ಯಕ್ಷಗಾನ

ಕಲಾಶ್ರೀಧರ – ಯಕ್ಷಗಾನ ಹಿರಿಯ ಕಲಾವಿದ ಕುಂಬಳೆ ಶ್ರೀಧರ ರಾವ್ ಬದುಕಿನ ಆಪ್ತ ಪುಟಗಳಿವು

ಯಕ್ಷಗಾನ ಕಲಾವಿದ ಕುಂಬಳೆ ಶ್ರೀಧರ ರಾಯರ ಸ್ಮೃತಿ ಕೃತಿ – ಕಲಾಶ್ರೀಧರ ಪುಸ್ತಕ ವಿಮರ್ಶೆ

ಜಾಹೀರಾತು

ಆರು ದಶಕಗಳಿಗೂ ಮಿಕ್ಕಿ ಯಕ್ಷಗಾನದಲ್ಲಿ ಸೇವೆ ಸಲ್ಲಿಸಿ ಪರಂಪರೆಯ ವೇಷಧಾರಿಯಾಗಿ ಸ್ತ್ರೀ, ಪುರುಷ ವೇಷಗಳನ್ನು ಸಮರ್ಥವಾಗಿ ನಿಭಾಯಿಸಿದ ಹಿರಿಯ ಯಕ್ಷಗಾನ ಕಲಾವಿದರ ಕುರಿತ ಕೃತಿ. ಇರಾ, ಮೂಲ್ಕಿ, ಕೂಡ್ಲು, ಕರ್ನಾಟಕ ಹಾಗೂ ಧರ್ಮಸ್ಥಳ ಮೇಳದಲ್ಲಿ ಸುದೀರ್ಘ ಕಾಲ ಕೆಲಸ ಮಾಡಿದ್ದ ಕುಂಬಳೆ ಶ್ರೀಧರ ರಾವ್ ಅವರು 2024ರ ಜುಲೈನಲ್ಲಿ ನಿಧನ ಹೊಂದಿದರು. ಅವರ ಹುಟ್ಟೂರು ಕುಂಬಳೆಯಲ್ಲಿ ಕೃತಿ ಬಿಡುಗಡೆಗೊಂಡಿತು. ಸಂಪಾದಕರು: ನಾ.ಕಾರಂತ ಪೆರಾಜೆ ಪ್ರಕಟಣಾ ವರ್ಷ: 2024, ಪ್ರಕಾಶನ: ಕುಂಬಳೆ ಶ್ರೀಧರ ರಾವ್ ಸ್ಮೃತಿಕೃತಿ ಸಮಿತಿ, 19, ನೇಸರ, ಎರಡನೇ ಕ್ರಾಸ್, ಸೀತಪ್ಪ ಲೇಔಟ್, ಮನೋರಾಯಣಪಾಳ್ಯ, ಆರ್. ಟಿ. ನಗರ, ಬೆಂಗಳೂರು  560032. ಸಂಪರ್ಕ: 9449566715, ಪುಟಗಳು :240,   ಬೆಲೆ: ಸದುಪಯೋಗ

https://www.opticworld.net/

  • ಹರೀಶ ಮಾಂಬಾಡಿ

‘’ನನ್ನ ಕಲಾಬದುಕು ಕತೆಯಾಗಬಾರದು, ಅದು ಹೊಸ ತಲೆಮಾರಿಗೆ ನೋವನ್ನು ಕೊಡಕೂಡದು’’

ಗ್ರಂಥ ಸಂಪಾದನೆ ಸಂದರ್ಭ ವಿವರಗಳನ್ನು ಪಡೆಯಲು ಮಾತನಾಡಿಸಿದ ಲೇಖಕ, ಕಲಾವಿದ ನಾ.ಕಾರಂತ ಪೆರಾಜೆ ಅವರೊಂದಿಗೆ ಹಿರಿಯ ಯಕ್ಷಗಾನ ಕಲಾವಿದ ಕುಂಬಳೆ ಶ್ರೀಧರ ರಾವ್ ಹೇಳಿದ್ದ ಮಾತಿದು.

2024ರ ಜುಲೈ 5ರಂದು ನಿಧನ ಹೊಂದಿದ ಶ್ರೀಧರ ರಾವ್ ಅವರ ಸ್ಮರಣಾರ್ಥ ಅವರಿಗಿಷ್ಠದ ಊರು ಕುಂಬಳೆಯಲ್ಲೇ ಕಲಾ ಶ್ರೀಧರ ಎಂಬ ಸ್ಮೃತಿ-ಕೃತಿ ಕಳೆದ ವರ್ಷಾಂತ್ಯದಲ್ಲಿ ಬಿಡುಗಡೆ ಆಗಿ ಸಹೃದಯರ ಕೈಸೇರಿದೆ.

ಕುಂಬಳೆ ಶ್ರೀಧರ ರಾವ್ ಅವರ ಹಿರಿಯ ಪುತ್ರ ಹಾಗೂ ಪತ್ರಕರ್ತ ಮಿತ್ರ, ಸಹೋದ್ಯೋಗಿ ಗಣೇಶ್ ಪ್ರಸಾದ್ ಕುಂಬಳೆ ಅವರು ಈ ಪುಸ್ತಕವನ್ನು ನೀಡಿದಾಗ, ಅದರಲ್ಲಿ ಬೆಲೆ ಸದುಪಯೋಗ ಎಂದಿತ್ತು. ಕಾರಣ ಕೇಳಿದೆ. ಪುಸ್ತಕವನ್ನು ಓದುವುದೇ ಪುಸ್ತಕಕ್ಕೆ ನೀಡುವ ಬೆಲೆ ಎಂದು ಗಣೇಶ್ ಹೇಳಿದರು. ಹಲವು ಬಾರಿ ಪುಸ್ತಕಗಳು ಓದದೇ ಅದರಲ್ಲಿರುವ ಅಮೂಲ್ಯ ವಿಚಾರಗಳು ಹಾಗೆಯೇ ಉಳಿಯುವುದುಂಟು. ಆದರೆ ಈ ಪುಸ್ತಕ ಹಾಗಲ್ಲ, ಓದಿಸಿಕೊಂಡು ಹೋಯಿತು, ಅಷ್ಟೇ ಅಲ್ಲ, ಆಪ್ತವೂ ಆಯಿತು.

ದಶಕಗಳ ವಿವರವನ್ನು ಹೊಸ ತಂತ್ರಜ್ಞಾನದೊಂದಿಗೆ ನೀಡಿರುವ ಪುಸ್ತಕ ಹೊರಬರಲು ಇರುವ ಶ್ರಮವೆಲ್ಲಾ ಅಂದವಾದ ವಿನ್ಯಾಸ (ಜ್ಞಾನೇಶ್ ವಿಶ್ವಕರ್ಮ) ಸುಂದರ ಚಿತ್ರಗಳು (ಕಿರಣ್ ವಿಟ್ಲ, ನಟೇಶ್ ವಿಟ್ಲ, ಮಧುಸೂಧನ ಅಲೆವೂರಾಯ, ಶರ್ಮ ನೀರ್ಚಾಲು ಹಾಗೂ ಸಂಗ್ರಹದ ಚಿತ್ರಗಳು) ಜೊತೆಗೆ ಅವರು ಅಭಿನಯಿಸಿದ ಯಕ್ಷಗಾನದ ತುಣುಕುಗಳನ್ನು ತೋರಿಸುವ ಕ್ಯೂ ಆರ್ ಕೋಡ್ ಗಳು ಪುಟದಲ್ಲಿರುವುದನ್ನು ಮೊಬೈಲ್ ನಲ್ಲಿ ಸ್ಕ್ಯಾನ್ ಮಾಡಿ ನೋಡುವಂಥ ವ್ಯವಸ್ಥೆ ಕಲ್ಪಿಸಿದ್ದು, ಡಿಜಿಟಲ್ ರೂಪದಲ್ಲಿಯೂ ಶ್ರೀಧರಣ್ಣನ ಅಭಿನಯವನ್ನು ಕಣ್ಣಾರೆ ನೋಡಿದಂತಾಗುತ್ತದೆ.

ಮೌನಿ ಶ್ರೀಧರಣ್ಣನ ಅಂತರಂಗ ಪುಟಗಳು:

ಶ್ರೀಧರ ರಾಯರ ಈ ನೆನಪಿನ ಕೃತಿ ಪೂರ್ಣವಲ್ಲ ಎಂದು ಸಂಪಾದನೆ ಮಾಡಿದ ನಾ.ಕಾರಂತ ಪೆರಾಜೆಯವರು ಹೇಳಿದರೂ ಅವರ ಆಪ್ತೇಷ್ಟರನ್ನು ಸಂಪರ್ಕಿಸಿ ಬರೆಸಿದ ಲೇಖನಗಳು, ಮೌನಿಯಾಗಿಯೇ ಇದ್ದ ಶ್ರೀಧರ ರಾಯರನ್ನು ಮಾತನಾಡಿಸಿ, ಅವರ ಅನುಭವಗಳನ್ನು ಹೆಕ್ಕಿ ಅಕ್ಷರರೂಪಕ್ಕಿಳಿಸಿದ ಜೀವನಗಾಥೆ ಓದಿದಾಗ ಶ್ರೀಧರ ರಾವ್ ಕುರಿತು ಗೊತ್ತಿಲ್ಲದವರೂ ಅವರ ಕುಟುಂಬದ ಸದಸ್ಯರಲ್ಲೊಬ್ಬರಾಗುತ್ತಾರೆ.

ಅದರಲ್ಲೂ ಪತ್ನಿ, ಸಹೋದರ ಸಹೋದರಿ, ಮಕ್ಕಳು ಬರೆದದ್ದು ಮತ್ತಷ್ಟು ನಮ್ಮನ್ನು ಆ ಕುಟುಂಬದೊಂದಿಗೆ ಜೋಡಿಸುತ್ತದೆ.ಶ್ರೀಧರಣ್ಣನ ಬಾಲ್ಯ, ಯೌವನ, ರಂಗಸ್ಥಳ, ಚೌಕಿ, ಪಾತ್ರನಿರ್ವಹಣೆಯ ಸ್ಮೃತಿಯ ಜೊತೆಗೆ ಸಂಬಂಧಿಕರು, ಜತೆಗಾರರ ಮಾತುಗಳು ಹೆಚ್ಚು ಆಪ್ತವಾಗುತ್ತವೆ. ನಾಲ್ಕೈದು ದಶಕಗಳನ್ನು ಕಂಡ ಹೆಚ್ಚು ಕಮ್ಮಿ, ಪ್ರತಿಯೊಬ್ಬ ಯಕ್ಷಗಾನ ವೃತ್ತಿಕಲಾವಿದನ ಬದುಕು ಹೀಗೆಯೇ ಇತ್ತು ಎಂಬುದನ್ನು ತೋರಿಸಿಕೊಡುತ್ತದೆ, ಅಪ್ರಯತ್ನಪೂರ್ವಕವಾಗಿ ಇಂದಿನ ಮತ್ತು ಹಿಂದಿನ ಚೌಕಿ, ರಂಗಸ್ಥಳ ಹಾಗೂ ಕಲಾವಿದನ ಜೀವನಮಟ್ಟದ ಹೋಲಿಕೆಯನ್ನೂ ಮನದೊಳಗೆ ಮಾಡುವಂತೆ ಗ್ರಂಥ ಪ್ರೇರೇಪಿಸುತ್ತದೆ. ಹೀಗಾಗಿ ಸಂಪಾದಿಸಿದ ನಾ.ಕಾರಂತ ಪೆರಾಜೆ ಹಾಗೂ ಗ್ರಂಥ ಹೊರಬರಬೇಕು ಎಂದು ಶ್ರಮಿಸಿದ ಶ್ರೀಧರಣ್ಣನ ಒಡಹುಟ್ಟಿದವರು, ಮಕ್ಕಳು, ಒಡನಾಡಿಗಳ ಪ್ರಯತ್ನಕ್ಕೆ ಶರಣು.

ರಂಭಾ ರೂಪರೇಖ ಪ್ರಸಂಗದಲ್ಲಿ ಭಾಗೀರಥಿ ಎಂಬ ಪಾತ್ರ ಹುಟ್ಟಿದ್ದು, ಪ್ರಹ್ಲಾದ ಪಾತ್ರ ನಿರ್ವಹಣೆಯಲ್ಲಿ ಅಗರಿಯವರ ಪ್ರೋತ್ಸಾಹ, ಸುಂದರ ರಾವ್ ಅವರನ್ನು ನೋಡಿ ಶ್ರೀಧರರಿಗೂ ಕಲಾವಿದನಾಗಬೇಕು ಏಂಬ ಆಸೆ ಹುಟ್ಟಿದ್ದು, ತಂದೆ, ಅಣ್ಣನ ಪ್ರೋತ್ಸಾಹ, ವೀರೇಂದ್ರ ಹೆಗ್ಗಡೆ, ಹರ್ಷೇಂದ್ರ ಕುಮಾರ್ ಅವರ ಮಾರ್ಗದರ್ಶನ..ಹೀಗೆ ಕುಂಬಳೆ ಶ್ರೀಧರ ರಾವ್ ವೃತ್ತಿಬದುಕಿನ ಹಲವು ಮಜಲುಗಳನ್ನು ಇದು ಕಟ್ಟಿಕೊಡುತ್ತದೆ. ಶ್ರೀಧರ ರಾವ್ ಅವರ ಸುದೀರ್ಘ ಕಲಾಬದುಕಿನ ಕುರಿತು ಗಣ್ಯರು ಆಡಿರುವ ನಲ್ನುಡಿಗಳು ಪುಸ್ತಕದ ಮೆರುಗನ್ನು ಹೆಚ್ಚಿಸಿವೆ.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.