ಮಾ.28ರಿಂದ 30ರವರೆಗೆ ಶ್ರೀ ಉಳ್ಳಾಲ್ತಿ ಉಳ್ಳಾಕ್ಲು ಕೊಡಮಣಿತ್ತಾಯ ಹಾಗೂ ಪರಿವಾರ ದೈವಸ್ಥಾನ ಮುಲ್ಕಾಜೆಮಾಡ, ದೇವಶ್ಯಮೂಡೂರು, ಮಣಿನಾಲ್ಕೂರು ಪುನರ್ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ ನಡೆಯಲಿದೆ ಎಂದು ಮಾಜಿ ಸಚಿವ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಬಿ.ರಮಾನಾಥ ರೈ ಹೇಳಿದರು.
ಅವರು ಕ್ಷೇತ್ರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, ಕ್ಷೇತ್ರದ ತಂತ್ರಿಗಳಾದ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ಮಾರ್ಗದರ್ಶನ ಮತ್ತು ಕಾವಳಮಾಗಣೆ ತಂತ್ರಿಗಳಾದ ಗಣಪತಿ ಮುಚ್ಚಿನ್ನಾಯರ ನೇತೃತ್ವದಲ್ಲಿ ದೇವಶ್ಯಮೂಡೂರು, ದೇವಶ್ಯಪಡೂರು, ಮಣಿನಾಲ್ಕೂರು, ಕಾವಳಮೂಡೂರು, ಕಾವಳಪಡೂರು ಗ್ರಾಮದ ಕೂಡುಕಟ್ಟಿನ ಯಜಮಾನತ್ವದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದರು.
ಸುಮಾರು ಮೂರು ಕೋಟಿ ವೆಚ್ಚದಲ್ಲಿ ಪುನರ್ರಚನೆಗೊಂಡು, ಬ್ರಹ್ಮಕಲಶೋತ್ಸವ ಮತ್ತು ಮಾ.30ರಿಂದ ಏ.1ರವರೆಗೆ ನೇಮೋತ್ಸವ ನಡೆಯಲಿದೆ. ಮಾ.28 ರಂದು ಬೆಳಿಗ್ಗೆ 11 ಗಂಟೆಗೆ ಕ್ಷೇತ್ರಕ್ಕೆ ಭವ್ಯ ಮೆರವಣಿಗೆ ಮೂಲಕ ಹೊರೆಕಾಣಿಕೆ ಸಮರ್ಪಣೆಯಾಗಲಿದೆ ಎಂದರು.
ಅನಾದಿಕಾಲದಿಂದಲೂ ಪಾಳಿಬಿದ್ದಿರುವ ದೈವಸ್ಥಾನವನ್ನು ಕೇರಳದ ಪ್ರಸಿದ್ಧ ದೈವಜ್ಞರಾದ ಶಶಿಧರನ್ ಮಾಂಗಡ್ ಉಪಸ್ಥಿತಿಯಲ್ಲಿ ಅಷ್ಟಮಂಗಲ ಪ್ರಶ್ನೆ ಇಟ್ಟು ಚಿಂತನೆ ನಡೆಸಿದಾಗ, ಈ ಕ್ಷೇತ್ರವು ಇತಿಹಾಸಪ್ರಸಿದ್ಧ ಕ್ಷೇತ್ರವಾಗಿದ್ದು, ಸುಮಾರು 532 ವರ್ಷಗಳಿಂದ ಜೀರ್ಣೋದ್ಧಾರವಾಗದೆ ಉಳಿದಿದೆ ಎಂದು ತಿಳಿದುಬಂದಿದೆ. ಕದಂಬರ ಕಾಲದಲ್ಲಿ ಮಯೂರವರ್ಮ ಆಳ್ವಿಕೆ ಸಂದರ್ಭ ಕಾರಿಂಜ ದೇವಸ್ಥಾನದ ದಕ್ಷಿಣ ಭಾಗದಲ್ಲಿ ದುರ್ಗೆ ಅವತಾರವಾಗಿ ನೆಲೆಯಾಗಿದ್ದು, ನಂತರ ಗರ್ಭಗುಡಿಯಲ್ಲಿ ಉಳ್ಳಾಲ್ತಿಯಾಗಿ ನೆಲೆನಿಂತು ಆರಾಧನೆ ನಡೆದುಕೊಂಡು ಬಂದಿತ್ತು. ಉಳ್ಳಾಕುಲು ಹಾಘೂ ಪರಿವಾರ ದೈವಗಳ ಆರಾಧನೆ ನಡೆದುಕೊಂಡು ಬಂದಿತ್ತು ಎಂದು ತಿಳಿದುಬಂದಿದೆ. ನಂತರ ಜೈನಬಲ್ಲಾಳರ ಆಗಮನವಾಗಿ ಅವರ ಆಡಳಿತದಲ್ಲಿ ಕೊಡಮಣಿತ್ತಾಯ, ಮಹಿಷಂದಾಯ, ಓರ್ಮುಲ್ತಾಯ, ರಕ್ತೇಶ್ವರಿ, ಕಲ್ಕುಡ, ಕಲ್ಲುರ್ಟಿ ಮತ್ತು ಗುಳಿಗ ದೈವಗಳನ್ನು ಆರಾಧಿಸಿಕೊಂಡು ಬಂದರು ಎಂದು ತಿಳಿದುಬಂತು. ಈ ಸ್ಥಳದಲ್ಲಿ ಉಳ್ಳಾಕ್ಲು ದೈವಗಳಾದ ಕಿನ್ನಿಮಾಣಿ, ಪೂಮಾಣಿ ದೈವಗಳು ನೆಲೆನಿಂತು ಮಾಡಗಳಲ್ಲಿ ನೆಲೆಯಾದರು. ಈ ಸಾನಿಧ್ಯವು ಕಾರಿಂಜೇಶ್ವರ ಸೀಮೆಯ ಪ್ರದೇಶಕ್ಕೆ ಒಳಗಾಗಿ ಮುಲ್ಕಾಜೆಮಾಡ ಹೆಸರಿಂದ ಪ್ರಸಿದ್ಧಿಯಾಯಿತು. ಇದೀಗ ಊರಿನ ಗ್ರಾಮಸ್ಥರು ಸೇರಿ ಉಳ್ಳಾಲ್ತಿ ಉಳ್ಳಾಕುಲು ಜೀರ್ಣೋದ್ಧಾರ ಸಮಿತಿ ಹಾಗೂ ಸೇವಾ ಟ್ರಸ್ಟ್ ಸಮಿತಿ ಮಾಡಿ ಕೆಲಸ ಕಾರ್ಯ ನಡೆಸುತ್ತಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಲ್ಲೋಡಿಗುತ್ತು ಪದ್ಮಶೇಖರ ಜೈನ್, ಪ್ರಧಾನ ಕಾರ್ಯದರ್ಶಿ ದಯಾನಂದ ಶೆಟ್ಟಿ ಅಮೈ, ಬಂಟ್ವಾಳ ನಗರ ಯೋಜನ ಪ್ರಾಧಿಕಾರ ಅಧ್ಯಕ್ಷ ಬೇಬಿ ಕುಂದರ್, ಬ್ರಹ್ಮಕಲಶೋತ್ಸವ ಸಮಿತಿ ಸಂಚಾಲಕ ಸಂಜೀವ ಪೂಜಾರಿ ಗುರುಕೃಪಾ, ಪ್ರಮುಖರಾದ ಮೋನಪ್ಪ ಪೂಜಾರಿ, ನಾರಾಯಣ ಮಯ್ಯ, ಸದಾಶಿವ ಪೂಜಾರಿ, ಶಿವರಾಮ ಶೆಟ್ಟಿ, ಸುರೇಶ್ ಆರಿಗ, ಬಾಲಕೃಷ್ಣ ಅಂಚನ್ ಸಹಿತ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಮನುಷ್ಯ ಮನುಷ್ಯನ ನಡುವಿನ ವಿಶ್ವಾಸವೃದ್ಧಿಗೆ ಇಫ್ತಾರ್ ಕೂಟ: ರಮಾನಾಥ ರೈ (more…)