ರಸ್ತೆ ಬದಿಗಳಲ್ಲಿ ತ್ಯಾಜ್ಯ ಎಸೆಯದಂತೆ ಜನತೆಯಲ್ಲಿ ಅರಿವು ಮೂಡಿಸಿದರೂ ಅದಕ್ಕೆ ಜನರು ಸ್ಪಂದಿಸದೇ ಇದ್ದಲ್ಲಿ, ಅಂಥ ಸ್ಥಳಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿ, ಕಸ ಎಸೆಯುವವರನ್ನು ಪತ್ತೆಹಚ್ಚಿ ದಂಡ ವಿಧಿಸಿ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಹಾಗೂ ಸ್ವಚ್ಛ ಭಾರತ್ ಮಿಷನ್ ನೋಡೆಲ್ ಆಗಿರುವ ಜಯಲಕ್ಷ್ಮೀ ರಾಯಕೋಡ್ ಹೇಳಿದ್ದಾರೆ.
ಬಂಟ್ವಾಳ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬಂಟ್ವಾಳ ಪುರಸಭೆ ಮತ್ತು ವಿಟ್ಲ ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಸಂಬಂಧಿಸಿದಂತೆ 14 ಗ್ರಾಮ ಪಂಚಾಯಿತಿಗಳ ರಸ್ತೆ ಬದಿಯಲ್ಲಿ ಹಸಿ ಮತ್ತು ಒಣತ್ಯಾಜ್ಯ ವಿಲೇವಾರಿ ಕುರಿತು ಸಭೆ ನಡೆಸಿ ಅಧಿಕಾರಿಗಳು ಹಾಗೂ ಸ್ಥಳೀಯಾಡಳಿತ ಗಳ ಅಧ್ಯಕ್ಷರಿಗೆ ಸೂಚನೆ ನೀಡಿದ್ದಾರೆ.
ಬಂಟ್ವಾಳ ಪುರಸಭೆ ಸುತ್ತಮುತ್ತಲೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಜನರು ಕಸ ತಂದು ಪುರಾಸಭಾ ವ್ಯಾಪ್ತಿಗೆ ತಂದು ಎಸೆಯುತ್ತಿರುವುದರಿಂದ ತೊಂದರೆ ಆಗುತ್ತಿರುವ ಹಿನ್ನೆಲೆಯಲ್ಲಿ ಪಂಚಾಯತ್ ಗಳು ಈಗಾಗಲೇ ಒಣ ಕಸವನ್ನು ಸಂಗ್ರಹ ಮಾಡುತ್ತಿದೆ. ಅದೇ ರೀತಿ ಹಸಿ ಕಸವನ್ನು ಸಂಗ್ರಹಿಸಿ, ಅದನ್ನು ಪುರಸಭೆಯ ವಾಹನಗಳಿಗೆ ನೀಡುವ ಕುರಿತು ಯೋಚನೆ ಮಾಡಬಹುದು. ಈ ಕುರಿತು ಪುರಸಭೆಯ ಕೌನ್ಸಿಲ್ ನಿರ್ಣಯ ತೆಗೆದುಕೊಂಡರೆ, ಪಂಚಾಯಿತಿಗಳಿಂದ ಹಸಿ ಕಸವನ್ನು ತೆಗೆದುಕೊಳ್ಳಲು ಅವಕಾಶವಾಗುತ್ತದೆ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು. ಏಪ್ರಿಲ್, ಮೇ ಮತ್ತು ಜೂನ್ ತಿಂಗಳಲ್ಲಿ ಹಸಿ ಮತ್ತು ಒಣ ಕಸ ವಿಲೇವಾರಿಗೆ ಅಭಿಯಾನ ನಡೆಸಿ ಸ್ವಚ್ಛತೆಗೆ ಆದ್ಯತೆ ನೀಡುವಂತೆ ಸೂಚನೆ ನೀಡಲಾಯಿತು.
ಬಂಟ್ವಾಳ ಪುರಸಭಾಧ್ಯಕ್ಷ ಬಿ.ವಾಸು ಪೂಜಾರಿ ಮಾತನಾಡಿ, ಪುರಸಭೆಯ ಪಾಣೆಮಂಗಳೂರು ಗಡಿ ಪ್ರದೇಶದಲ್ಲಿ ಸಜೀಪಮುನ್ನೂರು ಗ್ರಾಮ ಪಂಚಾಯಿತಿ ಭಾಗದಿಂದ ಕಸ ತಂದು ಹಾಕುತ್ತಿರುವ ಕುರಿತು ಪುರಸಭೆಯಿಂದ 1 ಲಕ್ಷ ರೂ ಅನುದಾನ ಮೀಸಲಿಟ್ಟು, ಬೇಲಿ ಹಾಗೂ ಸಿಸಿ ಕ್ಯಾಮರಾ ಹಾಕುವ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದರು.
ಸಭೆಯಲ್ಲಿ ಬಂಟ್ವಾಳ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸಚಿನ್ ಕುಮಾರ್, ಪುರಸಭಾ ಮುಖ್ಯಾಧಿಕಾರಿ ರೇಖಾ ಜೆ. ಶೆಟ್ಟಿ, ವಿಟ್ಲ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕರುಣಾಕರ, ನರಿಕೊಂಬು, ಸಜೀಪಮುನ್ನೂರು, ಕಳ್ಳಿಗೆ, ಅಮ್ಟಾಡಿ, ಗೋಳ್ತಮಜಲು, ಬಾಳ್ತಿಲ, ವೀರಕಂಭ, ವಿಟ್ಲಪಡ್ನೂರು, ಅಳಿಕೆ, ಕೇಪು, ವಿಟ್ಲಮುಡ್ನೂರು, ಇಡ್ಕಿದು, ಅನಂತಾಡಿ, ನಾವೂರು, ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.