ಸರಕಾರಿ ವಿದ್ಯಾಸಂಸ್ಥೆಯಲ್ಲಿ ಕಲಿಯುವವರನ್ನು ತಾತ್ಸಾರದಿಂದ ನೋಡುವವರಿದ್ದಾರೆ. ಖಾಸಗಿ ಕಾಲೇಜಿಗೇ ತಮ್ಮ ಮಕ್ಕಳನ್ನು ಸೇರಿಸಬೇಕು, ಎಲ್ಲಿ ಒಳ್ಳೆಯ ಕೋಚಿಂಗ್ ಸಿಗುತ್ತದೆ ಎಂದು ಊರೂರು ಸುತ್ತುವವರೂ ಇದ್ದಾರೆ. ಅಂಥದ್ದರಲ್ಲಿ ಪ್ರಾಥಮಿಕ ಶಾಲೆಯಿಂದ ಪಿಯುಸಿವರೆಗೆ ಸರಕಾರಿ ಶಾಲೆಯಲ್ಲೇ ಕಲಿತ ವಿದ್ಯಾರ್ಥಿನಿಯೊಬ್ಬಳು ವಿಜ್ಞಾನ ವಿಭಾಗದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ದೊಡ್ಡ ಸಾಧನೆ ಮಾಡಿದ್ದಾಳೆ.
ಕಾಣಿಯೂರಿನ ದ್ವಿತೀಯ ಪಿಯುಸಿ ವಿಜ್ಞಾನ ವಿಬಾಗದ ಶ್ರೀವಿದ್ಯಾ ಎನ್. ರಾಜ್ಯದಲ್ಲಿ ಸರಕಾರಿ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳಲ್ಲಿ ರಾಜ್ಯಕ್ಕೇ ಪ್ರಥಮ ಹಾಗೂ ಒಟ್ಟು ಫಲಿತಾಂಶದಲ್ಲಿ ರಾಜ್ಯಕ್ಕೆ ಐದನೇ ಸ್ಥಾನ ಗಳಿಸುವ ಮೂಲಕ ಗಮನ ಸೆಳೆದಿದ್ದಾಳೆ.
ಐಎಎಸ್ ಆಗುವತ್ತ ತಯಾರಿ:
ಸಾಮಾನ್ಯವಾಗಿ ಪಿಯುಸಿ ವಿಜ್ಞಾನ ವಿಭಾಗದಲ್ಲಿ ರಾಂಕ್ ಬಂದವರು ಒಂದೋ ಇಂಜಿನಿಯರಿಂಗ್, ಇಲ್ಲದಿದ್ದರೆ ಮೆಡಿಕಲ್ ಓದುವ ಬಯಕೆಯನ್ನು ಹೊಂದಿರುತ್ತಾರೆ. ಅದಕ್ಕಾಗಿ ಮತ್ತೆ ಸಿಇಟಿ, ನೀಟ್, ಜೆಇಇ ಎಂದೆಲ್ಲಾ ತಯಾರಿ ನಡೆಸುತ್ತಾರೆ. ಆದರೆ ಶ್ರೀವಿದ್ಯಾ ಹಾಗಲ್ಲ. ಮುಂದೆ ಬಿಎಸ್ಸಿ ಓದಿ, ಐಎಎಸ್ ಆಗುವ ಗುರಿಯನ್ನು ಹೊಂದಿದ್ದಾಳೆ. ಇವಳಿಗೆ ತಂದೆ ನಾರಾಯಣ ಭಟ್ ಸಂಪೂರ್ಣ ಸಾಥ್ ನೀಡುತ್ತಿದ್ದಾರೆ. ಪಡೆದ ಅಂಕಗಳು:
ಕನ್ನಡ -100, ಇಂಗ್ಲಿಷ್ -99, ಫಿಸಿಕ್ಸ್ -99, ಕೆಮೆಸ್ಟಿç-99-ಬಯಲಾಜಿ-100, ಮ್ಯಾಥ್ಸ್ -98, ಒಟ್ಟು 595.
ಶ್ರೀವಿದ್ಯಾ ವಿವರ ಹೀಗಿದೆ:
ಕಾಣಿಯೂರು ಸಮೀಪದ ಬೆಳಂದೂರು ಗ್ರಾಮದ ಅಜಿರಂಗಲ ನಿವಾಸಿ ಕಾಣಿಯೂರು ಪ್ರಗತಿ ಆಂಗ್ಲ ಮಾಧ್ಯಮ ಪ್ರೌಢ ಶಾಲಾ ಮುಖ್ಯ ಶಿಕ್ಷಕ ನಾರಾಯಣ ಭಟ್ ಹಾಗೂ ಶೈಲಶ್ರೀ ದಂಪತಿಯ ಎರಡನೇ ಪುತ್ರಿ ಶ್ರೀವಿದ್ಯಾ ಸರಕಾರಿ ಶಾಲೆಗಳಲ್ಲಿ ಓದಿಯೇ ಈ ಅಭೂತಪೂರ್ವ ಸಾಧನೆ ಮಾಡಿದ್ದಾಳೆ. ಕಾಣಿಯೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದನೇ ತರಗತಿಯಿಂದ ಏಳನೇ ತಗತಿಯ ತನಕ ಹಾಗೂ ಕಾಣಿಯೂರು ಸರಕಾರಿ ಪದವಿಪೂರ್ವ ಕಾಲೆಜಿನ ಹೈಸ್ಕೂಲು ವಿಭಾಗದಲ್ಲಿ ಹೈಸ್ಕೂಲು ವಿದ್ಯಾಭ್ಯಾಸ ಮುಗಿಸಿ ಇದೇ ಸಂಸ್ಥೆಯಲ್ಲಿ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಓದಿ ಅದ್ವಿತೀಯ ಸಾಧನೆ ಮಾಡಿರುವ ಶ್ರೀವಿದ್ಯಾ ಮುಂದೆ ಬಿಎಸ್‌ಸಿ ಯೊಂದಗೆ ಐಎಎಸ್ ಮಾಡುವ ಗುರಿ ಇಟ್ಟುಕೊಂಡಿದ್ದಾಳೆ. ಈಕೆಗೆ ತಂದೆ, ತಾಯಿ , ಸಹೋದರಿ ಮೂರನೇ ವರ್ಷದ ಬಿಎಸ್‌ಸಿ ಓದುತ್ತಿರುವ ಶ್ರೀದೇವಿ. ಎನ್, ಅವರ ಸಂಪೂರ್ಣ ಸಹಕಾರ , ಕಾಲೇಜಿನ ಪ್ರಿನ್ಸಿಪಾಲ್ ಹಾಗೂ ಉಪನ್ಯಾಸಕರ ನಿರಂತರ ಪ್ರೋತ್ಸಾಹ ಇದೆ. ಎಸ್‌ಎಸ್‌ಎಲ್ ಸಿಯನ್ನು ಕನ್ನಡ ಮಾಧ್ಯಮದಲ್ಲಿ ಮಾಡಿದ್ದ ಶ್ರೀವಿದ್ಯಾ 616 ಅಂಕ ಪಡೆದು ಅತ್ಯುತ್ತಮ ಸಾಧನೆ ಮಾಡಿದ್ದಳು.
ಶ್ರೀವಿದ್ಯಾ ಯಶಸ್ಸಿನ ಗುಟ್ಟೇನು?
ಟ್ಯೂಶನ್ ಗೆ ಹೋಗಿಲ್ಲ, ಕನ್ನಡ ಮಾಧ್ಯಮದಲ್ಲೇ ಎಸ್ಸೆಸ್ಸೆಲ್ಸಿವರೆಗೆ ಕಲಿತದ್ದು, ಪಿಯುಸಿಯಲ್ಲಿ ಇಂಗ್ಲೀಷ್ ಭಾಷೆ ಕಷ್ಟ ಆಗ್ಲಿಲ್ಲ, ಸರಕಾರಿ ವಿದ್ಯಾಸಂಸ್ಥೆಯಲ್ಲೇ ಕಲಿಕೆ, ಪಟ್ಟಣದಲ್ಲಿರುವವರು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಸಾಧನೆ ಮಾಡಿರುವ ಶ್ರೀವಿದ್ಯಾ ಯಶಸ್ಸಿನ ಗುಟ್ಟೇನು?
ಈ ಕುರಿತು ಮಾತನಾಡಿದ ಅವರ ತಂದೆ ನಾರಾಯಣ ಭಟ್, ಆಕೆ ದಿನವಿಡೀ ಓದುವ ಅಬ್ಯಾಸ ಇಟ್ಟುಕೊಂಡಿಲ್ಲ. ದಿನದಲ್ಲಿ ಮೂರರಿಂದ ನಾಲ್ಕು ಗಂಟೆ ಓದುತ್ತಿದ್ದಳು.. ಮುಖ್ಯವಾಗಿ ಅಂದಿನ ಪಾಠಪ್ರವಚನಗಳನ್ನು ಅಂದೇ ಓದಿ ಮುಗಿಸುವ ಮತ್ತು ಕರಗತ ಮಾಡಿಕೊಳ್ಳುವ ಪರಿಪಾಟ ಹೊಂದಿದ್ದಳು. ಮನೆಯಲ್ಲಿ ಅಪ್ಪ ಅಮ್ಮ, ಸಹೋದರಿ, ಕಾಲೆಜಿನಲ್ಲಿ ಪ್ರಿನ್ಸಿಪಾಲ್ ಹಾಗೂ ಉಪನ್ಯಾಸಕರ ಮಾರ್ಗದರ್ಶನ ಇತ್ತು. ಎಂದರು. ಮಗಳು ಸರಕಾರಿ ಶಾಲೆಯಲ್ಲೇ ಓದಿ ಅತ್ಯುತ್ತಮ ಸಾಧನೆ ಮಾಡಿರುವುದು ನಮಗೆಲ್ಲಾ ಹೆಮ್ಮೆಯ ಸಂಗತಿಯಾಗಿದೆ. ಮತ್ತು ಇತರರಿಗೆ ಮಾದರಿಯಾಗಿದೆ. ನಮ್ಮ ಮಾರ್ಗದರ್ಶನವಿದ್ದರೂ ಆಕೆ ಯಾವುದೇ ಕೋಚಿಂಗ್ ಪಡೆಯದೆ, ಸ್ವಂತ ಪರಿಶ್ರಮದಿಂದ ಈ ಸಾಧನೆ ಮಾಡಿರುವುದು ಹೆಮ್ಮೆಯ ವಿಷಯವಾಗಿದೆ ಎಂದವರು ಹೇಳಿದರು.