ವಿಕಾಸಂ ಸೇವಾ ಫೌಂಡೇಶನ್, ಸಕ್ಷಮ ದಕ್ಷಿಣ ಕನ್ನಡ ಘಟಕ ಹಾಗೂ ಲಯನ್ಸ್ ಕ್ಲಬ್ ಬಂಟ್ವಾಳ ಜೊತೆ ವಿಶ್ವ ಆಟಿಸಂ ದಿನ ಕಾರ್ಯಕ್ರಮವನ್ನು ಬುಧವಾರ ಆಯೋಜಿಸಿತ್ತು. ವಾಮದಪದವು ಪ್ರಥಮ ದರ್ಜೆ ಕಾಲೇಜಿನ ಬಿ.ಎಸ್.ಡಬ್ಲ್ಯು ವಿದ್ಯಾರ್ಥಿಗಳು, ವಿಟ್ಲ ಪ್ರಥಮ ದರ್ಜೆ ಕಾಲೇಜಿನ ಎಂ.ಎಸ್.ಡ್ಲ್ಯು ವಿದ್ಯಾರ್ಥಿಗಳು, ಸಂತ ಅಲೋಶಿಯಲ್ ಕಾಲೇಜಿನ ಬಿ.ಎಡ್. ಶಿಕ್ಷಣ ಪ್ರಶಿಕ್ಷಾರ್ಥಿಗಳು, ಮಂಗಳೂರು ವಿವಿಯ ಎಂ.ಎಸ್.ಡಬ್ಲ್ಯು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು, ಇದಕ್ಕೂ ಮೊದಲು ಸರಕಾರಿ ಪ್ರಥಮ ದರ್ಜೆ ಕಾಲೇಜು ವಿಟ್ಲದ ಎಂ.ಎಸ್.ಡಬ್ಲ್ಯು ವಿದ್ಯಾರ್ಥಿಗಳು ಬೀದಿ ನಾಟಕ ನಡೆಸಿಕೊಟ್ಟರು.
ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬಂಟ್ವಾಳ ಪುರಸಭೆಯ ಪ್ರಭಾರ ಮುಖ್ಯಾಧಿಕಾರಿ ರೇಖಾ ಜೆ. ಶೆಟ್ಟಿ ಇಂದು ಸರಕಾರದ ಮಟ್ಟದಲ್ಲಿ ವಿಶೇಷಚೇತನರಿಗೆ ಅನುದಾನವನ್ನು ಕಾದಿರಿಸಬೇಕಾಗಿದೆ. ಇದಕ್ಕಾಗಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಈ ವಿಷಯದ ಅರಿವು ಪಡೆದುಕೊಳ್ಳಬೇಕು, ವಿಶೇಷಚೇತನ ಮಕ್ಕಳ ಗುರುತಿಸುವಿಕೆ ಪ್ರಾಥಮಿಕ ಹಂತದಲ್ಲೇ ಆಗಬೇಕಾಗಿದೆ. ಶಿಕ್ಷಕರಾದವರು ತರಗತಿಯಲ್ಲಿ ಇತರ ಮಕ್ಕಳೊಂದಿಗೆ ಹೋಲಿಸಿ, ತಾರತಮ್ಯ ಮಾಡಬಾರದು ಎಂದು ಹೇಳಿದರು.
ಸಿದ್ಧಕಟ್ಟೆ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಿನ್ಸಿಪಾಲ್ ಡಾ. ಅಜಕ್ಕಳ ಗಿರೀಶ್ ಭಟ್ ಮಾತನಾಡಿ, ಆಟಿಸಂ ಕುರಿತು ಸಾಮಾಜಿಕವಾಗಿ ಅರಿವು ಮೂಡಿಸುವುದು ಅಗತ್ಯ. ಸಮಾಜ ಆಟಿಸಂ ಮಕ್ಕಳೊಂದಗೆ ಬೆರೆಯಬೇಕು, ಸಮಾಜದಲ್ಲಿ ಬಲಹೀನರಿಗೂ ಅವಕಾಶ ದೊರಕಿಸಿ ಮುಖ್ಯವಾಹಿನಿಗೆ ತರಬೇಕು ಎಂದರು.
ಬಂಟ್ವಾಳ ತಾಲೂಕು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಿಡಿಪಿಓ ಮಮ್ತಾಜ್ ಮಾತನಾಡಿ, ಮಕ್ಕಳಿಗೆ ಸಂಬಂಧಪಟ್ಟ ವಿಷಯದಲ್ಲಿ ತಡಮಾಡುವುದು ಸರಿಯಲ್ಲ. ಚಿಕಿತ್ಸೆ, ನೆರವು ಹಾಗೂ ಮಕ್ಕಳ ಸಿಗಬೇಕಾದ ಸವಲತ್ತುಗಳನ್ನು ತಕ್ಞಣ ಒದಗಿಸುವುದು ಎಲ್ಲರ ಜವಾಬ್ದಾರಿ. ಮಕ್ಕಳ ಕುರಿತು ಗಮನ ಕೊಟ್ಟರೆ, ದೇಶಕ್ಕೆ ಒಳಿತು ಎಂದರು.
ಸಕ್ಷಮ ಭಾರತ್ ಸಂಘಟನೆಯ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ರಾಜಶೇಖರ ಭಟ್ ಕಾಕುಂಜೆ ಮಾತನಾಡಿ, ವಿಶೇಷಚೇತನ ಮಕ್ಕಳಿಗೆ ಸವಲತ್ತುಗಳನ್ನು ನೀಡಲು ಸರಕಾರ ವಿಳಂಬಿಸಬಾರದು. ಕಳೆದ ಎರಡು ತಿಂಗಳಿಂದ ಮಕ್ಕಳ ಸವಲತ್ತುಗಳು ದೊರಕಿಲ್ಲ ಎಂದರು.
ಅಧ್ಯಕ್ಷತೆಯನ್ನು ಬಂಟ್ವಾಳ ಲಯನ್ಸ್ ಕ್ಲಬ್ ನ ಅಧ್ಯಕ್ಷ ರಾಧಾಕೃಷ್ಣ ಬಂಟ್ವಾಳ ವಹಿಸಿ ನಿಸ್ವಾರ್ಥವಾಗಿ, ನಿಶ್ಯುಲ್ಕದೊಂದಿಗೆ ಕೆಲಸ ಮಾಡುತ್ತಿರುವ ವಿಕಾಸಂ ನೊಂದಿಗೆ ಸಹಕರಿಸುವುದಾಗಿ ತಿಳಿಸಿದರು. ಸರಕಾರೀ ಪ್ರಥಮ ದರ್ಜೆ ಕಾಲೇಜು ವಿಟ್ಲ ಸಮಾಜಕಾರ್ಯ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥರಾದ ಪ್ರಸನ್ನಕುಮಾರ್, ಸರಕಾರೀ ಪ್ರಥಮದರ್ಜೆ ಕಾಲೇಜು ವಾಮದಪದವು ಸಮಾಜಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಉದಯಕುಮಾರ್ ಸಿ ಆರ್ ಶುಭ ಹಾರೈಸಿದರು. ವಿಕಾಸಂ ಸ್ಥಾಪಕ ನಿರ್ದೇಶಕ ಧರ್ಮಪ್ರಸಾದ್ ರೈ ಸ್ವಾಗತಿಸಿದರು. ಮತ್ತೋರ್ವ ಸ್ಥಾಪಕ ನಿರ್ದೇಶಕ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಣೇಶ್ ಭಟ್ ವಾರಣಾಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿನಿ ಮಾನಸ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಈ ಸಂದರ್ಭ ಸಕ್ಷಮ ವತಿಯಿಂದ ವಿಕಾಸಂ ಫೌಂಡೇಶನ್ ಗೆ ಕಲಿಕಾ ಚಟುವಟಿಕೆಗಳಿಗೆ ಅನುಕೂಲವಾಗುವ ವಸ್ತುಗಳನ್ನು ಒದಗಿಸಲಾಯಿತು.