ಬಂಟ್ವಾಳ ತಾಲೂಕು ಬಾಲ್ತಿಲ ಗ್ರಾಮದ ಕಂಟಿಕ ಶಾಲಾ ವ್ಯಾಪ್ತಿಯ ನಾಗರಿಕರಿಗೆ ಶನಿವಾರ ಹಬ್ಬದ ವಾತಾವರಣ. ಬರೋಬರಿ 40 ವರ್ಷಗಳ ಬಳಿಕ ತಮ್ಮ ಊರಿನ ಶಾಲೆಯಲ್ಲಿ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮದ ಮೆರಗು
ಎರಡು ವರ್ಷದ ಹಿಂದೆ ಮುಚ್ಚುವ ಪರಿಸ್ಥಿತಿ ಬಂದಾಗ ವರ್ಗಾವಣೆಗೊಂಡು ಶಾಲೆಗೆ ಬಂದ ಶಿಕ್ಷಕಿ ಚೇತನ ಕುಮಾರಿ ಅವರ ವಿಶೇಷ ಪ್ರಯತ್ನದಿಂದಾಗಿ 5 ಮಕ್ಕಳಿದ್ದ ಶಾಲೆಯಲ್ಲಿ ಇಂದು 22 ಮಂದಿ ಕಲಿಯುತ್ತಿದ್ದಾರೆ. ದಾನಿಗಳಿಂದ, ಸಂಘ ಸಂಸ್ಥೆಗಳ ಮೂಲಕ ಶಾಲೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಶಾಲೆಯನ್ನು ಉಳಿಸುವ ಕಾರ್ಯ ನಡೆಸುತ್ತಿದ್ದಾರೆ. ಈ 22 ಮಕ್ಕಳ ಪೈಕಿ, ರಾಜಸ್ಥಾನ, ಬಿಹಾರ ದಿಂದ ಒಟ್ಟು 6 ಮಕ್ಕಳು ಒಳಗೊಂಡಿದ್ದಾರೆ. ಅವರಿಗೆ ಕನ್ನಡ ಓದಲು ಬರೆಯಲು ಕಲಿಸಿ ಇವತ್ತು ಯಕ್ಷಗಾನವನ್ನು ವೇದಿಕೆಯಲ್ಲಿ ಪ್ರದರ್ಶಿಸುವ ಮಟ್ಟದಲ್ಲಿ ತಯಾರಿಗೊಳಿಸಿದ್ದು, ಇದೀಗ ಪ್ರದರ್ಶನವೂ ಆಗಿದೆ.
ಕಲ್ಲಡ್ಕದ ಪದ್ಮಾವತಿ ದ್ವೀಪ ಪ್ರಜ್ವಲನೆ ಮಾಡಿದರು. ಸ್ಥಳದಾನಿಗಳಾದ ಅನಂತ ಶೆಣೈ ಕಂಟಿಕ, ಬಾಲ್ತಿಲ ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ, ಸತ್ಯಸಾಯಿ ಸಂಸ್ಥೆಯ ನಾರಾಯಣ ಕಾರಂತ್, ಮುಕಾಂಬಿಕ ದಂಪತಿ, ಶ್ರೀ ಶಾರದಾ ಗಣಪತಿ ಶಿಕ್ಷಣ ಸಂಸ್ಥೆಯ ಸಂಚಾಲಕ ರಾಜರಾಮ್ ಭಟ್ ಟಿ.ಜಿ, ವಿವೇಕ ಜಾಗೃತ ಬಳಗದ ಅಧ್ಯಕ್ಷೆ ಜಯಲಕ್ಷ್ಮಿ ಗಿರಿಧರ್, ಬಂಟ್ವಾಳ ಬಿ ಆರ್ ಸಿ ಯ ಐ ಆರ್ ಟಿ ಗಳಾದ ರವೀಂದ್ರ ಹಾಗೂ ಸುರೇಖಾ, ಗ್ರಾಮ ಪಂಚಾಯತ್ ಸದಸ್ಯ ರಾಜೇಶ್, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ರಾಜೇಶ್, ಹಿಂದೆ ಶಾಲೆಯಲ್ಲಿ ಬೋಧನೆ ಮಾಡುತ್ತಿದ್ದ ಶಿಕ್ಷಕಿ ಸುಜಾತ, ಅಂಗನವಾಡಿ ಬಾಲವಿಕಾಸ ಸಮಿತಿಯ ಅಧ್ಯಕ್ಷ ಶ್ವೇತ, ಅಂಗನವಾಡಿ ಶಿಕ್ಷಕಿ ತನುಜ ಈ ಸಂದರ್ಭ ಉಪಸ್ಥಿತರಿದ್ದರು.ನಂತರ ಮಕ್ಕಳಿಂದ ನೃತ್ಯ ಭಜನೆ, ಅಂಗನವಾಡಿ ಹಾಗೂ ಶಾಲಾ ಮಕ್ಕಳಿಂದ ಯಕ್ಷಗಾನ ಸೇರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಅಲೆತ್ತೂರು ನರಸಿಂಹ ಮಯ್ಯ ಮಾರ್ಗದರ್ಶನದಲ್ಲಿ ಶಾಲಾ ಮಕ್ಕಳಿಂದ ಯಕ್ಷಗಾನ ವೈಭವ “ಶ್ರೀ ಕೃಷ್ಣ ಲೀಲೆ, ಕಂಸ ವದೆ ಗಮನ ಸೆಳೆಯಿತು. ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಚೇತನ ಸ್ವಾಗತಿಸಿ, ಶಿಕ್ಷಕ ಮಧುಸೂದನ್ ಪ್ರಾಸ್ತಾವಿಕ ಮಾತನಾಡಿದರು. ಗೌರವ ಶಿಕ್ಷಕಿಯರಾದ ಮೋನಿಷಾ ಸಹಕರಿಸಿದರು. ಅತಿಥಿ ಶಿಕ್ಷಕಿ ಜಯಂತಿ ಕಾರ್ಯಕ್ರಮ ನಿರೂಪಿಸಿದರು.