ಇಲ್ಲಿ ಕಳೆದ ಎರಡು ವರ್ಷಗಳ ಹಿಂದೆ ಹಲವು ದಾನಿಗಳ ನೆರವಿನಿಂದ ಕಂಪ್ಯೂಟರ್ ಅನ್ನು ಕೊಡುಗೆಯಾಗಿ ಪಡೆದು ಮಕ್ಕಳಿಗೆ ಪ್ರಾಯೋಗಿಕವಾಗಿ ಕಂಪ್ಯೂಟರ್ ಶಿಕ್ಷಣ ಆರಂಭಗೊಂಡಿತ್ತು. ಶಾಲಾ ಪೋಷಕರು ತರಬೇತಿಯನ್ನು ನೀಡಲು ಮುಂದೆ ಬಂದದ್ದು ಮತ್ತಷ್ಟು ಬಲ ನೀಡಿತು. ಇದೀಗ ಕಳೆದ ವರ್ಷ ಶಾಲೆಯ ಎಲ್ಲ ಮಕ್ಕಳೂ ಕಂಪ್ಯೂಟರ್ ತರಬೇತಿಯನ್ನು ಪಡೆದಿದ್ದು, ಉತ್ತಮ ಸಾಧನೆ ತೋರಿದ್ದಾರೆ. ಇದರ ಜೊತೆಗೆ ಪ್ರಾಜೆಕ್ಟರ್, ಸ್ಕ್ರೀನ್ ಹಾಗು ಸ್ಮಾರ್ಟ್ ಟಿವಿಯೂ ಇದ್ದು, ಡಿಜಿಟಲ್ ಮಾಧ್ಯಮ ಮೂಲಕ ಹೆಚ್ಚಿನ ಅನುಭವಗಳನ್ನು ವಿದ್ಯಾರ್ಥಿಗಳು ಪಡೆದುಕೊಳ್ಳುತ್ತಿದ್ದಾರೆ.
ಎಸ್.ಡಿ.ಎಂ.ಸಿ, ಹಿರಿಯ ವಿದ್ಯಾರ್ಥಿಗಳ ಸಂಘದ ಮುತುವರ್ಜಿಯಲ್ಲಿ ಶಾಲೆ ಪ್ರಗತಿಯತ್ತ ಸಾಗುತ್ತಿದೆ. ಸುಸಜ್ಜಿತವಾದ ತರಗತಿ ಕೊಠಡಿ, ಸ್ಕೌಟ್ಸ್ ಮತ್ತು ಗೈಡ್ಸ್ ಘಟಕ, ದಾನಿಗಳ ನೆರವಿನಿಂದ ಶುದ್ಧ ಕುಡಿಯುವ ನೀರಿನ ಘಟಕ, ಸ್ಪೋಕನ್ ಇಂಗ್ಲೀಷ್ ತರಬೇತಿ, ಸರಕಾರ ನೀಡುವ ಉಚಿತ ಪಠ್ಯಪುಸ್ತಕ, ಮೊಟ್ಟೆ, ಹಾಲು, ಬಿಸಿಯೂಟ, ಸಮವಸ್ತ್ರದ ಜೊತೆಗೆ ಐಡಿ ಕಾರ್ಡ್, ಬೆಲ್ಟ್, ಪುಸ್ತಕ ಹಾಗೂ ಮಕ್ಕಳ ಪಠ್ಯೇತರ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ವಿವಿಧ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿಯನ್ನು ನೀಡಲಾಗುತ್ತದೆ. ಶಾಲೆಯಲ್ಲಿ ಸಮರ್ಥ ಹಾಗು ಅನುಭವಿ ಶಿಕ್ಷಕರ ತಂಡವಿದ್ದು, ಎಲ್.ಕೆ.ಜಿ. ಹಾಗೂ ಗೌರವ ಶಿಕ್ಷಕರ ವೇತನವನ್ನು ದಾನಿಗಳ ನೆರವಿನಿಂದ ಭರಿಸಲಾಗುತ್ತಿದೆ. ಪ್ರಸ್ತುತ 112 ವಿದ್ಯಾರ್ಥಿಗಳು ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.