ಬಂಟ್ವಾಳ ಪುರಸಭಾ ವ್ಯಾಪ್ತಿಯ ವಿವಿದೆಡೆಯಲ್ಲಿ ಮನೆ, ಹೊಟೇಲ್ ,ಮಾಂಸದಂಗಡಿಯ ಕೊಳಚೆ ನೀರು,ತ್ಯಾಜ್ಯ ವಸ್ತುಗಳು ನೇರವಾಗಿ ಜಿಲ್ಲೆಯ ಜೀವನದಿ ಹರಿಯುವ ನೇತ್ರಾವತಿ ನದಿಯ ಒಡಲು ಸೇರುತ್ತಿರುವ ಹಿನ್ನಲೆಯಲ್ಲಿ ಮಂಗಳೂರು ಬೈಕಂಪಾಡಿಯಲ್ಲಿರುವ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಉಪಪರಿಸರಾಧಿಕಾರಿ ನೇತೃತ್ವದ ತಂಡ ನೇತ್ರಾವತಿ ನದಿತೀರದ ವಿವಿದೆಡೆಗೆ ಭೇಟಿ ನೀಡಿ ಪರಿಶೀಲಿಸಿ ನೀರಿನ ಬಳಕೆಗೆ ಯೋಗ್ಯವಾಗಿದೆಯೇ ಎಂಬ ನಿಟ್ಟಿನಲ್ಲಿ ನೀರಿನ ಸ್ಯಾಂಪಲ್ ಸಂಗ್ರಹಿಸಿದ್ದಾರೆ.
ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಉಪಪರಿಸರಾಧಿಕಾರಿ ಡಾ.ಮಂಜು ಆರ್.,ಸಹಾಯಕ ಸುನೀಲ್ ಕುಮಾರ್ ಹಾಗೂ ಪುರಸಭೆಯ ಇಂಜಿನಿಯರ್ ಡೊಮೆನಿಕ್ ಡಿಮೆಲ್ಲೋ, ಆರೋಗ್ಯ ನಿರೀಕ್ಷಕ ರತ್ನಪ್ರಸಾದ್ ಅವರು ಬಂಟ್ವಾಳ, ಪಾಣೆಮಂಗಳೂರು ಮತ್ತು ಬಿ.ಸಿ.ರೋಡಿನ ಪ್ರಮುಖ ಸ್ಥಳಗಳಲ್ಲಿಮಲೀನ ನೀರು ಮತ್ತು ತ್ಯಾಜ್ಯ ವಸ್ತುಗಳು ನೇತ್ರಾವತಿ ನದಿಗೆ ಸೇರುವ ಸ್ಥಳಗಳಿಗೆ ಭೇಟಿ ನೀಡಿದ್ದಾರೆ.ಪುರಸಭಾ ವ್ಯಾಪ್ತಿಯ ಸುಮಾರು 20 ಸ್ಥಳಗಳಲ್ಲಿ ಮಲೀನ ನೀರು ನೇರವಾಗಿ ನೇತ್ರಾವತಿ ನದಿ ನೀರಿಗೆ ಸೇರುತ್ತಿದ್ದು, ಉಪಪರಿಸರಾಧಿಕಾರಿಯವರ ತಂಡ ಸುಮಾರು 6 ಕಡೆಗಳಿಗೆ ಭೇಟಿ ನೀಡಿ ನೀರಿನ ಸ್ಯಾಂಪಲ್ ಸಂಗ್ರಹಿಸಿ ಮಹಜರು ಕೂಡ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.