ಗ್ಯಾರಂಟಿ ಯೋಜನೆ ಅನುಷ್ಠಾನದಲ್ಲಿ ಬಂಟ್ವಾಳ ರಾಜ್ಯಕ್ಕೇ ಮಾದರಿಯಾಗಿದೆ, ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳು ಇಂದು ಜನಸಾಮಾನ್ಯರ ಬದುಕಿಗೆ ಸಹಕಾರಿಯಾಗಿದೆ ಎಂದು ಕರ್ನಾಟಕ ರಾಜ್ಯದ ಮೈಸೂರು ವಿಭಾಗದ ಪಂಚಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್ ಹೇಳಿದ್ದಾರೆ.
ಬಂಟ್ವಾಳ ಸ್ಪರ್ಶ ಕಲಾ ಮಂದಿರದಲ್ಲಿ ಮಂಗಳವಾರ ಬಂಟ್ವಾಳ ತಾಲೂಕಿನ ಗ್ಯಾರಂಟಿ ಸಂಭ್ರಮೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಕರ್ನಾಟಕ ಗ್ಯಾರಂಟಿ ಅನುಷ್ಠಾನವನ್ನು ಸಮರ್ಪಕವಾಗಿ ಮಾಡುವ ಮೂಲಕ ದೇಶಕ್ಕೆ ಮಾದರಿಯಾಗಿದೆ. ಅದರಲ್ಲೂ ಬಂಟ್ವಾಳ ತಾಲೂಕು ಅಧ್ಯಕ್ಷೆ ಜಯಂತಿ ವಿ. ಪೂಜಾರಿ ನೇತೃತ್ವದಲ್ಲಿ ಕಾರ್ಯಕ್ರಮ ಮಾದರಿಯಾಗಿ ಅನುಷ್ಠಾನವಾಗಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಬಂಟ್ವಾಳ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷೆ ಜಯಂತಿ ವಿ.ಪೂಜಾರಿ, ತಾಲೂಕಿನಲ್ಲಿ ಸುಮಾರು ಎರಡೂವರೆ ಲಕ್ಷ ಫಲಾನುಭವಿಗಳು ೪೦೨ ಕೋಟಿ ರೂಪಾಯಿಯನ್ನು ಪಡೆದುಕೊಂಡಿದ್ದಾರೆ ಎಂದರು.
ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಇದನ್ನು ಜನರು ಗಮನಿಸಬೇಕು ಏಂದರು.ಕಾಂಗ್ರೆಸ್ ಪಕ್ಷದ ಲೋಕಸಭಾ ಅಭ್ಯರ್ಥಿ ಆರ್. ಪದ್ಮರಾಜ್ ಪೂಜಾರಿ ಮಾತನಾಡಿ, ಕಾಂಗ್ರೆಸ್ ಪಕ್ಷದಿಂದಷ್ಟೇ ಜನರ ಕಲ್ಯಾಣ ಸಾಧ್ಯ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಸಂಕಷ್ಟಗಳು ಬಂದೊದಗಿವೆ ಎಂದು ಟೀಕಿಸಿದರು.
ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ ಮಾತನಾಡಿ, ಮಹಿಳೆಯರಿಗೆ ಗ್ಯಾರಂಟಿ ಯೋಜನೆಯಿಂದ ಸಾಕಷ್ಟು ಲಾಭಗಳಾಗಿವೆ ಎಂದರು.ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಭರತ್ ಮುಂಡೋಡಿ ಮಾತನಾಡಿ, ಜಿಲ್ಲೆಯಾದ್ಯಂತ ಪಂಚಗ್ಯಾರಂಟಿ ಯೋಜನೆ ಯಶಸ್ವಿಯಾಗಿ ಅನುಷ್ಠಾನಗೊಂಡಿವೆ ಎಂದರು.
ಗೃಹಲಕ್ಷ್ಮಿಯಿಂದ ಮಲ್ಲಿಗೆ ಕೃಷಿ
ಗೃಹಲಕ್ಷ್ಮೀ ಯೋಜನೆಯ ಹಣದಿಂದ ಮಲ್ಲಿಗೆ ಕೃಷಿ ಆರಂಭಿಸಿ ಯಶಸ್ವಿಯಾದ ಕುಕ್ಕಿಪ್ಪಾಡಿಯ ಪ್ರೀತಿ, ಮಲ್ಲಿಗೆ ಹೂ ತೆಗೆದುಕೊಂಡೇ ಬಂದು ವೇದಿಕೆಯಲ್ಲಿದ್ದ ಪುಷ್ಪಾ ಅಮರನಾಥ್ ಮತ್ತು ಜಯಂತಿ ಪೂಜಾರಿ ಅವರಿಗೆ ಮುಡಿಸಿದರು. ಕೊಳ್ನಾಡು ಗ್ರಾಮದ ಸುಲೋಚನಾ ಗೃಹಲಕ್ಷ್ಮಿಯಿಂದ ತಾನು ಸ್ವಾವಲಂಬಿಯಾದದ್ದನ್ನು ತಿಳಿಸಿದರೆ, ಅನ್ನಭಾಗ್ಯ ಜಾರಿಗೆ ಬಂದ ಮೇಲೆ ಮೂರು ಹೊತ್ತು ಊಟ ಮಾಡುತ್ತಿದ್ದೇವೆ ಎಂದು ಮಾಣಿಯ ಲೈಲಾಬಿ ಹಾಗೂ ಸುಂದರಿ ಭಾವುಕರಾದರು. ಬಾಳೆಪುಣಿಯ ಶಮೀಮಾ ಗೃಹಜ್ಯೋತಿಯಿಂದ ಉಳಿತಾಯವಾಗುತ್ತಿದೆ ಎಂದರೆ ಕನ್ಯಾನದ ಧನ್ಯಶ್ರೀ ಯುವನಿಧಿಯಿಂದ ಉಪಕಾರವಾಗುತ್ತಿರುವುದನ್ನು ತಿಳಿಸಿದರು. ಈ ವೇಳೆ ಧನ್ಯಶ್ರೀಗೆ ಸೂಕ್ತ ಉದ್ಯೋಗ ದೊರಕಿಸಿಕೊಡುವ ಭರವಸೆಯನ್ನು ರಮಾನಾಥ ರೈ ನೀಡಿದರು. ಬಂಟ್ವಾಳ ಪುರಸಭೆ ಅಧ್ಯಕ್ಷ ವಾಸು ಪೂಜಾರಿ, ಬೂಡ ಅಧ್ಯಕ್ಷ ಬೇಬಿ ಕುಂದರ್, ಜಿ.ಪಂ.ಉಪಕಾರ್ಯದರ್ಶಿ ಕೆ.ಇ.ಜಯರಾಮ್, ಜಿಲ್ಲಾ ಮಟ್ಟದ ಸರಕಾರಿ ಅಧಿಕಾರಿಗಳು, ತಾಲೂಕು ಮಟ್ಟದ ಸರಕಾರಿ ಅಧಿಕಾರಿಗಳು, ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ಜಿಲ್ಲಾ ಹಾಗೂ ಬಂಟ್ವಾಳ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಸಮಿತಿ ಸದಸ್ಯ ವಿನಯ ಕುಮಾರ್ ಸಿಂದ್ಯಾ ಸ್ವಾಗತಿಸಿದರು. ಬಾಲಕೃಷ್ಣ ಶೆಟ್ಟಿ ಕೊಡಾಜೆ ಕಾರ್ಯಕ್ರಮ ನಿರೂಪಿಸಿದರು.