ಬಂಟ್ವಾಳ

ಸರಕಾರ ಚುನಾವಣೆಯಲ್ಲಿ ಘೋಷಣೆ ಮಾಡಿದಂತೆ 6 ಸಾವಿರ ರೂ ವೇತನ ನೀಡುವುದು ಸೇರಿದಂತೆ ಹಲವು ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಅಕ್ಷರ ದಾಸೋಹ ನೌಕರಿಂದ ಪ್ರತಿಭಟನೆ

ಬಂಟ್ವಾಳ : ಅಕ್ಷರ ದಾಸೋಹ ನೌಕರರಿಗೆ ರಾಜ್ಯ ಸರ್ಕಾರವು ವಿಧಾನಸಭಾ ಚುನಾವಣೆಯಲ್ಲಿ ಘೋಷಣೆ ಮಾಡಿದಂತೆ 6000 ವೇತನ ಹೆಚ್ಚಳ ಮಾಡಬೇಕೆಂದು ಹಾಗೂ ಇನ್ನಿತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಪ್ರಗತಿಪರ ಅಕ್ಷರ ದಾಸೋಹ ನೌಕರರ ಸಂಘ ( ಎ.ಐ.ಸಿ.ಸಿ.ಟಿ.ಯು ) ವತಿಯಿಂದ ಬಿ.ಸಿ.ರೋಡು ಮಿನಿವಿಧಾನಸೌಧದ ಮುಂದೆ ಪ್ರತಿಭಟ‌ನೆ ನಡೆಸಿ ತಹಶಿಲ್ದಾರರಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯನ್ನು ಉದ್ದೇಶಿಸಿ ಎ.ಐ.ಸಿ.ಸಿ.ಟಿ.ಯು ದ.ಕ ಜಿಲ್ಲಾ ಅದ್ಯಕ್ಷರಾದ  ರಾಮಣ್ಣ ವಿಟ್ಲ ಮಾತನಾಡಿ ನಮ್ಮ ದೇಶದ ಅಭಿವೃದ್ಧಿಗೆ ಶಿಕ್ಷಣ ಆರೋಗ್ಯ, ಉದ್ಯೋಗ ಹಾಗೂ ಆಹಾರ ಪೂರೈಸಲು ಬೇಕಾದ ಸಂಪನ್ಮೂಲವನ್ನು ಕೇಂದ್ರ ಸರ್ಕಾರವು ಸಂಪೂರ್ಣವಾಗಿ ಕಡೆಗಣಿಸಿದ್ದು . ದೇಶದ ದುಡಿಯುವ ಜನ ವಿಭಾಗದ ಬಿಸಿಯೂಟ ಯೋಜನೆಯನ್ನು ಕೇಂದ್ರ ಸರ್ಕಾರವು 2010 ರಿಂದ ಕಡೆಗಣಿಸುತ್ತಲೇ ಬಂದಿದೆ ರಾಜ್ಯದಲ್ಲಿ ಕೆಲಸದ ಒತ್ತಡ ಹೆಚ್ಚಳವಾಗಿದೆ.ಆದರೆ ಕೆಲಸಕ್ಕೆ ತಕ್ಕ ವೇತನ ಮಾತ್ರ ಸಿಗದೇ ನೌಕರರು ಸಂಕಷ್ಟದ ಪರಿಸ್ಥಿತಿಯಲ್ಲಿ ನರಳುವಂತೆ ಮಾಡಿದೆ. ಬಿಸಿಯೂಟ ನೌಕರರಿಗೆ ರಾಜ್ಯ ಸರ್ಕಾರವು ವಿಧಾನಸಭಾ ಚುನಾವಣೆಯಲ್ಲಿ ಘೋಷಣೆ ಮಾಡಿದಂತೆ 6000 ವೇತನ ಹೆಚ್ಚಳ ಮಾಡಬೇಕೆಂದು ಒತ್ತಾಯಿಸಿದರು.

ಎ.ಐ.ಸಿ.ಸಿ.ಟಿ.ಯು ರಾಜ್ಯ ಸಮಿತಿ ಗೌರವಾದ್ಯಕ್ಷರಾದ ಕಾಮ್ರೇಡ್ ಮೋಹನ್ .ಕೆ.ಇ , ಎ.ಐ.ಸಿ.ಸಿ.ಟಿ.ಯು ತಾಲೂಕು ಮುಖಂಡರಾದ ಕಾಮ್ರೇಡ್ ರಾಜಾ ಚೆಂಡ್ತಿಮಾರ್ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು. ಎ.ಐ.ಸಿ.ಸಿ.ಟಿ.ಯು ಮುಖಂಡರಾದ ಕಾಮ್ರೇಡ್ ಸಜೇಶ್ ವಿಟ್ಲ, ಕಾಮ್ರೇಡ್ ಸುಲೈಮಾನ್ ಕೆಳಿಂಜ,ಅಕ್ಷರ ದಾಸೋಹ ಸಂಘಟನೆಯ ತಾಲೂಕು ಅದ್ಯಕ್ಷರಾದ ಜಯಶ್ರೀ ಆರ್.ಕೆ,ಕಾರ್ಯದರ್ಶಿ ವಾಣಿಶ್ರೀ ಕನ್ಯಾನ, ಉಪಾದ್ಯಕ್ಷರುಗಳಾದ ವಿನಯ ನಡುಮೊಗರು, ಸೇವಂತಿ ಮುಂತಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಬೇಡಿಕೆಗಳು:

1. 2010 ರಿಂದ ಕೇಂದ್ರ ಸರ್ಕಾರ ಯಾವುದೇ ಗೌರವಧನ ಹೆಚ್ಚಳ ಮಾಡಿಲ್ಲವಾದ್ದರಿಂದ ಕೇಂದ್ರ ಸರ್ಕಾರವು 26.000 ರೂ.ಗಳಿಗೆ ಗೌರವಧನ ಹೆಚ್ಚಿಸಬೇಕು. ಹೆಚ್ಚಿಸುವ ತನಕ ಕೇರಳ ಪಾಂಡಿಚೇರಿ, ತಮಿಳುನಾಡು ಮತ್ತು ಹರಿಯಾಣ ರಾಜ್ಯದಲ್ಲಿರುವಂತೆ 7 ಸಾವಿರದಿಂದ 12 ಸಾವಿರ ವೇತನ ಕೊಡಬೇಕು

2. ಈಗಾಗಲೇ ಹಣಕಾಸು ಇಲಾಖೆ ಒಪ್ಪಿಕೊಂಡಿರುವ ನಿವೃತ್ತಿಯಾದವರಿಗೆ ಜಾರಿ ಆಗಬೇಕು. ಇಡಿಗಂಟು ಹಣ ಕೂಡಲೇ

3. ಸಾದಿಲ್ವಾರು ಜಂಟಿ ಖಾತೆ ಜವಾಬ್ದಾರಿಯನ್ನು ಮುಖ್ಯ ಮಾಡಿರುವ ಕ್ರಮ ವಾಪಾಸ್ಸಾಗಬೇಕು. ಸಾದಿಲ್ವಾರು ಖಾತೆ ಅಡುಗೆ ನೌಕರರಿಂದ SDMC ಗೆ ವರ್ಗಾವಣೆ ಮೊದಲಿನಂತೆಯೇ ಬದಲಾಯಿಸಬೇಕು.

4. ಅಡುಗೆ ಕೇಂದ್ರಗಳು ಸುಸಜ್ಜಿತವಾಗಿ ಇಲ್ಲದ ಕಡೆ ಉತ್ತಮ ಅಡುಗೆ ಕೇಂದ್ರಗಳನ್ನು ನಿರ್ಮಿಸಬೇಕು ಹಾಗೂ ಕ್ರಿಮಿ ಕೀಟಗಳು ಬರದ ರೀತಿಯಲ್ಲಿ ಅಡುಗೆ ಕೇಂದ್ರಗಳ ಸುತ್ತ ಮುತ್ತ ಸೂಕ್ತ ವಾತಾವರಣ ಸೃಷ್ಟಿಸಬೇಕು.

5. ಉತ್ತರ ಪ್ರದೇಶ ಮತ್ತು ಪಂಜಾಬ್ ರಾಜ್ಯದ ಮಾನ್ಯ ಹೈಕೋರ್ಟ್ ತೀರ್ಮಾನಿಸಿದಂತೆ ವರ್ಷದ 12 ತಿಂಗಳು ಕೆಲಸ ಮತ್ತು ಕನಿಷ್ಟ ಕೂಲಿ ಜಾರಿಯಾಗಬೇಕು.

6. MDM ಯೋಜನೆಗೆ ಪ್ರತ್ಯೇಕ ನಿರ್ದೇಶನಾಲಯ ಮಾಡಬೇಕು.

7. ಕ್ಲಸ್ಟ‌ರ್ ಸಭೆಗಳನ್ನು ಕಡ್ಡಾಯವಾಗಿ ಪ್ರತಿ ಜಿಲ್ಲೆಯಲ್ಲಿ ಮಾಡಬೇಕಿದೆ.

8. ಕೆಲಸದ ಅವಧಿಯನ್ನು 4 ಗಂಟೆಯಿಂದ 6 ಗಂಟೆಗೆ ಅಕ್ಷರ ದಾಸೋಹ ಕೈಪಿಡಿಯಲ್ಲಿ ಬದಲಾಯಿಸಬೇಕು.

9. ಅಕ್ಷರ ದಾಸೋಹ ಯೋಜನೆಯನ್ನು ಸಂಪೂರ್ಣವಾಗಿ ಶಿಕ್ಷಣ ಇಲಾಖೆಯಡಿಯಲ್ಲಿಯೇ ನಡೆಯಬೇಕು.

10. ಕೆಲಸದ ಸ್ಥಳದಲ್ಲಿ ಮರಣ ಹೊಂದಿದರೆ 25 ಲಕ್ಷ ರೂ.ಗಳ ಪರಿಹಾರ ಕೊಡಬೇಕು.

11. ಮಾರ್ಚ್ 31 2024 ಕ್ಕೆ ಬಿಸಿಯೂಟ ನೌಕರರನ್ನು ಬಿಡುಗಡೆಗೊಳಿಸಲು ಹೊರಡಿಸಿರುವ ಸುತ್ತೋಲೆಯನ್ನು ಬದಲಾಯಿಸಿ ಎಪ್ರಿಲ್ 10,2025ಕ್ಕೆ ಮರು ಆದೇಶ ನೀಡಬೇಕು.

12. 2023ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಘೋಷಣೆ ಮಾಡಿದ 6000ರೂ.ಗಳ ಗೌರವಧನ ಹೆಚ್ಚಿಸಬೇಕು.

13. ಹಾಜರಾತಿ ಆಧಾರದಲ್ಲಿ ಕೆಲಸದಿಂದ ತೆಗೆಯುವ ಕ್ರಮ ಹಿಂಪಡೆಯಬೇಕು.

14. ಬಿಸಿಯೂಟ ಯೋಜನೆಯನ್ನು ಖಾಯಂ ಮಾಡಬೇಕು ಖಾಯಂ ಮಾಡುವ ತನಕ 45 ಮತ್ತು 46ನೇ ಭಾರತೀಯ ಕಾರ್ಮಿಕ ಸಮ್ಮೇಳನದ ಶಿಫಾರಸ್ಸಿನಂತೆ ಇವರನ್ನು ಕಾರ್ಮಿಕರೆಂದು ಗುರುತಿಸಬೇಕು.

15. ಬಿಸಿಯೂಟ ಯೋಜನೆಯನ್ನು ಯಾವುದೇ ಖಾಸಗಿ ಸಂಸ್ಥೆಗಳಿಗೆ ಯಾವುದೇ ಸ್ವರೂಪದ ಜವಾಬ್ದಾರಿ ಕೊಡಬಾರದು.

16. ಶಾಲೆಗಳಲ್ಲಿ ಗೂಪ್ ಡಿ ನೌಕರರು ಇಲ್ಲರಿರುವುದರಿಂದ ಈ ನೌಕರರಿಂದಲೇ ಶಾಲಾ ಸ್ವಚ್ಚತೆ, ಕೈತೋಟ ನಿರ್ವಹಣೆ ಶಾಲಾ ಸಮಯದ ಗಂಟೆ ಬಾರಿಸುವುದು ಇನ್ನಿತರ ಕೆಲಸ ನೀಡಿ ಈ ನೌಕರರಿಗೆ ಶಾಲಾ ಸಿಬ್ಬಂದಿಗಳೆಂದು ನೇಮಿಸಿ ನೇಮಕಾತಿ ಆದೇಶ ನೀಡಬೇಕು.

17. ಬೇಸಿಗೆ ಮತ್ತು ದಸರಾ ರಜೆಗಳ ವೇತನ ವನ್ನು ಕಡ್ಡಾಯವಾಗಿ ನೀಡಬೇಕು.

18. ಶಾಲಾ ಅವಧಿಯ ನಂತರ ನರೆಗಾ ಯೋಜನೆಯಡಿ ಶಾಲಾ ಕೈತೋಟದ ಕೆಲಸ ಇವರಿಗೆ ನೀಡಿ ಈ ಯೋಜನೆಯಿಂದ ವೇತನ ನೀಡಬೇಕು.

19. ಅಪಘಾತದಲ್ಲಿ ಮರಣ ಹೊಂದಿದ ಅಡುಗೆ ಸಿಬ್ಬಂದಿಗಳ ಕುಟುಂಬದವರಿಗೆ ಕೆಲಸ ನೀಡಬೇಕು.

20. ನಿವೃತ್ತಿ ಹೊಂದಿದ ಅಡುಗೆ ಸಿಬ್ಬಂದಿಗಳ ಕುಟುಂಬದವರಿಗೆ ಕೆಲಸ ನೀಡಬೇಕು.

21. ಪ್ರತಿ ಶಾಲೆಯಲ್ಲಿ ಕನಿಷ್ಟ ಎರಡು ಜನ ಅಡುಗೆಯವರು ಇರಲೇಬೇಕು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ