ಕವರ್ ಸ್ಟೋರಿ

ಪ್ರತಿ ಕ್ಲಾಸಿಗೂ ಸ್ಮಾರ್ಟ್ ಟಿವಿ: ಇದು ಮಜಿ ಸರಕಾರಿ ಶಾಲೆಯ ವಿಶೇಷ

ಜಾಹೀರಾತು

ವಿಟ್ಲದಿಂದ ಕಲ್ಲಡ್ಕಕ್ಕೆ ತೆರಳುವ ರಸ್ತೆ ಬದಿಯಲ್ಲಿಯೇ ವೀರಕಂಭ ಗ್ರಾಮದ ಮಜಿ ಎಂಬಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಜಾಸ್ತಿಯಾಗಿರುವುದು ಒಂದು ವಿಶೇಷವಾದರೆ, ಪ್ರತಿ ತರಗತಿಗೂ ಸ್ಮಾರ್ಟ್ ಆಗಿರುವುದು ಹೆಗ್ಗಳಿಕೆ. ಎಲ್.ಕೆ.ಜಿ., ಯು.ಕೆ.ಜಿಯಿಂದ ತೊಡಗಿ ಎಂಟನೇ ತರಗತಿಯವರೆಗೆ ಇಲ್ಲಿ ಶಿಕ್ಷಣ ನೀಡಲಾಗುತ್ತಿದ್ದು, ಎಲ್ಲ ಕ್ಲಾಸುಗಳ ಗೋಡೆಯಲ್ಲಿ ಸ್ಮಾರ್ಟ್ ಟಿ.ವಿ. ಅಳವಡಿಸಲಾಗಿದೆ. ಈಗ ಮಕ್ಕಳು ಇಲ್ಲಿ ಪಾಠವನ್ನು ದೃಶ್ಯರೂಪದಲ್ಲೇ ಕಲಿಯುವ ಅವಕಾಶ ಪಡೆದಿದ್ದಾರೆ. ಬಂಟ್ವಾಳ ತಾಲೂಕಿನ ಸರಕಾರಿ ಶಾಲೆಯೊಂದರಲ್ಲಿ ಎಲ್.ಕೆ.ಜಿ.ಯಿಂದ ಎಂಟನೇ ತರಗತಿವರೆಗೆ ಪ್ರತಿಯೊಂದು ಕ್ಲಾಸ್ ನಲ್ಲೂ ಸ್ಮಾರ್ಟ್ ಟಿ.ವಿ. ಹೊಂದುವ ಮೂಲಕ ತಾನು ಯಾವುದಕ್ಕೂ ಕಮ್ಮಿ ಇಲ್ಲ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಶಾಲಾ ಹಳೆ ವಿದ್ಯಾರ್ಥಿ, ಉದ್ಯಮಿ, ಸಿವಿಲ್ ಇಂಜಿನಿಯರ್ ಸಂತೋಷ್ ಶೆಟ್ಟಿ ಅರೆಬೆಟ್ಟು ಮಾಲೀಕತ್ವದ ಮಾತಾ ಡೆವಲಪರ್ಸ್ ಶಾಲೆಯನ್ನು 2018ರಲ್ಲಿ ದತ್ತು ಸ್ವೀಕರಿಸಿದ ಬಳಿಕ ಶಾಲೆ ಸಾಕಷ್ಟು ಪ್ರಗತಿಯಾಯಿತು. ಶಾಲಾಭಿವೃದ್ಧಿ ಸಮಿತಿ ಹಾಗೂ ಶಿಕ್ಷಕ ವೃಂದ ಇದಕ್ಕೆ ಪೂರಕವಾಗಿ ಕೆಲಸ ಮಾಡಿದ್ದಲ್ಲದೆ, ಸಶಕ್ತವಾದ ಹಳೇ ವಿದ್ಯಾರ್ಥಿಗಳ ಸಂಘ ಗಟ್ಟಿಯಾಗಿ ಶಾಲೆಯೊಂದಿಗೆ ನಿಂತುಕೊಂಡಿದೆ. ಹೀಗಾಗಿ ಇಂದು ಶಾಲೆಯಲ್ಲಿ ಎರಡಂಕಿಯಲ್ಲಿದ್ದ ಮಕ್ಕಳ ಸಂಖ್ಯೆ 200 ದಾಟಿದೆ. ಪರಿಸರ ಮಿತ್ರ ಶಾಲೆ ಎಂದು ಎರಡೆರಡು ಬಾರಿ ಪ್ರಶಸ್ತಿ ಪಡೆದ ಶಾಲೆಯಲ್ಲಿ ಕೃಷಿಗೆ ಪೂರಕವಾದ ಚಟುವಟಿಕೆಗಳು ನಡೆಯುತ್ತಿವೆ. ಆರಂಭದಲ್ಲಿ ಬಂಟ್ವಾಳ ತಾಲೂಕು ಫೊಟೋಗ್ರಾಫರ್‍ಸ್ ಎಸೋಸಿಯೇಶನ್ ಸದಸ್ಯ, ಇಲ್ಲಿನ ಹಳೇ ವಿದ್ಯಾರ್ಥಿ ಚಿನ್ನ ಮೈರ ಶಾಲೆಯ ಬಗ್ಗೆ ಪ್ರೀತಿಯಿಂದ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿರುವುದನ್ನು ಗಮನಿಸಿ ತನ್ನ ಫೊಟೋಗ್ರಾಫರ್ಸ್ ಸಂಘದ ಗಮನ ಸೆಳೆದಿದ್ದರು. ಹಲವು ಕಾರ್ಯಕ್ರಮಗಳನ್ನು ಫೊಟೋಗ್ರಾಫ್ಸ್ ಸಂಘ ಈ ಶಾಲೆಗೆ ನೀಡುತ್ತಾ ಬಂತು. ಬಳಿಕ ಲಾರ್ಸನ್ ಆಂಡ್ ಟಾರ್ಬೋ (ಎಲ್.ಆಂಡ್ ಟಿ) ಕಂಪನಿಯವರ ಸಾಮಾಜಿಕ ಸೇವಾ ವಿಭಾಗದ ವತಿಯಿಂದ ಸೌರವಿದ್ಯುತ್ ಒದಗಿತು. ವಿವಿಧ ದಾನಿಗಳು ಶಾಲಾ ಅಭಿವೃದ್ಧಿಗೆ ನೆರವಾದರು. ಎಂ.ಆರ್.ಪಿ.ಎಲ್. ನಿಂದ ಹತ್ತು ಕೊಠಡಿ ನಿರ್ಮಾಣವಾಗಿದೆ. ಲಯನ್ಸ್ ಕ್ಲಬ್, ಜೇಸಿ, ರೋಟರಿ ಸಂಸ್ಥೆಗಳು ಸಾಥ್ ನೀಡಿದವು.

ಈ ಕುರಿತು ಮಾತನಾಡಿದ ಶಾಲಾ ಶಿಕ್ಷಕಿ ಸಂಗೀತಾ ಶರ್ಮಾ, ಶಾಲಾ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ದೃಷ್ಟಿಯಿಂದ ಸ್ಮಾರ್ಟ್ ಕ್ಲಾಸ್ ಪ್ರಯೋಜನಕಾರಿ. ಎಲ್.ಕೆ.ಜಿ.ಯಿಂದ ಎಂಟನೇ ತರಗತಿವರೆಗೆ ಪ್ರತಿಯೊಂದು ಕ್ಲಾಸಿನಲ್ಲೂ ಸ್ಮಾರ್ಟ್ ಟಿ.ವಿ. ಇದ್ದು, ಅಧ್ಯಾಪಕ ವೃಂದ ಪವರ್ ಪಾಯಿಂಟ್ ಪ್ರೆಸೆಂಟೇಶನ್ ಮೂಲಕ ಹಾಗೂ ನೇರವಾಗಿ ಇಂಟರ್ನೆಟ್ ಮೂಲಕ ಶಾಲಾ ಪಾಠಗಳಲ್ಲಿರುವ ವಿಷಯಗಳನ್ನು ದೃಶ್ಯರೂಪದಲ್ಲಿ ಟಿ.ವಿ.ಯಲ್ಲಿ ತೋರಿಸುತ್ತೇವೆ. ಪ್ರತಿಯೊಂದು ಮಗುವೂ ಇದರ ಪ್ರಯೋಜನ ಪಡೆಯಲು ಅವಕಾಶವಿರುತ್ತದೆ. ಮಕ್ಕಳ ಕಲಿಕೆಗೆ ಪೂರಕವಾದ ವಸ್ತು, ವಿಷಯಗಳನ್ನು ಆಯ್ದುಕೊಂಡು ಅಧ್ಯಾಪಕರು ತರಗತಿಯಲ್ಲಿ ಈ ವ್ಯವಸ್ಥೆಯ ಸದುಪಯೋಗಪಡೆದುಕೊಳ್ಳುತ್ತಾರೆ ಎಂದರು.

ಎಲ್.ಕೆ.ಜಿ. ಯು.ಕೆ.ಜಿ ಸೇರಿ ಶಾಲೆಯಲ್ಲಿ ಒಟ್ಟು 268 ಮಕ್ಕಳಿದ್ದು, 1ರಿಂದ 8ನೇ ತರಗತಿವರೆಗೆ 206 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಎರಡನೇ ಕ್ಲಾಸಿನಲ್ಲಿ ಎರಡು ವಿಭಾಗಗಳಿದ್ದು, ಒಟ್ಟು 11 ತರಗತಿಗಳಿವೆ. ಎಲ್ಲ ತರಗತಿಯಲ್ಲೂ ಸ್ಮಾರ್ಟ್ ಟಿ.ವಿ. ಅಳವಡಿಸಲಾಗಿದ್ದು, ಮಕ್ಕಳ ಕಲಿಕೆಗೆ ಪೂರಕವಾದ ವಾತಾವರಣ ಕಲ್ಪಿಸಲಾಗಿದೆ.

ಶಾಲಾ ಮಕ್ಕಳ ಕಲಿಕೆಗೆ ಅನುಕೂಲವಾಗುವಂತೆ ಸ್ಮಾರ್ಟ್ ಟಿ.ವಿ.ಗಳು ಬಳಕೆಯಾಗುತ್ತವೆ. ದಾನಿಗಳ ನೆರವು ಇದಕ್ಕೆ ಪೂರಕವಾಗಿ ದೊರಕಿದೆ. ಮಕ್ಕಳ ಜ್ಞಾನವೃದ್ಧಿಗೆ ಇದು ಸಹಕಾರಿಯಾಗಿದೆ. -ಬೆನೆಡಿಕ್ಟ ಮೆಂಡೋನ್ಸಾ, ಮುಖ್ಯ ಶಿಕ್ಷಕರು, ಮಜಿ ಶಾಲೆ.

 

 

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts

ಮಂಗಳೂರು ಕಡಲ ತೀರ ʼಕಡಲ ಪವನ ಶಕ್ತಿ ಉತ್ಪಾದನಾ ವಲಯʼವಾಗಿ ಅಭಿವೃದ್ಧಿಪಡಿಸಲು ಕೇಂದ್ರಕ್ಕೆ ಮನವಿ

ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)

7 hours ago