ್ನು ಸದ್ಯಕ್ಕಂತೂ ಒಪ್ಪಿಕೊಳ್ಳುವುದು ಬೇಡ ಎಂದು ತೀರ್ಮಾನಿಸಲಾಗಿದೆ.

AMBEDKAR BHAVAN BANTWALA

ಬಂಟ್ವಾಳ ತಹಶೀಲ್ದಾರ್ ಅರ್ಚನಾ ಡಿ. ಭಟ್ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ತಾಲೂಕು ಮಟ್ಟದ ಡಾ. ಬಿ.ಆರ್. ಅಂಬೇಡ್ಕರ್ ಭವನ ನಿರ್ವಹಣಾ ಸಮಿತಿಯ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದಿತ್ತು. ಬಳಿಕ ಸಮಿತಿಯಲ್ಲಿ ಕೈಗೊಂಡ ನಿರ್ಣಯದಂತೆ ಪುರಸಭೆಗೆ ಹಸ್ತಾಂತರಿಸಲು ಪತ್ರ ಬರೆಯಲಾಯಿತು.

ಜಾಹೀರಾತು

3 ಕೋಟಿ ರೂ ವೆಚ್ಚದ ಕಟ್ಟಡ:
ಬಿ.ಸಿ.ರೋಡಿನ ತಾಲೂಕು ಪಂಚಾಯತಿ ಕಚೇರಿ ಬಳಿ ಸುಮಾರು ೩ ಕೋಟಿ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತವಾದ ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಸಭಾಭವನ ನಿರ್ಮಾಣಗೊಂಡಿದೆ. ೨೦೧೭ರಲ್ಲಿ ಶಿಲಾನ್ಯಾಸಗೊಂಡು ಕಾಮಗಾರಿ ನಿಧಾನಗತಿಯಲ್ಲಿ ಸಾಗಿ ಬಳಿಕ ಪೂರ್ಣಗೊಂಡಿತು. ಆದರೆ ಉದ್ಘಾಟನೆಗೆ ಸಾಕಷ್ಟು ಸಮಯ ತಗಲಿತು. ಕೊನೆಗೂ ೨೦೨೪ರಲ್ಲಿ ಈ ಕಟ್ಟಡ ಉದ್ಘಾಟನೆಗೊಂಡಿತು.

ಸಮಸ್ಯೆ ಏನು?
ಅಂಬೇಡ್ಕರ್ ಭವನ ಕಟ್ಟಡ ಸುಸಜ್ಜಿತ ಎಂದು ಮೇಲ್ನೋಟಕ್ಕೆ ಕಂಡರೂ ಒಳಗೆ ಸಾಕಷ್ಟು ಸಮಸ್ಯೆಗಳು ಕಂಡುಬಂದವು. ಇಲ್ಲಿ ವಾಹನಗಳಿಗೆ ಪಾರ್ಕಿಂಗ್ ಸಮಸ್ಯೆ ಇದೆ ಎಂಬುದು ಒಂದು ಸಮಸ್ಯೆಯಾದರೆ, ಸಭಾಂಗಣದೊಳಗೆ ಪ್ರತಿಧ್ವನಿ ಸಮಸ್ಯೆಯಿಂದಾಗಿ ಇಲ್ಲಿ ಕಾರ್ಯಕ್ರಮ ಆಯೋಜಿಸುವವರು ಇದನ್ನು ನಿವಾರಿಸಲು ಸರ್ಕಸ್ ಮಾಡಬೇಕಾಯಿತು. ಅಲ್ಲದೆ ಸಭಾಂಗಣದ ವಿದ್ಯುತ್ ಬಿಲ್, ಸ್ವಚ್ಚತೆ ಮೊದಲಾದ ನಿರ್ವಹಣೆ ಸಮಾಜ ಕಲ್ಯಾಣ ಇಲಾಖೆಗೆ ದೊಡ್ಡ ಸವಾಲಾಯಿತು. ಇಲ್ಲಿ ಕಾರ್ಯಕ್ರಮಗಳೂ ಆಗುವುದು ಕಡಿಮೆಯಾದ ಕಾರಣ, ಪುರಸಭೆ ಹಸ್ತಾಂತರ ಪಡೆದುಕೊಳ್ಳಲು ಪತ್ರ ಬರೆದು ಮನವಿ ಮಾಡಿಕೊಂಡಿದೆ.

ಪುರಸಭೆಯಲ್ಲಿ ಚರ್ಚೆ:
ಡಾ. ಬಿ.ಆರ್. ಅಂಬೇಡ್ಕರ್ ಭವನವನ್ನು ಬಂಟ್ವಾಳ ಪುರಸಭೆ ಹಸ್ತಾಂತರ ಪಡೆದುಕೊಳ್ಳ ಬೇಕು ಎನ್ನುವ ಸಮಾಜ ಕಲ್ಯಾಣ ಇಲಾಖೆಯ ಪತ್ರ ಕಳೆದ ಸೋಮವಾರ ನಡೆದ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಚರ್ಚೆಗೆ ಬಂದಿದೆ. ಸದಸ್ಯರು ಈ ಬಗ್ಗೆ ಚರ್ಚೆ ನಡೆಸಿದಾಗ ಪುರಸಭೆಯಲ್ಲಿ ಇರುವ ವ್ಯವಸ್ಥೆಗಳನ್ನೇ ನಮಗೆ ನಿರ್ವಹಣೆ ಮಾಡಲು ಸಾಧ್ಯವಾಗುತ್ತಿಲ್ಲ. ಇನ್ನೂ ಇಷ್ಟು ದೊಡ್ಡ ಸಭಾಭವನದ ನಿರ್ವಹಣೆ ನಮ್ಮಿಂದ ಸಾಧ್ಯವೇ? ಬೇಕಿದ್ದರೆ ಸ್ವಚ್ಚತೆ ಮತ್ತು ನೀರಿನ ವ್ಯವಸ್ಥೆಯನ್ನು ನಿರ್ವಹಣೆ ಮಾಡಬಹುದು ಎನ್ನುವ ಅಭಿಪ್ರಾಯ ಕೌನ್ಸಿಲ್ ಸದಸ್ಯರಿಂದ ಕೇಳಿ ಬಂತು. ಸಭಾಭವನದ ಲಕ್ಷಾಂತರ ರೂಪಾಯಿ ವಿದ್ಯುತ್ ಬಿಲ್ ಈವರೆಗೆ ಪಾವತಿ ಮಾಡಿಲ್ಲ, ಮಳೆ ನೀರು ಒಳಬರುತ್ತದೆ, ಪ್ರತಿಧ್ವನಿ ಸಮಸ್ಯೆ ಇದೆ, ಪಾರ್ಕಿಂಗ್ ಸಮಸ್ಯೆ ಇದ್ದು ನಿರ್ವಹಣೆ ಕಷ್ಟ ಎನ್ನುವ ವಿಚಾರ ಚರ್ಚೆಯಾಗಿ ಸದ್ಯಕ್ಕೆ ಹಸ್ತಾಂತರ ಪಡೆದುಕೊಳ್ಳಲು ಪುರಸಭೆಯ ಕೌನ್ಸಿಲ್ ಹಿಂದೇಟು ಹಾಕಿತು.
ಅಂಬೇಡ್ಕರ್ ಭವನ ಹೇಗೆ ನಿರ್ವಹಣೆಯಾಗಬೇಕು?
ಡಾ. ಬಿ.ಆರ್. ಅಂಬೇಡ್ಕರ್ ಸಭಾಭವನವನ್ನು ನಿರ್ವಹಣೆಯನ್ನು ಸುಸಜ್ಜಿತವಾಗಿ ಮಾಡಬೇಕು. ಇಲ್ಲಿ ಕಾಲಕಾಲಕ್ಕೆ ಕ್ಲೀನಿಂಗ್ ಮಾಡಬೇಕು, ಅಲ್ಲಿರುವ ಸೊತ್ತುಗಳನ್ನು ನೋಡಿಕೊಳ್ಳಲು ವಾಚ್‌ಮನ್ ಬೇಕು, ಕಾರ್ಯಕ್ರಮಗಳು ನಡೆಯುವಾಗ ನೋಡಿಕೊಳ್ಳಲು ಸಿಬ್ಬಂದಿ ಬೇಕು, ಕರೆಂಟ್ ಬಿಲ್ ಪಾವತಿಸಬೇಕು. ಕಾರ್ಯಕ್ರಮಗಳು ನಡೆದರೆ ಮಾತ್ರ ಆದಾಯ ಬರುತ್ತದೆ. ಇಲ್ಲವಾದಲ್ಲಿ ನಿರ್ವಹಣೆ ಕಷ್ಟ. ಹೀಗಾಗಿ ಕಟ್ಟಡ ಕಟ್ಟಿದ ಮೇಲೆ ಅದನ್ನು ನಿರ್ವಹಿಸುವ ಹೊಣೆಗಾರಿಕೆಯೂ ಸರಕಾರದ್ದಾಗಿದೆ. ಇದೀಗ ಒಂದು ಇಲಾಖೆಯಿಂದ ಮತ್ತೊಂದು ಇಲಾಖೆಗೆ ಹಸ್ತಾಂತರ ಪ್ರಕ್ರಿಯೆ ನಡೆಯುತ್ತದೆಯೇ, ಇಲ್ಲವೇ ಎಂಬುದು ಕುತೂಹಲಕಾರಿ.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.