ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದ ಪದ್ಯಾಣ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀಕ್ಷೇತ್ರದ ಜೀರ್ಣೋದ್ಧಾರದ ಪ್ರಯುಕ್ತ ಬ್ರಹ್ಮಶ್ರೀ ಕುಂಟುಕುಡೇಲು ರಘುರಾಮ ತಂತ್ರಿಗಳ ನೇತೃತ್ವದಲ್ಲಿ ಅನುಜ್ಞಾಕಲಶ ನಡೆಯಿತು.
ಮಹಾಲಿಂಗೇಶ್ವರ ವಿಶ್ವದ ಆದಿಗುರು. ಶಿವನು ಎಲ್ಲವೂ ಆಗಿದ್ದು ಅವನದ್ದು ಏನೂ ಇಲ್ಲದಂತೆ ಇದ್ದಾನೆ. ಶಿವನ ಅರ್ಧಭಾಗ ವಿಷ್ಣುವಿನಲ್ಲಿ ಲೀನವಾಗಿದ್ದರೆ, ಇನ್ನರ್ಧ ಭಾಗ ಪಾರ್ವತಿಯಲ್ಲಿ ಲೀನವಾಗಿದೆ. ಆದ್ಯಂತ ರಹಿತ, ವೈರಾಗ್ಯಮೂರ್ತಿಯಾದ ಶಿವನ ಸೇವೆ ಮಂಗಳಕರ. ನಮ್ಮೊಳಗೆ ಶಿವನಿದ್ದಾಗ ಲೋಕವೇ ಮಂಗಳಕರವಾಗುತ್ತದೆ ಎಂದು ಒಡಿಯೂರಿನ ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಶ್ರೀಗಳು ಹೇಳಿದರು. ಅವರು ಅನುಜ್ಞಾಕಲಶದ ಅಂಗವಾಗಿ ನಡೆದ ಧರ್ಮಸಭೆಯಲ್ಲಿ ವಿಜ್ಞಾಪನ ಪತ್ರವನ್ನು ಬಿಡುಗಡೆಗೊಳಿಸಿ ಆಶೀರ್ವಚನ ನೀಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ನಿವೃತ್ತ ಐ.ಎಎಸ್ ಅಧಿಕಾರಿ, ಕರ್ನಾಟಕ ಸರಕಾರದ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾದ ಡಾ. ಟಿ. ಶ್ಯಾಮ ಭಟ್ ’ಕಾರ್ಯಕರ್ತರ ತೊಡಗುವಿಕೆ, ಸಾಮೂಹಿಕ, ಸಂಘಟಿತ ಪ್ರಯತ್ನದೊಂದಿಗೆ ಎಲ್ಲರ ಸಹಕಾರದಿಂದ ಜೀಣೋದ್ಧಾರ ಕಾರ್ಯ ಶೀಘ್ರವಾಗಿ ಕೈಗೂಡಲು ನಾವೆಲ್ಲರೂ ದೃಢಸಂಕಲ್ಪ ಮಾಡಬೇಕಿದೆ’ ಎಂದು ಹೇಳಿದರು.
ಮುಖ್ಯ ಅತಿಥಿ ಮಂಗಳೂರಿನ ಹಿರಿಯ ವಕೀಲ ಎಸ್.ಎಂ ಭಟ್ ಅವರು ಮಾತನಾಡಿ, ಶಿವಾಲಯದಲ್ಲಿ ನಾವು ಶುದ್ಧ ಮನಸ್ಸಿನಿಂದ ಸಮರ್ಪಣಾ ಭಾವದಲ್ಲಿ ಸೇವೆ ಸಲ್ಲಿಸಿದಲ್ಲಿ ಸಕಲ ಪಾಪಗಳೂ ಮಂಜುಗಡ್ಡೆ ಕರಗಿದಂತೆ ಕರಗುವುದು ಎಂದು ಹೇಳಿದರು. ನೇಪಾಳದ ಪಶುಪತಿನಾಥ ದೇವಸ್ಥಾನದ ನಿವೃತ್ತ ಅರ್ಚಕ, ಪದ್ಯಾಣ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರಾದ ಪದ್ಯಾಣ ರಘುರಾಮ ಕಾರಂತರು ಮಾತನಾಡಿ,’ನಾವು ಸಮ್ಮ ಊರಿನ ಶ್ರದ್ಧಾಕೇಂದ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮೂಲಕ ನಾವು, ನಮ್ಮ ದೇವರು, ನಮ್ಮ ಊರಿನ ಉನ್ನತಿಯಾಗುತ್ತದೆ. ಈ ಕಾರ್ಯಕ್ಕೆ ಶ್ರೀಗುರುಗಳ ಹಿರಿಯರ ಮಾರ್ಗದರ್ಶನ ಸದಾ ಅಗತ್ಯ’ ಎಂದರು. ಇನ್ನೋರ್ವ ಗೌರವಾಧ್ಯಕ್ಷರಾದ ಪದ್ಯಾಣ ತಿಮ್ಮಣ್ಣ ಭಟ್, ಅಧ್ಯಕ್ಷರಾದ ಅರವಿಂದ ಪದ್ಯಾಣ ಅವರು ಉಪಸ್ಥಿತರಿದ್ದರು. ದೇವಸ್ಥಾನದ ಆಡಳಿತ ಮೊಕ್ತೇಸರರಾದ ಸತ್ಯನಾರಾಯಣ ಭಟ್ ಸೇರಾಜೆ ಅವರು ಪ್ರಸ್ತಾವಿಕವಾಗಿ ಮಾತನಾಡಿ ಆಗಬೇಕಾದ ಅಭಿವೃದ್ಧಿ ಕಾರ್ಯಗಳ ಬಗ್ಗೆ ವಿವರಿಸಿ ಸ್ವಾಗತಿಸಿದರು. ಶ್ರೀನಿವಾಸ ಭಟ್ ಸೇರಾಜೆ ವಂದಿಸಿದರು. ದೀಪಶ್ರೀ ಮತ್ತು ವೈಷ್ಣವಿ ಪ್ರಾರ್ಥಿಸಿದರು. ಪ್ರತೀಕ್ಷಾ ಪದ್ಯಾಣ ಕಾರ್ಯಕ್ರಮ ನಿರೂಪಿಸಿದರು.