ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಒಣ ತ್ಯಾಜ್ಯದ ಸಮಸ್ಯೆ ನಿವಾರಣೆಗೆ ಈಗಾಗಲೇ ಹೆಚ್ಚಿನ ಗ್ರಾಮ ಪಂಚಾಯತ್‌ಗಳಲ್ಲಿ ಘನ ತ್ಯಾಜ್ಯ ಘಟಕ ಕಾರ್ಯನಿರ್ವಹಿಸುತ್ತಿದ್ದು, ಇಲ್ಲಿ ಸಂಗ್ರಹವಾದ ಒಣ ತ್ಯಾಜ್ಯದ ಸೂಕ್ತ ವಿಲೇವಾರಿಯನ್ನು ಸಮಗ್ರ ಘನ ತ್ಯಾಜ್ಯ ನಿರ್ವಹಣಾ ಕೇಂದ್ರದ ಮೂಲಕ ಮಾಡಲಾಗುತ್ತಿದೆ ಎಂದು ದ.ಕ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಆನಂದ್ ಕೆ. ಹೇಳಿದರು.
ಬಂಟ್ವಾಳ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಬಂಟ್ವಾಳ ಹಾಗೂ ಉಳ್ಳಾಲ, ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆಯಡಿ ತರಬೇತಿ ಕಾರ್ಯಾಗಾರ ಹಾಗೂ ನರಿಕೊಂಬು ಘನತ್ಯಾಜ್ಯ ನಿರ್ವಹಣಾ ಘಟಕದ ಕಾರ್ಯಾಚರಣೆ ಮತ್ತು ನಿರ್ವಹಣೆಯ ಬಗ್ಗೆ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.
ನರಿಕೊಂಬು ಘಟಕಕ್ಕೆ ಪ್ರತಿದಿನ 7 ಮೆಟ್ರಿಕ್ ಟನ್ ತ್ಯಾಜ್ಯದ ಅವಶ್ಯಕತೆ ಇದ್ದು, ಪ್ರಸ್ತುತ 2.5 ಮೆಟ್ರಿಕ್ ಟನ್ ತ್ಯಾಜ್ಯವಷ್ಟೇ ಸಂಗ್ರಹವಾಗುತ್ತಿದೆ. 4.5 ಮೆಟ್ರಿಕ್ ಟನ್ ತ್ಯಾಜ್ಯ ಸಂಗ್ರಹವನ್ನು ಗ್ರಾಮ ಪಂಚಾಯತ್ ವ್ಯಾಪ್ತಿಗಳಲ್ಲಿ ಸಂಗ್ರಹಿಸಲು ಕ್ರಮವಹಿಸಬೇಕು. ಸಮಗ್ರ ಘನ ತ್ಯಾಜ್ಯ ನಿರ್ವಹಣಾ ಕೇಂದ್ರ ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್ ಸೇರಿದಂತೆ ಇತರೆ ಅನುದಾನದಡಿ ನಿರ್ಮಾಣವಾಗಿರುತ್ತದೆ. ಆದ್ದರಿಂದ ಇದರ ಕಾರ್ಯನಿರ್ವಹಣೆ ಜವಾಬ್ದಾರಿಯ ಜೊತೆಗೆ ಎಲ್ಲರ ಪಾಲ್ಗೊಳ್ಳುವಿಕೆ ಮುಖ್ಯವಾಗಿದೆ. ಸಮಗ್ರ ಘನ ತ್ಯಾಜ್ಯ ನಿರ್ವಹಣಾ ಕೇಂದ್ರ ಎಂಬುದು ನಿರಂತರ ಕಾರ್ಯನಿರ್ವಹಿಸುವಂತಾಗಲು ಗ್ರಾಮ ಪಂಚಾಯತ್ ಸಹಕಾರ ಮುಖ್ಯ. ಪ್ರತಿಯೊಬ್ಬರ ಆಸ್ತಿಯಂತೆ ಭಾವಿಸಿ ಸಹಕಾರ ನೀಡಬೇಕು. ಸಮಗ್ರ ಘನ ತ್ಯಾಜ್ಯ ನಿರ್ವಹಣಾ ಕೇಂದ್ರ ಕಾರ್ಯನಿರ್ವಹಣೆ ಕುರಿತು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆಯುವಂತೆ ಸಲಹೆ ನೀಡಿದರು. ಮಾಣಿ, ಕುರ್ನಾಡು, ಕೆದಿಲ, ಕೇಪು, ಅಳಿಕೆ, ನರಿಕೊಂಬು ಗ್ರಾಮ ಪಂಚಾಯತ್ ಅಧ್ಯಕ್ಷರು ಗ್ರಾಮ ಪಂಚಾಯತ್ ವ್ಯಾಪ್ತಿಯ ತ್ಯಾಜ್ಯ ಸಂಗ್ರಹದ ಕುರಿತು ಅಭಿಪ್ರಾಯ ತಿಳಿಸಿದರು.
ಬಂಟ್ವಾಳ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸಚಿನ್ ಕುಮಾರ್ ಸ್ವಾಗತಿಸಿದರು. ಉಳ್ಳಾಲ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಗುರುದತ್ತ್, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯನಿರ್ವಾಹಕ ಇಂಜಿನಿಯರ್ ಜಿ.ಎಸ್.ನಟೇಶ್ ಕುಮಾರ್, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಜಗದೀಶ್, ದ.ಕ ಜಿಪಂ ಎಸ್‌ಬಿಎಂ ಜಿಲ್ಲಾ ಸಮಾಲೋಚಕರಾದ ನವೀನ್, ಪವನ್, ಎಂಆರ್‌ಎಫ್ ಆಪರೇಟರ್ ಸಚಿನ್ ಶೆಟ್ಟಿ, ಬಂಟ್ವಾಳ ತಾಲೂಕಿನ 39 ಗ್ರಾಪಂ ಮತ್ತು ಉಳ್ಳಾಲ ತಾಲೂಕಿನ 17 ಗ್ರಾಪಂ ಅಧ್ಯಕ್ಷರು, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಎಸ್‌ಬಿಎಂ ತಾಲೂಕು ವಿಷಯ ನಿರ್ವಾಹಕರು, ತಾಲೂಕು ಐಇಸಿ ಸಂಯೋಜಕರು ಇತರರು ಭಾಗವಹಿಸಿದ್ದರು.
ನರಿಕೊಂಬು ಎಂ.ಆರ್.ಎಫ್. ಘಟಕಕ್ಕೆ ಭೇಟಿ
ನರಿಕೊಂಬು ಗ್ರಾಮ ಪಂಚಾಯತ್ ವ್ಯಾಪ್ತಿಯ ಶಂಭೂರುವಿನಲ್ಲಿರುವ ಸಮಗ್ರ ಘನ ತ್ಯಾಜ್ಯ ನಿರ್ವಹಣಾ ಕೇಂದ್ರಕ್ಕೆ ಮಾನ್ಯ ದ.ಕ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ.ಆನಂದ್ ಕೆ. ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಂಟ್ವಾಳ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸಚಿನ್ ಕುಮಾರ್, ಉಳ್ಳಾಲ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಗುರುದತ್ತ್, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯನಿರ್ವಾಹಕ ಇಂಜಿನಿಯರ್ ಜಿ.ಎಸ್.ನಟೇಶ್ ಕುಮಾರ್, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಜಗದೀಶ್, ದ.ಕ ಜಿಪಂ ಎಸ್‌ಬಿಎಂ ಜಿಲ್ಲಾ ಸಮಾಲೋಚಕರಾದ ನವೀನ್, ಪವನ್, ನರಿಕೊಂಬು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸಂತೋಷ್ ಜತೆಗಿದ್ದರು.
ಮನುಷ್ಯ ಮನುಷ್ಯನ ನಡುವಿನ ವಿಶ್ವಾಸವೃದ್ಧಿಗೆ ಇಫ್ತಾರ್ ಕೂಟ: ರಮಾನಾಥ ರೈ (more…)