ಕನ್ನಡವಷ್ಟೇ ಅಲ್ಲ, ಹಲವು ಭಾರತೀಯ ಭಾಷೆಗಳ ರಂಗಭೂಮಿ, ಸಿನಿಮಾ ಕ್ಷೇತ್ರಗಳಿಗೆ ಹೊಸ ದಿಕ್ಕು ನೀಡಿದ, ಮೈಸೂರು ರಂಗಾಯಣದ ಸ್ಥಾಪಕ ನಿರ್ದೇಶಕ ಬಿ.ವಿ.ಕಾರಂತ ನೆನಪನ್ನು ಹಸಿರಾಗಿಸುವ ಉದ್ದೇಶದಿಂದ ಏ.26ರಿಂದ ಮೂರು ದಿನಗಳ ನಾಟಕೋತ್ಸವ ಮಂಚಿಯಲ್ಲಿ ನಡೆಯಲಿದೆ.ಬಿ.ವಿ.ಕಾರಂತ ಹೆಸರಲ್ಲಿ ಮಂಚಿಯನ್ನು ಸಾಂಸ್ಕೃತಿಕ ಗ್ರಾಮವೆಂದು ಗುರುತಿಸುವಂತಾಗಬೇಕು ಎಂಬ ಧ್ಯೇಯೋದ್ದೇಶದೊಂದಿಗೆ ಈ ಕಾರ್ಯಕ್ರಮಗಳನ್ನು ಕಳೆದ ಹದಿನಾರು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದೇವೆ ಎನ್ನುತ್ತಾರೆ ಟ್ರಸ್ಟ್ ಅಧ್ಯಕ್ಷ ಕಜೆ ರಾಮಚಂದ್ರ ಭಟ್.
ಈ ಬಾರಿಯ ನಾಟಕೋತ್ಸವದಲ್ಲಿ ಏನೇನಿದೆ
ಮಂಚಿ ನಾಟಕೋತ್ಸವ ಹೆಸರಿನಲ್ಲಿ ಬಿ.ವಿ.ಕಾರಂತ ರಂಗಭೂಮಿಕಾ ಟ್ರಸ್ಟ್ ಆಯೋಜನೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಈ ಬಾರಿ ಏಪ್ರಿಲ್ 26ರಿಂದ 28ರವರೆಗೆ ಪ್ರತಿದಿನ ಸಂಜೆ 6ರಿಂದ ಮಂಚಿ ಕುಕ್ಕಾಜೆಯ ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರದಲ್ಲಿ ನಡೆಯಲಿದೆ. ಕಾರ್ಕಳ ಯಕ್ಷರಂಗಾಯಣ ಮತ್ತು ಮಂಚಿ ಕುಕ್ಕಾಜೆಯ ಸಿದ್ಧಿವಿನಾಯಕ ಭಜನಾ ಮಂಡಳಿ ಇದಕ್ಕೆ ಸಾಥ್ ನೀಡಲಿವೆ. ಇದು ಮಂಚಿ ಕುಕ್ಕಾಜೆಯ ರಸ್ತೆಯ ಪಕ್ಕದಲ್ಲೇ ಇದೆ. 26ರಂದು ಸಂಜೆ 6 ಗಂಟೆಯಿಂದ ಆರಂಭಗೊಳ್ಳುವ ನಾಟಕೋತ್ಸವವನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಉದ್ಘಾಟಿಸುವರು. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾಜಿ ಸದಸ್ಯ ಪಿಯೂಸ್ ಎಲ್. ರೋಡ್ರಿಗಸ್ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಅಭಿರುಚಿ ಜೋಡುಮಾರ್ಗದ ಮಹಾಬಲೇಶ್ವರ ಹೆಬ್ಬಾರ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಭಾಗವಹಿಸಡುವರು. ಬಳಿಕ ಉಡುಪಿ ಜಿಲ್ಲೆಯ ಬ್ರಹ್ಮಾವರ ಬೈಕಾಡಿಯ ಮಂದಾರ ಸಾಂಸ್ಕೃತಿಕ ಹಾಗೂ ಸೇವಾ ಸಂಘಟನೆ ವತಿಯಿಂದ ಮೂಲತಃ ಇಟಲಿ ನಾಟಕಕಾರ ದಾರಿಯೋ ಪೋ ನ ಒನ್ ವಾಸ್ ನ್ಯೂಡ್, ಒನ್ ವೋರ್ ಟೈಲ್ ಎಂಬ ನಾಟಕದ ಪ್ರಕಾಶ್ ಗರುಡ ಕನ್ನಡಕ್ಕೆ ಅನುವಾದಿಸಿದ ಬೆತ್ತಲಾಟ ನಾಟಕ ಪ್ರದರ್ಶನಗೊಳ್ಳಲಿದೆ. ವಿನ್ಯಾಸ ಹಾಗೂ ನಿರ್ದೇಶನವನ್ನು ರೋಹಿತ್ ಬೈಕಾಡಿ ಮಾಡಲಿದ್ದಾರೆ.
27ರಂದು ಭಾನುವಾರ ಶಂಜೆ 6 ಗಂಟೆಯಿಂದ ಪ್ರಜ್ಞಾನಂ ಟ್ರಸ್ಟ್ ಉಡುಪಿ ಇವರಿಂದ ಏಕವ್ಯಕ್ತಿ ನಾಟಕ ಹೆಜ್ಜೆಗೊಂದು ಬೆಳಕು ನಾಟಕ ಪ್ರದರ್ಶನಗೊಳ್ಳಲಿದೆ. ರಂಗಪದ್ಯವನ್ನು ಸುಧಾ ಅಡುಕಳ, ರಂಗವಿನ್ಯಾಸ, ಸಂಗೀತ ಮತ್ತು ನಿರ್ದೇಶನವನ್ನು ಗಣೇಶ್ ರಾವ್ ಎಲ್ಲೂರು ನಿರ್ವಹಿಸುವರು. ವಿದುಷಿ ಸಂಸ್ಕೃತಿ ಪ್ರಭಾಕರ್ ಅಭಿನಯಿಸಲಿದ್ದಾರೆ.
28ನೇ ಸೋಮವಾರ ಸಮಾರೋಪ ಸಮಾರಂಭ ನಡೆಯಲಿದ್ದು, ಅಧ್ಯಕ್ಷತೆಯನ್ನು ಹಿರಿಯ ವಕೀಲರಾದ ಮಿತ್ತೂರು ಈಶ್ವರ ಉಪಾಧ್ಯಾಯ ವಹಿಸುವರು. ಯಕ್ಷರಂಗಾಯಣ ಕಾರ್ಕಳದ ನಿರ್ದೇಶಕ ಬಿ.ವೆಂಕಟರಮಣ ಐತಾಳ್, ಕುಕ್ಕಾಜೆ ಶ್ರೀ ಸಿದ್ಧಿವಿನಾಯಕ ಭಜನಾ ಮಂಡಳಿ ಅಧ್ಯಕ್ಷ ಎನ್.ಸಂಜೀವ ಆಚಾರ್ಯ ಭಾಗವಹಿಸುವರು. ಈ ವೇಳೆ ಯಕ್ಷರಂಗಾಯಣ ಕಾರ್ಕಳ ಪ್ರಸ್ತುತಪಡಿಸುವ ಯಕ್ಷರಂಗಾಯಣದ ರಿಪರ್ಟರಿ ಕಲಾವಿದರಿಂದ ಕುಮಾರವ್ಯಾಸ ಭಾರತದ ವಿರಾಟ್ ಪರ್ವದಿಂದ ಆಯ್ದ ಭಾಗವಾದ ಆರೊಡನೆ ಕಾದುವೆನು ನಾಟಕ ಪ್ರದರ್ಶನಗೊಳ್ಳಲಿದೆ.