ಭಾರತೀಯ ಜನತಾ ಪಾರ್ಟಿಯ ಬಂಟ್ವಾಳ ಮಂಡಲ ಸಹಕಾರಿ ಸಮಾವೇಶ ಭಾನುವಾರ ಬಂಟ್ಚಾಳದ ಸ್ಪರ್ಶ ಕಲಾ ಮಂದಿರದಲ್ಲಿ ನಡೆಯಿತು.ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಉದ್ಘಾಟಿಸಿ ಚುನಾವಣೆಯನ್ನು ಸಹಕಾರಿ ಪ್ರಕೋಷ್ಠದ ನಿರ್ದೇಶನದಂತೆ ಯಶಸ್ವಿಯಾಗಿ ನಿಭಾಯಿಸಲಾಗಿದ್ದು, ಜನರಿಗೆ ಯಾರು ಬೇಕೋ ಅವರನ್ನೇ ಆಯ್ಕೆ ಮಾಡಿ ಕಣಕ್ಕಿಳಿಸಲಾಗಿದೆ. ಚುನಾವಣೆಯ ಬಳಿಕ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ವೇಳೆಯೂ ಅದೇ ಮಾನದಂಡ ಬಳಸಲಾಗಿತ್ತು. ಸಹಕಾರಿ ಕ್ಷೇತ್ರದಲ್ಲಿ ಬಿಜೆಪಿ ಮುನ್ನಡೆಯನ್ನು ಕಾಯ್ದುಕೊಂಡು ಯಶಸ್ವಿಯಾಗಿದ್ದು, ಇದಕ್ಕೆ ಎಲ್ಲರ ಒಗ್ಗಟ್ಟು ಪ್ರಮುಖ ಕಾರಣವಾಗಿದೆ ಎಂದರು.
ದಕ್ಷಿಣ ಕನ್ನಡ ಸಂಸದ ಕ್ಯಾ.ಬ್ರಿಜೇಶ್ ಚೌಟ ಮಾತನಾಡಿ ರಾಷ್ಟ್ರನಿರ್ಮಾಣದಲ್ಲಿ ಸಹಕಾರಿ ಕ್ಷೇತ್ರಕ್ಕೆ ಪ್ರಮುಖ ಪಾತ್ರವಿದೆ. ದಕ್ಷಿಣ ಕನ್ನಡ ಸಹಕಾರ ಕ್ಷೇತ್ರ ಅಧ್ಯಯನಯೋಗ್ಯ. ನಿರ್ದಿಷ್ಟ ಗುರಿಯೊಂದಿಗೆ ನಿಜವಾದ ಅರ್ಥದಲ್ಲಿ ಫಲಾನುಭವಿಗಳಿಗೆ ತಲುಪಿಸುವ ಕೆಲಸವನ್ನು ಸಹಕಾರಿಗಳು ಮಾಡಬೇಕು ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ, ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ಸಹಕಾರಿ ಸಮಾವೇಶ ಮಾಡಲಾಗುತ್ತದೆ. ಬಳಿಕ ಕೇಂದ್ರ ಸಚಿವ ಅಮಿತ್ ಶಾ ಅವರು ಜಿಲ್ಲೆಗೆ ಬಂದಾಗ ಜಿಲ್ಲಾ ಮಟ್ಟದ ಸಮಾವೇಶ ಮಾಡಲಾಗುತ್ತದೆ. ಬಿಜೆಪಿಯ ಗೆಲುವಿನ ಓಟವನ್ನು ಬಲಾಢ್ಯ ರಾಜಕಾರಣಿಗಳು ವಿರೋಧ ಪಕ್ಷದಲ್ಲಿದ್ದರೂ ನಿಲ್ಲಿಸಲು ಸಾಧ್ಯವಿಲ್ಲ ಎಂದರು. ಸಹಕಾರ ಸಂಸ್ಥೆಗಳಲ್ಲಿ ಗೆದ್ದವರೂ ನಮ್ಮವರೇ, ಸೋತವರೂ ನಮ್ಮವರೇ ಆಗಿದ್ದಾರೆ ಎಂದರು.
ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ಮಾಜಿ ಶಾಸಕರಾದ ಎ.ರುಕ್ಮಯ ಪೂಜಾರಿ, ಕೆ.ಪದ್ಮನಾಭ ಕೊಟ್ಟಾರಿ, ಜಿಲ್ಲಾ ಉಪಾಧ್ಯಕ್ಷೆ ಪೂಜಾ ಪೈ, ಕಾರ್ಯದರ್ಶಿಗಳಾದ ಪ್ರೇಮಾನಂದ ಶೆಟ್ಟಿ, ದೇವಪ್ಪ ಪೂಜಾರಿ, ದಿನೇಶ್ ಅಮ್ಟೂರು, ಜಿಲ್ಲಾ ಸಹಕಾರಿ ಸಂಚಾಲಕ ರಾಜಾರಾಮ ಭಟ್ ಟಿ.ಜಿ ಉಪಸ್ಥಿತರಿದ್ದರು. ಬಿಜೆಪಿ ಕ್ಷೇತ್ರಾಧ್ಯಕ್ಷ ಆರ್.ಚೆನ್ನಪ್ಪ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಸಹಕಾರಿ ರತ್ನ ರವೀಂದ್ರ ಕಂಬಳಿ ಅವರನ್ನು ಗೌರವಿಸಲಾಯಿತು. ಗೆಲುವಿನ ಸಾಧನೆಗಾಗಿ ಜಯರಾಮ ರೈ ಅವರನ್ನು ಅಭಿನಂದಿಸಲಾಯಿತು. ಸಹಕಾರಿ ಸಂಘಗಳ ಅಧ್ಯಕ್ಷ, ನಿರ್ದೇಶಕರನ್ನು ಗುರುತಿಸಿ, ಗೌರವಿಸಲಾಯಿತು. ಕ್ಯಾಂಪ್ಕೊ ಮಾಜಿ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ಮಾರ್ಗದರ್ಶನ ನೀಡಿದರು. ಬಂಟ್ವಾಳ ಮಂಡಲ ಸಹಕಾರಿ ಪ್ರಕೋಷ್ಠ ಸಂಚಾಲಕ ಜಯರಾಮ ರೈ ಸ್ವಾಗತಿಸಿದರು. ಮಾತೇಶ್ ಭಂಡಾರಿ ಕಾರ್ಯಕ್ರಮ ನಿರ್ವಹಿಸಿದರು. ಸಹಕಾರಿಗಳ ಪಟ್ಟಿಯನ್ನು ಬಿಜೆಪಿ ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಸುದರ್ಶನ ಬಜ ವಾಚಿಸಿದರು. ಜಯಶಂಕರ ಬಾಸ್ರಿತ್ತಾಯ ವಂದಿಸಿದರು